ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ. ಕುಷ್ಟಗಿ ತಾಲೂಕಿನ ವಿವಿಧೆಡೆ ಮನೆಗಳು ಕುಸಿಯಲಾರಂಭಿಸಿವೆ. ಮಳೆಯ ಹೊಡೆತಕ್ಕೆ ರಸ್ತೆಗಳು ಕೆರೆಯಂತಾಗಿವೆ.ಕಳೆದೆರಡು ದಿನಗಳಿಂದ ಭರ್ಜರಿಯಾಗಿಯೇ ಮಳೆ ಸುರಿಯುತ್ತಿದೆ. ಆದರಲ್ಲೂ ಶುಕ್ರವಾರ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಧ್ಯಾಹ್ನವೇ ಭರ್ಜರಿಯಾಗಿ ಸುರಿದಿದೆ.
ಕೊಪ್ಪಳ ತಾಲೂಕಿನ ಕೊಪ್ಪಳ, ಕಾತರಕಿ, ಮುದ್ದಾಬಳ್ಳಿ, ಗುಡ್ಲಾನೂರು, ಬೆಳೂರು ಸೇರಿದಂತೆ ಹಲವೆಡೆ ಗಂಟೆಗಟ್ಟಲೇ ಮಳೆ ಸುರಿದಿದೆ. ವಿಪರೀತ ಮಳೆಯಿಂದಾಗಿ ಹೊಲದ ಒಡ್ಡುಗಳು ಕೆರೆಯಂತೆ ತುಂಬಿಕೊಂಡು ನಿಂತಿವೆ.ಎಡೆಬಿಡದೆ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದೆ. ರೈತರು ಬಿಡುವು ಕೊಟ್ಟರೆ ಬಿತ್ತಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಗಿರಕಿ ಹಳ್ಳ ತುಂಬಿ ಹರಿಯುತ್ತಿದ್ದಂತೆ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಅಧಿಕವಾಗಿದೆ.ಗಂಗಾವತಿಯಲ್ಲಿ ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದರೆ ಯಲಬುರ್ಗಾ ತಾಲೂಕಿನ ಹಲವು ಗ್ರಾಮಗಳಲ್ಲಿಯೂ ಭಾರಿ ಮಳೆಯಾಗಿದ್ದೆದು ಯಾವುದೇ ಹಾನಿಯಾದ ವರದಿಯಾಗಿಲ್ಲ.
ಕೆರೆಯಂತಾದ ರಸ್ತೆಗಳುಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿವೆ. ಮೊದಲೇ ಹದಗೆಟ್ಟು ಹೋಗಿದ್ದ ರಸ್ತೆಗಳು ಈಗ ಅತಿಯಾದ ಮಳೆಯಿಂದಾಗಿ ಮತ್ತಷ್ಟು ಹಾಳಾಗಿವೆ. ಬಹುತೇಕ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದ್ದು, ಸರ್ಕಸ್ ಮಾಡುತ್ತಾ ಸಾಗಬೇಕಾಗಿದೆ.
ಕೊಪ್ಪಳ ತಾಲೂಕಿನ ಬಿ. ಹೊಸಳ್ಳಿ ಗ್ರಾಮದ ರಸ್ತೆಯಂತೂ ಕೆರೆಯಂತಾಗಿದ್ದು, ವಾಹನಗಳು ಈ ರಸ್ತೆ ದಾಟುವುದೇ ಸಾಹಸ ಎನ್ನುವಂತಾಗಿದೆ. ಮಕ್ಕಳು ಸಂಚರಿಸುವ ಈ ರಸ್ತೆ ಹದಗೆಟ್ಟಿರುವುದರಿಂದ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.ಬಿದ್ದ ಮನೆಗಳು
ತಾಲೂಕಿನ ಚಳಗೇರಾ ಗ್ರಾಮದಲ್ಲಿ ಮಾಬೂಬಿ ಮುರ್ತುಜಸಾ ಕಾತರಕಿ ಎಂಬವರ ಮನೆ ಹಾನಿಗೊಳಗಾಗಿದೆ. ನೀರಲೂಟಿ ಗ್ರಾಮದಲ್ಲಿ ಹನುಮಗೌಡ ಶೇಖರಗೌಡ ಪೊಲೀಸ್ ಪಾಟೀಲ್, ಶಂಕ್ರಗೌಡ ಹನುಮಗೌಡ ಪೊಲೀಸ್ ಪಾಟೀಲ ಅವರ ಮನೆಗಳಿಗೆ ಹಾನಿಯಾಗಿದೆ. ಹುಲಿಯಾಪುರ ಗ್ರಾಮದ ಬಸವರಾಜ ಕುಂಬಾರ ಅವರ ಮನೆಗೂ ಹಾನಿಯಾಗಿದೆ. ಎಲ್ಲಿಯೂ ಜನರಿಗೆ ಅಪಾಯವಾಗಿಲ್ಲ.ರೋಹಿಣಿ ಮಳಿ ಸುರಿದೈತಿ, ಓಣಿ ತುಂಬಾ ಜ್ವಾಳ ತುಂಬ್ತಾವಾ?
