ಭಾನುವಾರವೂ ಭಾರೀ ಮಳೆ ಸಾಧ್ಯತೆ । ಭದ್ರ ಡ್ಯಾಂಗೆ 12,983 ಕ್ಯೂಸೆಕ್ಸ್‌ ಒಳಹರಿವು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಳೆದ ಎರಡು ದಿನಗಳಿಂದ ಕಾಫಿನಾಡು ಚಿಕ್ಕಮಗಳೂರಿನ ವಿವಿಧ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗ, ಭದ್ರ ನದಿಗಳಲ್ಲಿ ಒಳ ಹರಿವು ಹೆಚ್ಚಾಗುವುದರೊಂದಿಗೆ ಅಪಾಯದ ಮಟ್ಟದ ಮೀರಿ ಹರಿಯುತ್ತಿವೆ.

ಮಳೆಯಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಕುಸಿತ, ಮನೆಗಳಿಗೆ ನೀರು ನುಗ್ಗಿದ ಬಗ್ಗೆ ಸಹ ವರದಿಯಾಗಿದೆ.

ಶುಕ್ರವಾರ ಸುರಿದ ಮಳೆ ಭದ್ರ ಡ್ಯಾಂಗೆ ಒಳ ಹರಿವಿನ ಪ್ರಮಾಣ ದ್ವಿಗುಣಗೊಂಡಿದೆ. ಶನಿವಾರ ಬೆಳಗ್ಗೆ 6 ಗಂಟೆ ವೇಳೆಗೆ 12,983 ಕ್ಯೂಸೆಕ್ಸ್‌ ಒಳಹರಿವು ಬರುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಭಾನುವಾರಕ್ಕೆ ನೀರಿನ ಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಎಲ್ಲ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಶನಿವಾರ ರಜೆ ಘೋಷಿಸಲಾಗಿತ್ತು.

ಎನ್‌.ಆರ್‌.ಪುರ ವ್ಯಾಪ್ತಿಯ ಬಾಳೆಹೊನ್ನೂರು ಹೋಬಳಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ನೀಡಲಾಗಿತ್ತು. ಈಗಾಗಲೇ ನಿಗದಿಯಾಗಿರುವ ಸಾರ್ವಜನಿಕ ಪರೀಕ್ಷೆಗಳು, ಬೋರ್ಡ್ ಪರೀಕ್ಷೆಗಳು ಹಾಗೂ ಅಗತ್ಯ ಸರ್ಕಾರಿ ಕರ್ತವ್ಯಗಳು ಎಂದಿನಂತೆ ನಡೆಯಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು.

ಭಾನುವಾರವೂ ಭಾರೀ ಮಳೆ ಸಾಧ್ಯತೆ

ಚಿಕ್ಕಮಗಳೂರು ಜಿಲ್ಲೆಗೆ ಶನಿವಾರದಿಂದ ಭಾನುವಾರಕ್ಕೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌. ಭಾನುವಾರದಿಂದ ಸೋಮವಾರಕ್ಕೆ ಆರೆಂಜ್‌ ಅಲರ್ಟ್‌ ಹಾಗೂ ಸೋಮವಾರದಿಂದ ಮಂಗಳವಾರ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ, ಇನ್ನೂ ಎರಡ್ಮೂರು ದಿನ ಜಿಲ್ಲೆಯಲ್ಲಿ ಮಳೆ ಆಗುವ ಸಾಧ್ಯತೆ ಹೆಚ್ಚಾಗಿದೆ.

-- ಬಾಕ್ಸ್‌ --ಬಯಲು ಸೀಮೆಯ ತಾಲೂಕಿನಲ್ಲಿ ಮಳೆ ಇಲ್ಲ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಕಳಸ, ಎನ್‌.ಆರ್‌.ಪುರ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಉತ್ತಮ ಮಳೆ ಕಂಡು ಬಂದರೆ, ಕಡೂರು ಮತ್ತು ಅಜ್ಜಂಪುರ ಭಾಗದಲ್ಲಿ ಮಳೆ ಕೊರತೆ ಮುಂದುವರೆದಿದೆ. ಕನಿಷ್ಠ ಪ್ರಮಾಣ ಮಳೆಯೂ ಈ ತಾಲೂಕಿನಲ್ಲಿ ಆಗಿಲ್ಲ.

-- ಬಾಕ್ಸ್‌ --

ತಾಲೂಕು ವಾರು ಮಳೆ ಪ್ರಮಾಣ (ಸೆಂ.ಮೀ)

ತಾಲೂಕುಮಳೆ ಪ್ರಮಾಣ

ಶೃಂಗೇರಿ19.7

ಕೊಪ್ಪ13.0

ಕಳಸ9.9

ಎನ್‌.ಆರ್‌.ಪುರ5.3

ಮೂಡಿಗೆರೆ4.9

ಚಿಕ್ಕಮಗಳೂರು2.0

ತರೀಕೆರೆ1.9

ಅಜ್ಜಂಪುರ0.5

ಕಡೂರು0.3

ಸರಾಸರಿ4.2