ಸಾರಾಂಶ
ಬೆಂಗಳೂರು/ಹುಬ್ಬಳ್ಳಿ : ಕೊಡಗು, ದಕ್ಷಿಣ ಕನ್ನಡ, ಮಲೆನಾಡು ಭಾಗದಲ್ಲಿ ಮಳೆ ಇಳಿಮುಖವಾಗಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಾದ್ಯಂತ ಭಾರೀ ಮಳೆ ಮುಂದುವರಿದಿದೆ. ಇದೇ ವೇಳೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹ ಮುಂದುವರಿದಿದೆ. ರಾಜ್ಯದ ಅತಿದೊಡ್ಡ ಜಲಾಶಯಗಳಾದ ಲಿಂಗನಮಕ್ಕಿ ಹಾಗೂ ತುಂಗಭದ್ರಾ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದ್ದು, ನದಿತೀರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾಶಯದಿಂದ 60 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದ್ದು, ಸುಫಾ ಜಲಾಶಯ ಭರ್ತಿಯ ಹಂತ ತಲುಪಿದೆ. ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ 9 ತಾಲೂಕಿನ ಶಾಲೆ- ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿದೆ. ತುಂಗಭದ್ರಾ ಜಲಾಶಯದಿಂದ 1.70 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಹಂಪಿ, ಗಂಗಾವತಿಯ ಹಲವು ಸ್ಮಾರಕಗಳು ನೀರಿನಲ್ಲಿ ನಿಂತಿವೆ. ಗಂಗಾವತಿ ತಾಲೂಕಿನ ಋಷ್ಯಮುಖ ಪರ್ವತದ ಸುತ್ತಲು ನೀರು ತುಂಬಿದ್ದು, ಈ ಸ್ಥಳದಲ್ಲಿರುವ ದೇಗುಲದ (ಅರ್ಚಕರು) ಬಾಬಾಗಳು ಸಂಕಷ್ಟಕ್ಕೆ ಸಿಲುಕುವ ಸಂಭವ ಇದೆ. ಆನಂದಗಿರಿ ಬಾಬಾ, ಹರಿದಾಸ್ ಬಾಬಾ, ನೀಲಪ್ಪ ಮತ್ತು ಶಿವಯೋಗಿ ಎನ್ನುವ ನಾಲ್ವರು ಪರ್ವತದಲ್ಲಿಯೇ ವಾಸ ಮಾಡುತ್ತಿದ್ದಾರೆ. ಅವರು ಹೊರ ಬರಲು ನಿರಾಕರಿಸುತ್ತಿದ್ದು, ತಾಲೂಕು ಆಡಳಿತ ಅವರ ಜೊತೆ ಚರ್ಚೆ ನಡೆಸುತ್ತಿದೆ.
ಈ ಮಧ್ಯೆ, ಮಳೆಗೆ ರಾಜ್ಯದ ಕೆಲವೆಡೆ ಗುಡ್ಡ ಕುಸಿತ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ತೆಂಕಿಲ ಬಪ್ಪಳಿಗೆ ಬೈಪಾಸ್‌ನಲ್ಲಿ ಗುಡ್ಡ ಕುಸಿದು ಬಿದ್ದಿದ್ದು, ಹೆದ್ದಾರಿ ಬಂದ್ ಆಗಿದೆ. ಶೃಂಗೇರಿ ತಾಲೂಕಿನ ಬುಕುಡಿ ಬೈಲು ನೆಮ್ಮಾರು ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ಬುಕುಡಿಬೈಲು-ನೆಮ್ಮಾರು ಸಂಪರ್ಕ ಕಡಿತಗೊಂಡಿದೆ. ಮಂಗಳೂರು ನಗರದ ಗೋರಿಗುಡ್ಡೆಯಲ್ಲಿ ಆವರಣದ ಗೋಡೆ ಕುಸಿದು ಬಿದ್ದು, ವೆಲೆನ್ಸಿಯ ಕಡೆಗೆ ಸಾಗುವ ಸಂಪರ್ಕ ರಸ್ತೆ ಕಡಿತಗೊಂಡಿತ್ತು.
