ಸಾರಾಂಶ
ಮಾಡದಕೆರೆ ಹೋಬಳಿ ನಾಕೀಕೆರೆ ಗ್ರಾಮದ ಬಸವರಾಜಪ್ಪ ಎಂಬುವವರು 1 ಎಕೆರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಮೆಕ್ಕೆ ಜೋಳ ಸಂಪೂರ್ಣವಾಗಿ ನೆಲಕಚ್ಚಿರುವುದು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನಾದ್ಯಂತ ಗುರುವಾರ ತಡರಾತ್ರಿ ಸುರಿದ ಮಹಾಮಳೆಗೆ ತಾಲೂಕಿನ ಮತ್ತೋಡು, ಶ್ರೀರಾಂಪುರ ಹಾಗೂ ಮಾಡದಕೆರೆ ಹೋಬಳಿಯ ಹಲವು ಕೆರೆಗಳು ಹಾಗೂ ಹಳ್ಳಗಳು ತುಂಬಿ ಹರಿಯಲಾರಂಭಿಸಿವೆ.ಕಳೆದ ಒಂದು ತಿಂಗಳಿಂದ ಮಳೆ ಬಾರದೆ ಬೆಳೆಗಳು ಒಣಗಿ ಹೊಗಿದ್ದವು, ತೋಟಗಾರಿಕಾ ಬೆಳೆಗಳಿಗೂ ನೀರು ಹರಿಸಲು ರೈತರು ಪರದಾಡುವಂತಾಗಿತ್ತು ಪುಬ್ಬ, ಉತ್ತರೆ ಹಾಗೂ ಹಸ್ತಾ ಮಳೆ ಬರುತ್ತವೆ ಎನ್ನುವ ನಂಭಿಕೆ ರೈತರಲ್ಲಿದೆ, ಆದರೆ ಈ ಬಾರಿ ಈ ನಂಬಿಕೆ ಹುಸಿಯಾದಂತೆ ಕಾಣತೊಡಗಿದಾಗ ಹಸ್ತಾ ಮಳೆ ಕೊನೆಯ ದಿನ ರೈತರ ನಂಬಿಕೆಯನ್ನು ಉಳಿಸಿದೆ.
ತಾಲೂಕಿನಲ್ಲಿಯೇ ಮತ್ತೋಡು ಹೋಬಳಿಯಲ್ಲಿ ಅತಿ ಹೆಚ್ಚು 100 ಮಿಮೀ ಮಳೆಯಾಗಿದ್ದು, ಬಾಗೂರು 70 ಮಿಮೀ, ಶ್ರೀರಾಂಪುರ 55 ಮಿಮೀ, ಮಾಡದಕೆರೆ 40 ಮಿಮೀ ಹೊಸದುರ್ಗ ಪಟ್ಟಣ 27.6 ಮಿಮೀ ಮಳೆಯಾಗಿದೆ.ಮಾಡದಕೆರೆ ಹೋಬಳಿ ಭಾಗದ ಗೌಡನಕೆರೆ ತುಂಬಿ ಕೋಡಿ ಬಿದ್ದಿದೆ. ಅಲ್ಲದೆ ಸಿರಿಗೊಂಡನಹಳ್ಳಿ ಹಳ್ಳ ತುಂಬಿ ಹರಿಯುತ್ತಿದ್ದು ಹೊಸದುರ್ಗ ಮುಖ್ಯ ರಸ್ತೆಯಿಂದ ಡಿಟಿ ವಟ್ಟಿ ಹಾಗೂ ಬುಕ್ಕಸಾಗರ ಗ್ರಾಮಕ್ಕೆ ಹೋಗುವ ಹಳೆಯ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದೆ ಹೋಬಳಿಯ ಮೆಣಸಿನೋಡು ಗ್ರಾಮದ ಚಿತ್ತಣ್ಣ ಎಂಬುವರು 2 ಎಕೆರೆ ಜಮೀನಿನಲ್ಲಿ ಹಾಕಲಾಗಿದ್ದ ಟೊಮೆಟೊ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಮಾಡದಕೆರೆ ಹೋಬಳಿಯ ಕೆಂಕೆರೆ ಬಳಿ ನಿರ್ಮಿಸಲಾಗಿರುವ ಬ್ರಿಡ್ಜ್ ಕಂ ಬ್ಯಾರೆಜ್ ಭರ್ತಿಯಾಗಿದ್ದು, ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದರೆ ಇದೆ ಹೋಬಳಿಯ ನಾಕೀಕೆರೆ ಗ್ರಾಮದ ಬಸವರಾಜಪ್ಪ ಎಂಬುವವರು 1 ಎಕೆರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಮೆಕ್ಕೆ ಜೋಳ ಸಂಪೂರ್ಣವಾಗಿ ನೆಲಕಚ್ಚಿದೆ. ಶ್ರೀರಾಂಪುರ ಹೋಬಳಿಯ ಕೈನಡು ಕೆರೆ, ಮಾಳಪ್ಪನಹಳ್ಳಿ ಕಟ್ಟೆ ಬಹುತೇಕ ತುಂಬಿದ್ದು ಕೋಡಿ ಹಂತ ತಲುಪಿವೆ. ಒಟ್ಟಾರೆಹಲವು ದಿನಗಳಿಂದ ಮಳೆಗಾಗಿ ಕಾದು ಬಸವಳಿದ್ದ ರೈತನ ಮೊಗದಲ್ಲಿ ಹಸ್ತಾ ಮಳೆ ತನ್ನ ಕೊನೆಯ ದಿನದಲ್ಲಿ ಬಂದಿದ್ದು ಸಂತಸ ಮೂಡಿಸಿದೆ.