ಸಾರಾಂಶ
ಕಾರವಾರ: ಭಾರಿ ದುರಂತ ಸಂಭವಿಸಿದ ಅಂಕೋಲಾ ಶಿರೂರು ಸೇರಿದಂತೆ ಗುಡ್ಡ ಕುಸಿದಲ್ಲೆಲ್ಲ ಹೆದ್ದಾರಿಯಿಂದ ಮಣ್ಣು, ಕಲ್ಲು, ತೆರವು ಕಾರ್ಯಾಚರಣೆ ಮುಂದುವರಿದಿದೆ. ಶಿರೂರು ಗುಡ್ಡ ಕುಸಿತದಿಂದ ಉಳುವರೆ ಊರಿಗೆ ಊರೇ ತತ್ತರಿಸಿದೆ. ಜಿಲ್ಲಾದ್ಯಂತ ಮಳೆ ಇಳಿಮುಖವಾಗಿದೆ. ಕಾಳಜಿ ಕೇಂದ್ರಗಳಿಂದ ಜನತೆ ಮನೆಯತ್ತ ಮುಖ ಮಾಡಿದ್ದಾರೆ. ಆದರೆ ಇಡೀ ಜಿಲ್ಲೆ ಆಘಾತದಿಂದ ಇನ್ನೂ ಹೊರಕ್ಕೆ ಬಂದಿಲ್ಲ. ಶಿರೂರು ಗುಡ್ಡ ಕುಸಿದಲ್ಲಿ ಮಣ್ಣಿನಡಿ ಮಂಗಳವಾರ ನಾಲ್ಕು ಮೃತದೇಹಗಳು ದೊರೆತಿದ್ದು, ಬುಧವಾರ ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ ಮತ್ತು ರೋಷನ್ ನಾಯ್ಕ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಶಿರೂರಿನ ಗುಡ್ಡ ಕುಸಿತದಿಂದ ಗಂಗಾವಳಿ ನದಿಯ ನೀರು ಸುನಾಮಿಯಂತೆ ಎದ್ದು ಇನ್ನೊಂದು ಪಕ್ಕದಲ್ಲಿರುವ ಉಳುವರೆಯ ಮನೆಗಳಿಗೆ ಅಪ್ಪಳಿಸಿದಾಗ 9 ಮನೆಗಳು ಕುಸಿದು ಬಿದ್ದಿವೆ. ಅಲ್ಲಿನ 28 ಜನರು ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆ ನಾಪತ್ತೆಯಾಗಿದ್ದಾಳೆ. ಉಳುವರೆಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿಲ್ಲ ಎಂದು ಅಲ್ಲಿನ ಜನತೆ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಶಿರೂರಿನಲ್ಲಿ ಗುಡ್ಡ ಕುಸಿತದಿಂದ ಚತುಷ್ಪಥ ಹೆದ್ದಾರಿ ಮೇಲೆ ಬಿದ್ದ ಮಣ್ಣು ತೆರವು ಕಾರ್ಯ ನಡೆಯುತ್ತಿದ್ದು, ವಾಹನಗಳ ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಜಿಲ್ಲಾಡಳಿತ, ಸ್ಥಳೀಯ ಜನರು ಸೇರಿದಂತೆ ಜೆಸಿಬಿ, ಹಿಟಾಚಿ ಮತ್ತಿತರ ಸಾಧನಗಳ ಮೂಲಕ ಮಣ್ಣು ತೆರವು ನಡೆಯುತ್ತಿದೆ. ಇನ್ನು ಮಣ್ಣಿನಡಿ ಸಿಲುಕಿರಬಹುದಾದ ಅಥವಾ ನದಿಯಲ್ಲಿ ಕೊಚ್ಚಿ ಹೋಗಿರುವ ಜನರ ಪತ್ತೆ ಕಾರ್ಯವೂ ಮುಂದುವರಿದಿದೆ.
ಕಾರವಾರ- ಅಂಕೋಲಾ ನಡುವೆ ಚತುಷ್ಪಥ ಹೆದ್ದಾರಿಯಲ್ಲಿ ತುಂಬಿದ್ದ ನೀರು ಇಳಿದಿದ್ದು, ವಾಹನ ಸಂಚಾರ ಆರಂಭವಾಗಿದೆ. ಕಾರವಾರ ಇಳಕಲ್ ಹೆದ್ದಾರಿಯಲ್ಲಿ ಕಡವಾಡ ಮಂದ್ರಾಳಿ ಬಳಿ ಕುಸಿದ ಗುಡ್ಡ ತೆರವು ಕಾಮಗಾರಿ ನಡೆಯುತ್ತಿದೆ. ಹೊನ್ನಾವರ- ಬೆಂಗಳೂರು ಹೆದ್ದಾರಿಯಲ್ಲಿ ಭಾಸ್ಕೇರಿ ಸಮೀಪ ಗುಡ್ಡ ಕುಸಿದಿದ್ದು, ಆ ಸ್ಥಳದಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಣ್ಣು ತೆರವು ಕಾಮಗಾರಿ ಮುಂದುವರಿದಿದೆ.ಕುಮಟಾ ಶಿರಸಿ ನಡುವಿನ ಮಾರ್ಗದಲ್ಲೂ ರಾಗಿ ಹೊಸಳ್ಳಿ ಬಳಿ ಗುಡ್ಡ ಕುಸಿತದಿಂದ ರಸ್ತೆ ಬಂದಾಗಿದ್ದು, ಆ ಮಾರ್ಗವೂ ಇನ್ನೂ ಸಂಚಾರಕ್ಕೆ ಮುಕ್ತಗೊಂಡಿಲ್ಲ. ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರಗಳಲ್ಲಿ ಬುಧವಾರ ಮಳೆಯ ಪ್ರಮಾಣದಲ್ಲಿ ತೀವ್ರ ಇಳಿಮುಖವಾಗಿದೆ. ಅಘನಾಶಿನಿ, ಗಂಗಾವಳಿ, ಚಂಡಿಕಾ, ಗುಂಡಬಾಳ, ಭಾಸ್ಕೇರಿ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಹೀಗಾಗಿ ತುಂಬಿದ ನೀರು ಖಾಲಿಯಾಗುತ್ತಿದೆ. ಜಲಾವೃತವಾಗಿದ್ದ ಮನೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಆದರೆ ಕೆಲವು ಮನೆಗಳು ಇನ್ನೂ ವಾಸಕ್ಕೆ ಯೋಗ್ಯವಾಗಿಲ್ಲ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾಗಳಲ್ಲೂ ಮಳೆ ಇಳಿಮುಖವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿ, ಜೀವಹಾನಿಯಾದ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ. ಗುಡ್ಡ ಕುಸಿತಕ್ಕೆ ಕಾರಣವಾದ ಐಆರ್‌ಬಿ ಕಂಪನಿ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಜು. 18ರ ತನಕ ರೆಡ್ ಅಲರ್ಟ ಘೋಷಿಸಿರುವುದರಿಂದ ಮತ್ತೆ ಧೋ ಎಂದು ಮಳೆ ಸುರಿದರೆ ಹೇಗೆಂಬ ಚಿಂತೆ ಜನರನ್ನು ಕಾಡುತ್ತಿದೆ.