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳರೋಹಿಣಿ ಮಳಿಯಾದರೆ ಓಣಿ ತುಂಬಾ ಜ್ವಾಳ ಅಗ್ತಾವ್ ನೋಡ್ರಿ. ಆ ನಮ್ಮಪ್ಪ ಮಳೆರಾಯ ಈ ರೋಹಿಣಿ ಮಳೆ ಮೂಲಕವೇ ಮಳೆಗಾಲದ ಮುನ್ಸೂಚನೆ ನೀಡ್ತಾನೆ.ಹೀಗೆನ್ನುತ್ತಾರೆ ರೈತ ಯಲ್ಲಪ್ಪ. ಮಳೆ ಚೆನ್ನಾಗಿ ಆಗಿದ್ದರಿಂದ ಬಿತ್ತನೆಗೆ ಹೊಲ ಸಜ್ಜು ಮಾಡಿರುವ ಇವರು ಬೀಜಗಳನ್ನು ತೆಗೆದುಕೊಂಡು ಹೋಗಲು ಕೊಪ್ಪಳಕ್ಕೆ ಬಂದಿದ್ದರು. ಸುಮಾರು 65-70 ಆಸು ಪಾಸು ವಯಸ್ಸಿನ ಅಜ್ಜ ರೋಹಿಣಿ ಮಳೆ ಉತ್ತಮವಾಗಿ ಆಗಿರುವುದಕ್ಕೆ ಎಲ್ಲಿಲ್ಲದ ಸಂತೋಷ ವ್ಯಕ್ತಪಡಿಸಿದರು,ಕಳೆದ ಮೂರ್ನಾಲ್ಕು ದಿನಗಳಿಂದ ರೋಹಿಣಿ ಮಳೆ ಧಾರಾಕಾರ ಸುರಿಯುತ್ತಿದೆ. ಇದನ್ನು ಬೀಜ ಮಳೆ ಎಂದೂ ಕರೆಯುತ್ತಾರೆ. ರೋಹಿಣಿ ಮಳೆಯಾದರೆ ಓಣಿ ತುಂಬಾ ಜ್ವಾಳ ಅಂತಾ ಯಾಕೆ ಕರಿತಾರ ಎಂದರೆ, ಈ ಮಳೆ ಬೀಜ ಮಳೆಯಾಗಿದ್ದು, ವಿಶೇಷವಾಗಿ ಮುಂಗಾರು ಬಿತ್ತನೆ ನಡೆಯುವ ಕಾಲ. ಅಷ್ಟೇ ಅಲ್ಲ ಈ ಮಳೆಯ ಹಸಿಗೆ ಬಿತ್ತಿದರೆ ಅತ್ಯುತ್ತಮ ಬೆಳೆ ಬರುತ್ತದೆ. ಹೀಗಾಗಿ, ಈ ಮಳೆಯಾದರೆ ಓಣಿ ತುಂಬಾ ಜ್ವಾಳ (ಜೋಳ) ಎಂದು ಕರೆಯುತ್ತಾರೆ.ಜೋಳ ಎಂದರೇ ಬರಿ ಜೋಳವಲ್ಲ, ಮುಂಗಾರು ಬಿತ್ತನೆಯ ಎಲ್ಲ ಬೆಳೆಗಳು. ವಿಶೇಷವಾಗಿ ಜ್ವಾಳ ಬಿತ್ತುವ ಸಮಯವಾಗಿದ್ದರಿಂದ ಹೀಗೆ ಹೇಳಲಾಗುತ್ತದೆ. ರೋಹಿಣಿ ಮಳೆ ಪ್ರಥಮ ಪಾದದಲ್ಲಿ ಆದರೆ ಬೆಳೆ ಹುಲುಸಾಗಿ ಬರುತ್ತದೆ. ಹಾಗೆಯೇ ಮಧ್ಯ ಪಾದದಲ್ಲಿ ಆದರೆ ಮಧ್ಯಮವಾಗಿ ಬೆಳೆ ಬೆಳೆಯುತ್ತದೆ. ಆದರೆ, ಅದೇ ಕೊನೆಯ ಪಾದ ಆದರೂ ಅತ್ಯುತ್ತಮ ಬೆಳೆ ಬರುತ್ತದೆ ಎಂದು ಸಹ ಹೇಳಲಾಗುತ್ತದೆ. ಸಾಮಾನ್ಯವಾಗಿ ಈ ಮಳೆಯ ವೇಳೆಗೆ ಬಹುತೇಕ ರೈತರು ತಮ್ಮ ಹೊಲವನ್ನು ಉಳುಮೆ ಮಾಡಿಕೊಂಡಿರುತ್ತಾರೆ. ಈ ಮಳೆಯ ಹಸಿಗೆ ಬಿತ್ತಿದರೆ ಸಾಕು ಮುಂದೆ ಎಲ್ಲಾ ಸಲೀಸು ಎನ್ನುತ್ತಾರೆ ಮತ್ತೊಬ್ಬ ರೈತ ಯಂಕಪ್ಪ.