ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾದ್ಯಂತ ಭಾನುವಾರ ಕೂಡ ಮಳೆ ಗಾಳಿ ಮುಂದುವರಿದ ಹಿನ್ನೆಲೆಯಲ್ಲಿ ಮರ ಬಿದ್ದು ಅಪಾರ ಮನೆಗಳಿಗೆ ಹಾನಿಯಾಗಿದೆ. ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಹಾರಂಗಿ ಜಲಾಶಯದಿಂದ ಸುಮಾರು 25 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಕೊಂಚ ಇಳಿಮುಖವಾಗಿದ್ದು, ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆಯಾಗಿದೆ.
ಭಾರಿ ಮಳೆಗೆ ಸೋಮವಾರಪೇಟೆ- ಸುಬ್ರಮಣ್ಯ ಸಂಪರ್ಕಿಸುವ ರಸ್ತೆಯಲ್ಲಿ ಮಣ್ಣು ಕುಸಿತಗೊಂಡಿದೆ. ಕಳೆದ ವರ್ಷವೂ ಇದೇ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿತ್ತು. ಇದೀಗ ವಾಹನ ಸವಾರರು ಆತಂಕದಲ್ಲಿ ಈ ಮಾರ್ಗದಲ್ಲಿ ಓಡಾಡುತ್ತಿದ್ದಾರೆ.ಸೋಮವಾರಪೇಟೆ -ಪುಷ್ಪಗಿರಿ - ಮಲ್ಲಳ್ಳಿ - ಬಿಸ್ಲೆ ಘಾಟ್ - ಸುಬ್ರಮಣ್ಯ ಸಂಪರ್ಕದ ರಸ್ತೆಯಾಗಿದ್ದು, ಜೆಸಿಬಿ ಮೂಲಕ ಸ್ಥಳೀಯ ಆಡಳಿತ ಕುಸಿದ ಮಣ್ಣು ತೆರವುಗೊಳಿಸಲಾಗುತ್ತಿದೆ. ಇದೇ ಜಾಗದಲ್ಲಿ ಶನಿವಾರ ಭಾರಿ ಗಾತ್ರದ ಮರ ಕಾರಿನ ಮೇಲೆ ಬಿದ್ದಿತ್ತು.
ಶ್ರೀಮಂಗಲ ಹೋಬಳಿ ಬೀರುಗ ಗ್ರಾಮದ ಮುಕ್ಕಟೀರ ಕಾಶಿ ಕಾರ್ಯಪ್ಪ ಅವರ ಮನೆಯನ್ನು ಕಂದಾಯ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಮಡಿಕೇರಿ ತಾಲೂಕಿನ ಮಡಿಕೇರಿ ಹೋಬಳಿಯ ಕರ್ಣಂಗೇರಿ ಗ್ರಾಮದ ರಜಾಕ್ ಅವರ ಮನೆಯ ಒಂದು ಭಾಗದ ಗೋಡೆಯು ಮಳೆಯಿಂದಾಗಿ ಕುಸಿದು ಬಿದ್ದಿದೆ.ಸೋಮವಾರಪೇಟೆ ಹೋಬಳಿ ಕಿರುದಾಲೆ ಹೊಳೆ ಪಕ್ಕದಲ್ಲಿ ವಾಸವಿರುವ ಬಿಳಿಗೇರಿ ಗ್ರಾಮದ ನಿವಾಸಿಗಳಿಗೆ ಹೊಳೆ ನೀರು ಹರಿವು ಹೆಚ್ಚಾದಲ್ಲಿ ಸುರಕ್ಷಿತ ಪ್ರದೇಶಕ್ಕೆ, ಕಾಳಜಿ ಕೇಂದ್ರಕ್ಕೆ ತೆರಳಲು ತಹಸೀಲ್ದಾರರು ಮಾಹಿತಿ ನೀಡಿದ್ದಾರೆ.
ಸೋಮವಾರಪೇಟೆ ಹೋಬಳಿ ಕಿರುದಾಲೆ ಹೊಳೆ ಪಕ್ಕದಲ್ಲಿ ವಾಸವಿರುವ ಬಿಳಿಗೇರಿ ಗ್ರಾಮದ ನಿವಾಸಿಗಳಿಗೆ ಹೊಳೆ ನೀರು ಹರಿವು ಹೆಚ್ಚಾದಲ್ಲಿ ಸುರಕ್ಷಿತ ಪ್ರದೇಶಕ್ಕೆ ಕಾಳಜಿ ಕೇಂದ್ರಕ್ಕೆ ತೆರಳಲು ತಹಸೀಲ್ದಾರರು ಮಾಹಿತಿ ನೀಡಿದ್ದಾರೆ.ಶ್ರೀಮಂಗಲ ಹೋಬಳಿ ಕುರ್ಚಿ ಗ್ರಾಮದ ಅಜ್ಜಮಾಡ ನಂದ ಅವರ ಮನೆಯನ್ನೂ ಪರಿಶೀಲನೆ ಮಾಡಲಾಗಿದ್ದು, ಗಾಳಿ ಮಳೆಯಿಂದ ತೀವ್ರವಾಗಿ ಮನೆ ಹಾನಿಯಾಗಿದೆ. ಕುಶಾಲನಗರ ಹೋಬಳಿ ನಂಜರಾಯಪಟ್ಟಣ ಗ್ರಾಮದ ನಿವಾಸಿ ತಮ್ಮಯ್ಯ ಬಿನ್ ಪೌತಿ ಪುಟ್ಟ ಅವರ ವಾಸದ ಮನೆ ಮೇಲೆ ಮರ ಬಿದ್ದು ಗೋಡೆ ಕುಸಿದಿದೆ. ಶ್ರೀಮಂಗಲ ಹೋಬಳಿ ಕುಟ್ಟ ಗ್ರಾಮದ ಸಿಂಕೋನ್ ಕಾಲೋನಿಯ ಮಣಿ ಅವರ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ.
