ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರೀ ವಾಹನಗಳ ಸಂಚಾರಕ್ಕೆ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರೂ ಇಂದಿಗೂ ಗ್ರಾಮೀಣ ರಸ್ತೆಗಳಲ್ಲಿ ಭಾರೀ ವಾಹನಗಳಲ್ಲಿ ಮರಗಳ ಸಾಗಾಟ ನಿರಾತಂಕವಾಗಿ ನಡೆಯುತ್ತಿದೆ. ಇದರಿಂದಾಗಿ ರಸ್ತೆಗಳು ಸಂಪೂರ್ಣ ಹದಗೆಟ್ಟು ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿರುವುದಾಗಿ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳೆಗಾರ ಉಮೇಶ್ ಅಪ್ಪಣ್ಣ, ಮುಂಗಾರಿನ ಅವಧಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರು ಕುಂಬಳದಾಳು ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರೆಸಾರ್ಟ್ ಕಾಮಗಾರಿ ಹಿನ್ನೆಲೆಯಲ್ಲಿ ಟಿಪ್ಪರ್‌ಗಳ ಮೂಲಕ ಭಾರೀ ಪ್ರಮಾಣದ ಕಲ್ಲು, ಮಣ್ಣು, ಮರಳು ಸಾಗಾಟ ಬಿಳಿಗೇರಿ ರಸ್ತೆಯಲ್ಲಿ ನಡೆಯುತ್ತಿದೆ. ಮತ್ತೊಂದೆಡೆ ಸಿಲ್ವರ್ ಓಕ್ಸ್ ಮತ್ತು ಇತರೆ ಮರಗಳ ಸಾಗಾಟ ಭಾರೀ ವಾಹನಗಳಲ್ಲಿ ಟಾರ್ಪಾಲ್ ಮುಚ್ಚಿಕೊಂಡು ನಡೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತೋಟಗಳಲ್ಲಿ ಕಡಿದ ಮರಗಳನ್ನು ಎಳೆಯಲು ಜೆಸಿಬಿಗಳನ್ನು, ಕ್ರೇನ್‌ಗಳನ್ನು ಈ ಗ್ರಾಮೀಣ ರಸ್ತೆಯಲ್ಲಿ ಎಗ್ಗಿಲ್ಲದೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಶಾಸಕರ ಮಾತು ಲೆಕ್ಕಕ್ಕಿಲ್ಲ:ಶಾಸಕ ಎ.ಎಸ್. ಪೊನ್ನಣ್ಣ ಜಿಲ್ಲಾಡಳಿತದ ಮೂಲಕ ಮುಂಗಾರಿನ ಅವಧಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ. ಆದರೆ, ಶಾಸಕರ ಆದೇಶಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತನ್ನು ನೀಡದೆ ಭಾರಿ ವಾಹನಗಳ ಮೂಲಕ ಮರಗಳ ಸಾಗಾಟ, ಕಲ್ಲು, ಮಣ್ಣಿನ ಸಾಗಾಟ ನಡೆಯುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದರು. ಗ್ರಾಮೀಣ ರಸ್ತೆಯಲ್ಲೆ ೧೦ ಚಕ್ರದ ಲಾರಿಗಳನ್ನು ನಿಲ್ಲಿಸಿಕೊಂಡು ಮರಗಳನ್ನು ತುಂಬುವ, ಸಾಗಾಟ ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ಪ್ರಶ್ನಿಸಲು ಸಾಧ್ಯವಾಗದ ಆತಂಕದ ವಾತಾವರಣವಿದೆ ಎಂದು ಉಮೇಶ್ ಅಪ್ಪಣ್ಣ ಕಳವಳ ವ್ಯಕ್ತಪಡಿಸಿದರು.
ಕಿರಿದಾದ ಗ್ರಾಮೀಣ ರಸ್ತೆಯಲ್ಲಿ ಗ್ರಾಮಸ್ಥರು ಭಾರೀ ವಾಹನಗಳ ಸಂಚಾರದಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮರಗಳ ಸಾಗಾಟದಿಂದ ರಸ್ತೆಯಲ್ಲಿ ಏರ್ಪಟ್ಟ ಹೊಂಡ ಗುಂಡಿಗಳಿಂದ ದ್ವಿಚಕ್ರ ವಾಹನ ಚಾಲನೆ ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದಾಗಿ ತಿಳಿಸಿದರಲ್ಲದೆ, ಶೀಘ್ರ ಈ ಗಾಮೀಣ ರಸ್ತೆಯನ್ನು ದುರಸ್ತಿಪಡಿಸಬೇಕೆಂದು ಒತ್ತಾಯಿಸಿದರು.ಮುಂಗಾರಿನ ಬಳಿಕದ ನವೆಂಬರ್‌ನಿಂದ ಮೇ ತಿಂಗಳವರೆಗೆ ಭಾರೀ ವಾಹನಗಳ ಮೂಲಕ ಮರಗಳ ಸಾಗಾಟ ಸಮಸ್ಯೆಯಾಗಲಾರದು. ಆದರೆ, ಮುಂಗಾರಿನ ಅವಧಿಯಲ್ಲಿ ಮರಗಳ ಕಡಿತಲೆ, ಅವುಗಳ ಸಾಗಾಟ ಗ್ರಾಮೀಣ ರಸ್ತೆಗಳನ್ನು ಹಾಳುಗೆಡಹುತ್ತಿದೆ. ಇನ್ನಾದರು ಭಾರೀ ವಾಹನ ಸಂಚಾರ ನಿರ್ಬಂಧs ಕಟ್ಟುನಿಟ್ಟಾಗಿ ಪಾಲನೆಯಾಗಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಗಿಡ ನೆಡುವ ಮುಚ್ಚಳಿಕೆ ಇದೆಯೇ:ಬೆಳೆಗಾರರು ತಮ್ಮ ತೋಟದ ಮರಗಳನ್ನು ಸ್ವಂತ ಬಳಕೆಗೆ ಕಡಿಯಬೇಕೆಂದಾದಲ್ಲಿ ಅದಕ್ಕೆ ಪರವಾನಗಿ ಪಡೆಯುವ ಸಂದರ್ಭ, ಅರಣ್ಯ ಇಲಾಖೆಗೆ ಮರಗಿಡಗಳನ್ನು ನೆಟ್ಟು ಬೆಳೆಸುವ ಮುಚ್ಚಳಿಕೆ ಬರೆದು ಕೊಡಬೇಕಾಗುತ್ತದೆ. ಆದರೆ, ಪ್ರಸ್ತುತ ಟಿಂಬರ್ ಲಾಬಿಗಳು ಮನಬಂದಂತೆ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದಾರೆ. ಇವರಿಗೆ ಅಂತಹ ಮುಚ್ಚಳಿಕೆ ಇಲ್ಲವೆ ಎಂದು ಪ್ರಶ್ನಿಸಿದರು. ಇಂತಹ ಬೆಳವಣಿಗೆಗಳು ಜಿಲ್ಲೆಯಲ್ಲಿ ಮತ್ತೊಮ್ಮೆ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಬಿಳಿಗೇರಿ ಗ್ರಾಮದ ಬೆಳೆಗಾರರಾದ ತುಂತಜ್ಜೆ ತಿಮ್ಮಯ್ಯ, ಪರ್ಲಕೋಟಿ ಮಾಚಯ್ಯ, ಕೋಟೇರ ಶರಿ ಮುದ್ದಪ್ಪ ಸುದ್ದಿಗೋಷ್ಠಿಯಲ್ಲಿದ್ದರು.