ಸಾರಾಂಶ
ಬೆಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡುಗು ಜಿಲ್ಲೆಗಳಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಶುಕ್ರವಾರ ಮತ್ತು ಶನಿವಾರವೂ ಹೆಚ್ಚಿನ ಪ್ರಮಾಣ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಲಾಗಿದೆ. 11 ರಿಂದ 20 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶನಿವಾರದಂದು ಕರಾವಳಿ ಜಿಲ್ಲೆಗಳಿಗೆ ಮಾತ್ರ ಆರೆಂಜ್ ಅಲರ್ಟ್ ಮುಂದುವರೆಸಲಾಗಿದೆ. ಮಲೆನಾಡು ಜಿಲ್ಲೆಗಳು ಸೇರಿ ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಭಾನುವಾರ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗೆ ಯೆಲ್ಲೋ ಅಲರ್ಟ್ ಮುಂದುವರೆಸಲಾಗಿದೆ. ಮಳೆಯೊಂದಿಗೆ ನಿರಂತರವಾಗಿ 50 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ
ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೆಲವೆಡೆ ಭೂಕುಸಿತಗಳು ಸಂಭವಿಸಿವೆ.
ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಳಿನಿ, ನಂದಿನಿ, ತುಂಗಾ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಶೃಂಗೇರಿ ಮಠದ ಕಪ್ಪೆಶಂಕರ ದೇವಾಲಯ, ಸಂಧ್ಯಾವಂದನ ಮಂಟಪ, ಗಾಂಧಿ ಮೈದಾನಗಳು ಜಲಾವೃತಗೊಂಡಿವೆ. ಈ ಮಧ್ಯೆ, ಶಂಕರಗಿರಿ ಬೆಟ್ಟ, ಸಿರಿಮನೆ ಜಲಪಾತ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.
ಮಳೆ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ 20 ಕ್ರಸ್ಟ್ ಗೇಟ್‌ಗಳ ಮೂಲಕ 58,260 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಹಂಪಿ ಪುರಂದರದಾಸರ ಮಂಟಪ ಸೇರಿದಂತೆ ಕೆಲ ಪ್ರಮುಖ ಸ್ಮಾರಕಗಳು ಜಲಾವೃತಗೊಂಡಿವೆ. ಇದೇ ವೇಳೆ, ಬಸವಸಾಗರ ಜಲಾಶಯದಿಂದ 95 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಕೊಡಗಿನಲ್ಲಿ ಹಾರಂಗಿ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಮುಂದುವರಿದ ಗುಡ್ಡಕುಸಿತ:
ಈ ಮಧ್ಯೆ, ಭಾರೀ ಮಳೆಯಿಂದಾಗಿ ಶೃಂಗೇರಿ-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಸಾಲ್ಮರ ಬಳಿ ಮತ್ತೆ ಗುಡ್ಡ ಕುಸಿಯಲಾರಂಭಿಸಿದೆ. ಕಾರವಾರ ತಾಲೂಕಿನ ಕದ್ರಾದಿಂದ ಕೊಡಸಳ್ಳಿ ಡ್ಯಾಂಗೆ ಹೋಗುವ ರಸ್ತೆಯ ಮೇಲೆ ಗುಡ್ಡ ಕುಸಿದಿದ್ದು, 30 ಅಡಿ ಉದ್ದಕ್ಕೂ ಕಲ್ಲು-ಮಣ್ಣಿನ ರಾಶಿನ ಹರಡಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.