ಕುಶಾಲನಗರ ಹೋಬಳಿ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಸತ್ಯವತಿ ಅವರ ವಾಸದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಮ್ಮತ್ತಿ ಹೋಬಳಿ ಪುಲಿಯೇರಿ ಗ್ರಾಮದ ಶ್ರೀಜಾ ಅವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಭಾಗಶಃ ಹಾನಿಯಾಗಿದೆ. ಪಕ್ಕದಲ್ಲಿ ನಿಲ್ಲಿಸಿದ್ದ ಕಾರ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ.ನಾಪೋಕ್ಲು ಹೋಬಳಿ ಎಮ್ಮೆಮಾಡು ಗ್ರಾಮದ ಕರೀಂ ಟಿ.ಎ. ಅವರ ವಾಸದ ಮನೆಯ ಮುಂಭಾಗದ ಗೋಡೆ ಕುಸಿದಿದೆ. ಮನೆ ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆಯಿದ್ದು, ಸದ್ಯ ಬೇರೆಡೆಗೆ ಸ್ಥಳಾಂತರಕ್ಕೆ ಸಲಹೆ ನೀಡಲಾಗಿದೆ.
ಕುಶಾಲನಗರ ತಾಲೂಕು ಕುಶಾಲನಗರ ಹೋಬಳಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ರಸೂಲ್ ಪುರ ಗ್ರಾಮದ ನಿವಾಸಿ ಡಿಂಪಲ್ ಕಿರಣ್ ಅವರ ಕೊಟ್ಟಿಗೆಯು ತೀವ್ರ ಗಾಳಿ ಮಳೆಯಿಂದಾಗಿ ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ.ಹಾರಂಗಿ ಜಲಾಶಯದ ಮುಂದೆ ಇರುವ ಯಡವನಾಡು, ಹಾರಂಗಿ ಸೇತುವೆ ನೀರಿನಿಂದ ಮುಳುಗಡೆಯಾಗಿದೆ. ಸೇತುವೆಯ ಎರಡು ಬದಿಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳು ಹೋಗದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಸೋಮವಾರಪೇಟೆ ಹೋಬಳಿ ಹರದೂರು ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿಯಾಗಿದೆ. ಕಟ್ಟಡದ ಪಕ್ಕದಲ್ಲಿ ಅಂಗನವಾಡಿ ಕೇಂದ್ರದ ಶೌಚಾಲಯ ಕಟ್ಟಡಕ್ಕೂ ಹಾನಿಯಾಗಿದೆ.ಶನಿವಾರಸಂತೆ ಹೋಬಳಿ ಮಾದೆಗೋಡು ಗ್ರಾಮದ ನಿವಾಸಿ ಎಂ.ಎನ್. ದಿವಾಕರ ಬಿನ್ ಪೌತಿ ನಾಗೇಶ ಅವರ ವಾಸದ ಮನೆಯು ಕುಸಿದಿದೆ. ಮಳೆ ಮುಂದುವರಿದಲ್ಲಿ ಮನೆಯು ನೆಲಸಮವಾಗುವ ಸಾಧ್ಯತೆ ಹೆಚ್ಚಿದೆ.ಸುಂಟಿಕೊಪ್ಪ ಹೋಬಳಿ 7ನೇ ಹೊಸಕೋಟೆ ಗ್ರಾಮದ ರಾಜಾಜಿ ಡಿ.ಕೆ. ಬಿನ್ ಕೃಷ್ಣೋಜಿರಾವ್ ಅವರ ದನದ ಕೊಟ್ಟಿಗೆಗೆ ಮರ ಬಿದ್ದು ಹಾನಿದೆ. ಸಂಪಾಜೆ ಹೋಬಳಿ ಸಂಪಾಜೆ ಗ್ರಾಮದ ಬೋಜಪ್ಪ ಎ.ಬಿ. ಅವರ ವಾಸದ ಮನೆಗೆ ಭಾರಿ ಗಾತ್ರದ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ಪೇರೂರು ಗ್ರಾಮದ ಬೆಳ್ಯವ್ವ ಅವರ ವಾಸದ ಮನೆಯ ಶೀಟ್‌ಗಳು ಹಾರಿಹೋಗಿದೆ.ಶಾಲಾ-ಕಾಲೇಜು ಕಟ್ಟಡಕ್ಕೆ ಹಾನಿಸೋಮವಾರಪೇಟೆ ಹೋಬಳಿ ಗರಗಂದೂರು ಗ್ರಾಮದಲ್ಲಿರುವ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜು ಮಾದಾಪುರ ಕಾಲೇಜಿನ ಕಟ್ಟಡದ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಸೂರ್ಲಬ್ಬಿ ಗ್ರಾಮದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಭಾಂಗಣ ಶೀಟು ಗಾಳಿಗೆ ಹಾರಿಹೋಗಿ ಶಾಲೆಯ ಮೇಲೆ ಬಿದ್ದಿದೆ. ಅಂದಾಜು 50 ಹಂಚುಗಳಿಗೆ ಹಾನಿಯಾಗಿದೆ.