ಸಾರಾಂಶ
ಕಾರಟಗಿ ತಾಲೂಕಿನ ಸಿದ್ದಾಪುರ, ಉಳೇನೂರು, ಬೆನ್ನೂರು ಸೇರಿದಂತೆ ತಾಲೂಕಿನ ವಿವಿಧ ಹೊಲ ಗದ್ದೆಗಳಲ್ಲಿ ಬೆಳೆದಿದ್ದ 700 ರಿಂದ 800 ಹೆಕ್ಟರ್ ಪ್ರದೇಶ ಭತ್ತದ ಬೆಳೆ ಹಾನಿ
ಗಂಗಾವತಿ: ತಾಲೂಕಿನಾದ್ಯಂತ ಸುರಿದ ಭಾರಿ ಬಿರುಗಾಳಿ, ಧಾರಾಕಾರ ಮಳೆಯಿಂದ ಲಕ್ಷಾಂತರ ಬೆಲೆಯ ಭತ್ತಕ್ಕೆ ಹಾನಿಯಾಗಿದೆ. ಗುರುವಾರ ಬೆಳಗ್ಗೆ 4 ಗಂಟೆಯಿಂದ ನಿರಂತರ ಮಳೆ ಸುರಿದಿದ್ದು, ಸಿಡಿಲು ಬಿರುಗಾಳಿಯಿಂದ ತಾಲೂಕಿನ ವಿವಿಧ ಗ್ರಾಮಗಳ ರೈತರು ಬೆಳೆದ ಭತ್ತ ನೆಲಕಚ್ಚಿದೆ.
ಕಾರಟಗಿ ತಾಲೂಕಿನ ಸಿದ್ದಾಪುರ, ಉಳೇನೂರು, ಬೆನ್ನೂರು ಸೇರಿದಂತೆ ತಾಲೂಕಿನ ವಿವಿಧ ಹೊಲ ಗದ್ದೆಗಳಲ್ಲಿ ಬೆಳೆದಿದ್ದ 700 ರಿಂದ 800 ಹೆಕ್ಟರ್ ಪ್ರದೇಶ ಭತ್ತದ ಬೆಳೆ ಹಾನಿಯಾಗಿದೆ. ಕಳೆದ ಮೂರು ತಿಂಗಳಿನಿಂದ ರೈತರು ಭತ್ತ ನಾಟಿ ಮಾಡಿ ಲಕ್ಷಾಂತರ ಬೆಲೆಯ ರಸಗೊಬ್ಬರ ಸೇರಿದಂತೆ ಕ್ರಿಮಿನಾಶ ಸಿಂಪರಣೆ ಮಾಡಿ ಭತ್ತ ರಕ್ಷಣೆ ಮಾಡಿದ್ದರು. ಇನ್ನು 25 ದಿನ ಕಳೆದಿದ್ದರೆ ಭತ್ತದ ಬೆಳೆ ಕೈ ಸೇರುತ್ತಿತ್ತು, ಆರ್ ಎನ್ ಆರ್ ಮಾದರಿಯ ಬೆಳೆ ಇದ್ದು, ಈಗ ನೆಲಕಚ್ಚಿದ್ದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಮನೆಗಳಿಗೆ ಹಾನಿ:
ಧಾರಾಕಾರ ಮಳೆ ಸುರಿದ ಪರಿಣಾಮ ತಾಲೂಕಿನಲ್ಲಿ 3ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ. ಉಡಮಕಲ್ 1, ಭಟ್ಟರ ಹಂಚಿನಾಳ-1, ಹಣವಾಳ 1 ಮನೆಗಳು ಭಾಗಶಃ ಹಾನಿಯಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದ್ದಾರೆ.ವೆಂಕಟಗಿರಿ ಹೋಬಳಿಯಲ್ಲಿ 10.7 ಮಿ ಮೀ ಮಳೆಯಾಗಿದ್ದು, ಗಂಗಾವತಿಯಲ್ಲಿ 25 ಮಿಮೀ ಮಳೆಯಾಗಿದೆ, ವಡ್ಡರಹಟ್ಟಿಯಲ್ಲಿ 18.1 ಮಿಮೀ ಮಳೆಯಾಗಿದೆ. ಪ್ರಗತಿನಗರದಲ್ಲಿ 28.3 ಮಿಮೀ ಮಳೆ ಬಿದ್ದಿದೆ.
ಗಂಗಾವತಿ ನಗರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಧಾರಾಕಾರ ಮಳೆ ಬಿರುಗಾಳಿ ಬೀಸಿದ ಪರಿಣಾಮವಾಗಿ ಭತ್ತ ನೆಲಕಚ್ಚಿದೆ. ಈ ಬೆಳೆ ಹಾನಿಯಾದ ಬಗ್ಗೆ ಕೃಷಿ ಇಲಾಖೆಯಿಂದ ಸರ್ವೇ ಕಾರ್ಯ ಮಾಡಲಾಗುತ್ತಿದೆ. ಭತ್ತ ನೆಲಕಚ್ಚಿದ್ದರೂ ಸಹ 2-3 ದಿನಗಳ ನಂತರ ಮತ್ತೆ ಭತ್ತ ಮೇಲಕ್ಕೆ ಬರುತ್ತದೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಗಂಗಾವತಿ ಎಡಿಎ ಡಾ. ಅಭಿಲಾಷ ತಿಳಿಸಿದ್ದಾರೆ.ಗಂಗಾವತಿ ನಗರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಬಿರುಗಾಳಿ ಬೀಸಿದ ಪರಿಣಾಮವಾಗಿ ಗದ್ದೆಯಲ್ಲಿರುವ ಭತ್ತ ನೆಲ ಕಚ್ಚಿದೆ, ಸುಮಾರು 600 ರಿಂದ 700 ಹೇಕ್ಟರ್ ಪ್ರದೇಶ ಬೆಳೆ ಹಾನಿಯಾಗಿದೆ. ಸರ್ಕಾರ ಕೂಡಲೆ ಪರಿಹಾರ ಘೋಷಿಸಬೇಕು ಎಂದು ಜಂಗಮರ ಕಲ್ಗುಡಿ ಪ್ರಗತಿಪರ ರೈತ ವೈ.ಆನಂದರಾವ್ ತಿಳಿಸಿದ್ದಾರೆ.