ಮುಂಗಾರು ಮುನ್ಸೂಚನೆ ಎಂದೇ ಕರೆಯುವ ಈ ಮಳೆಯಾದಾಗಲೆಲ್ಲ ಮುಂಗಾರು ಚೆನ್ನಾಗಿ ಬರುತ್ತದೆ ಮತ್ತು ಸಕಾಲಕ್ಕೆ ಬಿತ್ತನೆಯಾಗುವುದರಿಂದ ಮುಂದೆ ಹಿಂಗಾರು ಬಿತ್ತನೆಗೂ ಸಾಕಷ್ಟು ಸಮಯ ಸಿಗುತ್ತದೆ. ಹೀಗಾಗಿ, ಈ ಮಳೆಯನ್ನು ರೈತರು ಹೆಚ್ಚು ಕಾಯುತ್ತಿರುತ್ತಾರೆ.ಈ ವರ್ಷ ರೋಹಿಣಿ ಮಳೆ ಪ್ರಥಮ ಪಾದವೂ ಆಗಿದೆ ಹಾಗೂ ಕೊನೆಯ ಪಾದವೂ ಆಗಿದೆ. ಹೀಗಾಗಿ, ರೈತರಲ್ಲಿ ವಿಶ್ವಾಸ ಹೆಚ್ಚು ಮೂಡಿದೆ. ಅದರಲ್ಲೂ ಕೊನೆಯ ನಾಲ್ಕು ದಿನಗಳಲ್ಲಿ ಇಡೀ ಜಿಲ್ಲಾದ್ಯಂತ ಭರ್ಜರಿಯಾಗಿಯೇ ಸುರಿದಿದೆ. ಹೊಲದಲ್ಲಿನ ಒಡ್ಡುಗಳೆಲ್ಲಾ ತುಂಬಿ ಹರಿಯುವಂತೆ ಆಗಿವೆ.ಹಳ್ಳಕೊಳ್ಳಗಳೂ ತುಂಬಿ ಹರಿಯುತ್ತಿರುವುದರಿಂದ ರೈತರು ಫುಲ್ ಖುಷಿಯಾಗಿದ್ದಾರೆ. ವಿಪರೀತ ಬೀಸಿಲಿನಿಂದ ಬಳಲಿ ಹೋಗಿದ್ದ ರೈತ ಸಮುದಾಯ ನಿಟ್ಟುಸಿರು ಬಿಟ್ಟಿದೆ. ಅಷ್ಟೇ ಅಲ್ಲ, ಉತ್ತಮ ಮಳೆಯಾಗಿ, ಕೆರೆಕಟ್ಟೆಗಳಲ್ಲಿಯೂ ನೀರು ಬಂದಿರುವುದರಿಂದ ಅಂತರ್ಜಲವೂ ಹೆಚ್ಚಳವಾಗಿದೆ. ಹೀಗಾಗಿ, ಪಂಪ್‌ಸೆಟ್ ಆಧಾರಿತ ನೀರಾವರಿ ಪ್ರದೇಶಕ್ಕೂ ಅನುಕೂಲವಾಗಿದೆ. ಹಾಗೆಯೇ ತುಂಗಭದ್ರಾ ಜಲಾಶಯಕ್ಕೂ ಒಳಹರಿವು ಹೆಚ್ಚಳವಾಗಿ ಸಾವಿರಾರು ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಖುಷಿಯಾಗಿದ್ದಾರೆ.ಮೃಗಶಿರ ಮಳೆ ಆರಂಭರೋಹಿಣಿ ಮಳೆ ಪ್ರಾರಂಭದಲ್ಲಿಯೂ ಅತ್ಯುತ್ತಮವಾಗಿ ಆಗಿ ಕೊನೆಯ ಪಾದದಲ್ಲಿಯೂ ಅತ್ಯುತ್ತಮವಾಗಿ ಆಗಿದ್ದು, ಶುಕ್ರವಾರದಿಂದ ಮಿರುಗನ ಮಳೆ(ಮೃಗಶಿರ) ಪ್ರಾರಂಭವಾಗಲಿದೆ. ರೋಹಿಣಿ ಮಳೆ ಅತ್ಯುತ್ತಮವಾಗಿ ಆಗಿ, ಭೂಮಿಯೂ ಬರೋಬ್ಬರಿ ಹಸಿಯಾಗಿದೆ, ಮೃಗಶಿರ ಮಳೆ ಒಂಚೂರು ಬಿಡುವು ಕೊಟ್ಟರೆ ಒಳ್ಳೆಯದು. ರೈತರು ಬಿತ್ತನೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ.