ಸಾರಾಂಶ
ಬೆಂಗಳೂರು/ಹುಬ್ಬಳ್ಳಿ/ಬೆಳಗಾವಿ : ರಾಜ್ಯದಲ್ಲಿ ಕೃತ್ತಿಕಾ ಮಳೆಯ ಅಬ್ಬರ ಮುಂದುವರಿದಿದ್ದು, ಬೆಳಗಾವಿ, ಹುಬ್ಬಳ್ಳಿ, ಕೊಪ್ಪಳ ಸೇರಿ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲು, ಬಿರುಗಾಳಿಯಿಂದ ಕೂಡಿದ ಮಳೆಯಿಂದ ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಬೇಕಾಯಿತು. ಸಿಡಿಲಿಗೆ ಕೊಪ್ಪಳ ಜಿಲ್ಲೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇಮೂಕರ್ತಿನಾಳ ಗ್ರಾಮದ ಕನಕರಾಯ ನಾಗಪ್ಪ ಬಿಡನಾಳ (28) ಸಿಡಿಲು ಬಡಿದು ಮೃತನಾದ ದುರ್ದೈವಿ. ಹೊಲದ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಭಾರೀ ಮಳೆ- ಗಾಳಿಯಿಂದ ಮರದಡಿ ಆಶ್ರಯ ಪಡೆದಾಗ ಸಿಡಿಲು ಬಡಿದಿದೆ. ಕುಷ್ಟಗಿಯಲ್ಲಿ ಮೃತಪಟ್ಟ ವ್ಯಕ್ತಿಗೆ ತಹಸೀಲ್ದಾರ್ ₹5 ಲಕ್ಷ ಪರಿಹಾರ ನೀಡಲಾಗಿದೆ.
ಬೆಳಗಾವಿಯಲ್ಲಿ ಶನಿವಾರ ಸಂಜೆ ಸಿಡಿಲು, ಗುಡುಗಿನ ಆರ್ಭಟದೊಂದಿಗೆ ಸುಮಾರು 1 ಗಂಟೆ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಬೈಲಹೊಂಗಲ ತಾಲೂಕಿನ ಸಂಪಗಾಂವಿಯಲ್ಲಿ ಬಿರುಗಾಳಿಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, 22 ಗ್ರಾಮಗಳಿಗೆ ಕತ್ತಲು ಆವರಿಸಿದೆ.
ಧಾರವಾಡದಲ್ಲಿ ಮಳೆಗೆ ಕಾಮಗಾರಿಗಾಗಿ ಕಟ್ಟಲಾಗಿದ್ದ ಮರದ ತುಂಡೊಂದು ಬಿದ್ದು, ಖಾಸಗಿ ಬಸ್ಸೊಂದು ಜಖಂಗೊಂಡಿದೆ. ಹಾವೇರಿ ಜಿಲ್ಲೆಯ ಹಲವೆಡೆ ಅರ್ಧ ಗಂಟೆ ಉತ್ತಮ ಮಳೆ ಸುರಿದ ವರದಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಒಂದೂವರೆ ತಾಸು ಭಾರೀ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆಗೆ ಬಾಳೆ ಗಿಡಗಳು ನೆಲಕಚ್ಚಿದ್ದು, ಲಕ್ಷಾಂತರ ರೂ.ನಷ್ಟವಾಗಿದೆ. ಇದೇ ವೇಳೆ, ಗದಗ, ಹಾವೇರಿ ಜಿಲ್ಲೆಯ ಹಲವೆಡೆಯೂ ಮಳೆಯಾದ ವರದಿಯಾಗಿದೆ.
