3 ದಿನ ರಾಜ್ಯದ 8 ಜಿಲ್ಲೆಗಳಲ್ಲಿ ಭಾರಿ ಮಳೆ

| Published : May 20 2024, 01:34 AM IST / Updated: May 20 2024, 01:03 PM IST

ಸಾರಾಂಶ

ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

 ಬೆಂಗಳೂರು :  ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಭಾನುವಾರ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿದ್ದಾನೆ. ವಿಜಯನಗರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸಿಡಿಲಿಗೆ ಮೂವರು ಗಾಯಗೊಂಡಿದ್ದಾರೆ.

ಕುಷ್ಟಗಿಯ ಬಚನಾಳ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಈಶಪ್ಪ ಕಳಮಳ್ಳಿ (36) ಎಂಬುವರು ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಹನುಮಂತಿ ನಾಯಕ ಹಾಗೂ ಪರಮಣ್ಣ ನಾಯಕ ಎಂಬುವರು ಗಾಯಗೊಂಡಿದ್ದಾರೆ.

ಧಾರವಾಡದ ದಡ್ಡಿ ಕಮಲಾಪುರದ ಬಳಿ ಎಮ್ಮೆ ಕರುವೊಂದು ಸಿಡಿಲಿಗೆ ಬಲಿಯಾಗಿದೆ. ಕರು ಮೇಯಿಸುತ್ತಿದ್ದ ರವಿ ಕರಮಡ್ಡಿ (30) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಎರಡು ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಲಕಾವೇರಿ, ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ನೀರು ಹರಿದು ಬರುತ್ತಿದೆ. ಕೆಆರ್‌ಎಸ್‌ನ ಒಳಹರಿವು ಏರಿಕೆಯಾಗಿದೆ. ಕುಶಾಲನಗರದ ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ ಸ್ಟಿಲ್ ವಾಟರ್ ರಿವರ್ಗ್ ರಾಫ್ಟಿಂಗ್‌ಗೆ ಚಾಲನೆ ನೀಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕಡೂರು ತಾಲೂಕಿನ ಕೆಲವೆಡೆ ಮನೆಗಳು ಕುಸಿದಿವೆ. ಭದ್ರಾ ನದಿಯ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ವೇದಾವತಿಯ ಒಡಲು ತುಂಬಿ ಹರಿದ ಪರಿಣಾಮ ಕೆಲ್ಲೋಡು ಬ್ಯಾರೆಜ್‌ ಭರ್ತಿಯಾಗಿದೆ.

ಮಳೆಯಿಂದಾಗಿ ಬೆಂಗಳೂರಿನ ಯಲಹಂಕದ ಪುಟ್ಟೇನಹಳ್ಳಿಯಲ್ಲಿ 20ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ನಿವಾಸಿಗಳು ಪರದಾಡುವಂತಾಗಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ ಸೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ, ಚಿಕ್ಕಬಳ್ಳಾಪುರದಲ್ಲಿ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.ಇನ್ನು 3 ದಿನ 8 ಜಿಲ್ಲೆಗಳಲ್ಲಿ ಭಾರಿ ಮಳೆ

ಮುಂದಿನ ಮೂರು ದಿನದಲ್ಲಿ ದಕ್ಷಿಣ ಒಳನಾಡಿನ ಆರು ಜಿಲ್ಲೆಗಳು, ಕರಾವಳಿಯ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್‌ ಅಲರ್ಟ್‌ ಮುನ್ಸೂಚನೆ ನೀಡಲಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮುಂದಿನ ಮೂರು ದಿನ 11ರಿಂದ 20 ಸೆಂ.ಮೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್‌ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಯಲ್ಲಿ 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಲಕ್ಷಣ ಇರುವುದರಿಂದ ಯೆಲ್ಲೋ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು ಹಾಗೂ ಯಾದಗಿರಿಯಲ್ಲಿ ಒಂದೆರಡು ದಿನ ಮಳೆ ಪ್ರಮಾಣ ಕ್ಷೀಣಿಸಲಿದ್ದು, ಮೇ 23 ರಿಂದ ಚೇತರಿಕೆ ಕಂಡು ಬರುವ ಸಾಧ್ಯತೆ ಇದೆ. ಒಟ್ಟಾರೆ ರಾಜ್ಯಾದ್ಯಂತ ಮೇ 26ರ ವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯ ಜತೆಗೆ ಗಾಳಿಯು 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ. ಸಮುದ್ರದಲ್ಲಿ ಅಲೆಗಳ ಉಬ್ಬರವಿಳಿತ ಪರಿಣಾಮ ಕಡಲ ತೀರದಲ್ಲಿ ಪ್ರಕ್ಷುಬ್ಧ ವಾತಾವರಣ ಇರುವ ಸಾಧ್ಯತೆ ಇದೆ ಎಂದು ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ ಹೊಸದುರ್ಗ ಹಾಗೂ ಚನ್ನಗಿರಿಯಲ್ಲಿ ಅತಿ ಹೆಚ್ಚು ತಲಾ 12 ಸೆಂ,ಮೀ ಮಳೆಯಾಗಿದೆ. ಹೆಸರಘಟ್ಟ, ಬೆಳ್ತಂಗಡಿ, ಯಲ್ಲಾಪುರದಲ್ಲಿ ತಲಾ 9, ಬೆಂಗಳೂರಿನ ಜಿಕೆವಿಕೆ 8, ಕಡೂರು, ಯಗಟಿ, ಚಿಕ್ಕಮಗಳೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ 7, ಬನವಾಸಿ, ಕಿರವತ್ತಿ, ಉಡುಪಿ, ಹುಬ್ಬಳ್ಳಿಯಲ್ಲಿ ತಲಾ 6, ಸಿದ್ದಾಪುರ, ಧರ್ಮಸ್ಥಳ, ಮಂಕಿ, ಶಿಗ್ಗಾಂವ್‌, ಭದ್ರಾವತಿಯಲ್ಲಿ ತಲಾ 5, ಹೊನ್ನಾವರ, ಶಿರಾಲಿ, ಆಲಮಟ್ಟಿ, ಅಣ್ಣಿಗೆರೆ, ಅಜ್ಜಂಪುರ, ಹಾಸನದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಉಳಿದಂತೆ ರಾಜ್ಯದ ಹಲವು ಭಾಗದಲ್ಲಿ 3 ರಿಂದ 1 ಸೆಂ.ಮೀ ವರೆಗೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.