ಲಿಂಗನಮಕ್ಕಿ ಭರ್ತಿ:
ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿ ಜಲಾಶಯ 21ನೇ ಬಾರಿಗೆ ಭರ್ತಿಯಾಗಿದ್ದು, ಶುಕ್ರವಾರ ಎಲ್ಲ 11 ರೇಡಿಯಲ್ ಗೇಟ್‍ಗಳ ಮೂಲಕ ಸುಮಾರು 40ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ. 6 ವರ್ಷಗಳ ಬಳಿಕ ಜಲಾಶಯ ಭರ್ತಿಯಾಗಿದೆ. ಆಗಸ್ಟ್ ಆರಂಭದಲ್ಲಿಯೇ ಗೇಟ್ ತೆರೆದು ನೀರನ್ನು ಬಿಟ್ಟಿರುವುದು ಇದೇ ಮೊದಲು. 2019ರಲ್ಲಿ ಆಗಸ್ಟ್ ತಿಂಗಳೊಂದರಲ್ಲಿ ಜಲಾಶಯಕ್ಕೆ 104 ಟಿಎಂಸಿ ನೀರು ಹರಿದು ಬಂದಿರುವುದು ಇದುವರೆಗಿನ ದಾಖಲೆಯಾಗಿತ್ತು. ಆ ವರ್ಷ ಆಗಸ್ಟ್ ಎರಡನೇ ವಾರದಲ್ಲಿ ಜಲಾಶಯ ಭರ್ತಿಯಾಗಿ ನದಿಗೆ ನೀರು ಬಿಡಲಾಗಿತ್ತು.
ವಿದ್ಯಾರ್ಥಿನಿಗೆ ಸೇತುವೆ ದಾಟಲು ಬೋಟ್ :ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನಲ್ಲಿ ಭಾರಿ ಮಳೆಗೆ ಕುಂಡಲ ಸೇತುವೆ ಮುಳುಗಿದ್ದು, ಜನರ ಓಡಾಟಕ್ಕೆ ತೊಂದರೆಯಾಗಿದೆ. ಈ ಮಧ್ಯೆ, ಕುಂಡಲದ ಪವಿತ್ರಾ ವೇಲಿಪ್ ಎಂಬುವರಿಗೆ ಶುಕ್ರವಾರ ಕಾರವಾರದಲ್ಲಿ ಬಿಎ ಸೆಮಿಸ್ಟರ್ ಪರೀಕ್ಷೆ ಇತ್ತು. ವಿಷಯ ತಿಳಿದ ತಹಸೀಲ್ದಾರ್, ವಿದ್ಯಾರ್ಥಿನಿಗೆ ಸೇತುವೆ ದಾಟಲು ಬೋಟ್ ವ್ಯವಸ್ಥೆ ಮಾಡಿದರು.
ಕೃಷ್ಣಾ ಪ್ರವಾಹಕ್ಕೆ ಟ್ರ್ಯಾಕ್ಟರ್ ಪಲ್ಟಿ, ಇಬ್ಬರು ನಾಪತ್ತೆ:
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಅಕ್ಕಿವಾಟ್-ಬಸ್ತವಾಡ್ ರಸ್ತೆಯಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಶುಕ್ರವಾರ ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಪಲ್ಟಿಯಾಗಿದ್ದು, ಟ್ರ್ಯಾಕ್ಟರ್‌ನಲ್ಲಿದ್ದ 8 ಜನರ ಪೈಕಿ ಆರು ಜನರನ್ನು ರಕ್ಷಿಸಲಾಗಿದೆ. ಇಬ್ಬರು ನದಿಯಲ್ಲಿ ಕೊಚ್ಚಿಹೋಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾದವರಲ್ಲಿ ಅಕ್ಕಿವಾಟ್ ಜಿಪಂ ಸದಸ್ಯ ಮಾಜಿ ಇಕ್ಬಾಲ್ ಬೈರಾಗದಾರ ಸಹ ಸೇರಿದ್ದಾರೆ ಎನ್ನಲಾಗಿದೆ.