ಚಿಕ್ಕಮಗಳೂರಲ್ಲೂ ಮಳೆ: ಚಿಕ್ಕಮಗಳೂರಿನ ಶೃಂಗೇರಿ, ಬಾಳೆಹೊನ್ನೂರು ಸೇರಿದಂತೆ ಹಲವೆಡೆ ಶನಿವಾರ ಮಧ್ಯಾಹ್ನ ಅರ್ಧಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ನರಸಿಂಹರಾಜಪುರ ತಾಲೂಕಿನ ಹೊಸಗದ್ದೆಯಲ್ಲಿ ಅಡಕೆ ತೋಟಕ್ಕೆ ಸಿಡಿಲು ಬಡಿದು 25ಕ್ಕೂ ಹೆಚ್ಚು ಅಡಕೆ ಮರಗಳಿಗೆ ಹಾನಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ಉತ್ತರ ಪ್ರದೇಶದ ಚೈನ್‌ಪುರ ಗುಲೌರಾದ ಕಾರ್ಮಿಕ ಶ್ರೀಕಿಶುನ್ (56) ಎಂಬುವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡ್ಯ ಹೊಳೆಯಲ್ಲಿ ಮರಳುಗಾರಿಕೆ ಮಾಡುತ್ತಿದ್ದಾಗ ಸಿಡಿಲು ಬಡಿಯಿತು.
ಕೆಲ ದಿನ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ:ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ವ್ಯಾಪಿಸುತ್ತಿದ್ದು, ಮೇ 13 ಹಾಗೂ ಮೇ 14ರಂದು ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸುಳಿಗಾಳಿಯ ಪ್ರಭಾವದಿಂದ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯ ಮುಂದಿನ ಒಂದು ವಾರ ತೀವ್ರ ಮಳೆ ಕಾಣಲಿದೆ. ಮೇ 13 ಹಾಗೂ 14 ರಂದು ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ. ಮೇ 13 ರಂದು ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ, ಮೇ 14ರಂದು ಹಾವೇರಿ, ಗದಗ, ಧಾರಾವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನು ಮೇ 12 ಎಂದು ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಮೇ 13-14ಕ್ಕೆ ಶಿವಮೊಗ್ಗ, ಕೊಡಗು, ಮೇ 15ಕ್ಕೆ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಮೇ 11ರಿಂದ ಐದು ದಿನ ಉತ್ತಮ ಮಳೆಯಾಗಲಿದೆ. ಮೇ 13ಕ್ಕೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಮುನ್ಸೂಚನೆ ನೀಡಲಾಗಿದೆ.ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ಹವಾಮಾನ ವರದಿ ಪ್ರಕಾರ ಶ್ರೀರಂಗಪಟ್ಟಣದಲ್ಲಿ ಅತಿ ಹೆಚ್ಚು 9 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಗುಬ್ಬಿ, ಮಂಡ್ಯ, ಕೃಷ್ಣರಾಜಸಾಗರದಲ್ಲಿ ತಲಾ 6, ಕೆ.ಆರ್.ನಗರದಲ್ಲಿ 5, ಬೆಂಗಳೂರಿನ ಹೆಸರುಘಟ್ಟ 4, ಚಿಕ್ಕಬಳ್ಳಾಪುರ 3, ಚಿತ್ರದುರ್ಗ, ಬೆಳಗಾವಿ ವಿಮಾನ ನಿಲ್ದಾಣ, ದಾವಣಗೆರೆಯ ಸಂತೇಬೆನ್ನೂರು, ಕೃಷ್ಣರಾಜಪೇಟೆ, ಅರಕಗೂಡು, ಚಿಕ್ಕಮಗಳೂರು, ಭಾಗಮಂಡಲ, ಹೊಸಕೋಟೆಯಲ್ಲಿ ತಲಾ 2, ಮಾಗಡಿ, ಕುಶಲನಗರ, ಅಜ್ಜಂಪುರ, ಪಾವಗಡದಲ್ಲಿ 1 ಸೆಂ.ಮೀ ಮಳೆಯಾದ ವರದಿಯಾಗಿದೆ. ಇನ್ನು ರಾಯಚೂರಿನಲ್ಲಿ ಅತಿ ಹೆಚ್ಚು 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.