ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿಯ ಹೊಸ ಮಾರ್ಗಗಳ ಅನುಷ್ಠಾನದ ಕುರಿತು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿರೊಂದಿಗೆ ಸಂಸದ ಎಂ.ಮಲ್ಲೇಶ್ ಬಾಬು ನವದೆಹಲಿಯಲ್ಲಿ ಭೇಟಿ ಮಾಡಿ ಚರ್ಚಿಸಿದರು. ಜಿಲ್ಲೆಯಲ್ಲಿ ಈಗಾಗಲೇ ನಡೆಯುತ್ತಿರುವ ರಾಷ್ಟ್ರಿಯ ಹೆದ್ದಾರಿ ೭೫ ರ ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು, ಕೋಲಾರ ಜಿಲ್ಲೆಯು ರಾಜ್ಯ ರಾಜಧಾನಿ ಬೆಂಗಳೂರಿಗೆ ಕೇವಲ ೬೦ ಕೀ.ಮೀ ದೂರದಲ್ಲಿದ್ದು ದೇವನಹಳ್ಳಿಯ ವಿಮಾನ ನಿಲ್ದಾಣವೂ ಸಹ ಕೋಲಾರ ಜಿಲ್ಲೆಗೆ ಸಮೀಪದಲ್ಲಿದೆ. ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಕೋಲಾರ ಲೋಕಸಭಾ ಕ್ಷೇತ್ರವು ಆಂಧ್ರ ತಮಿಳು ನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ದಿಪಡಿಸಬೇಕು ಎಂದು ಕೋರಿದರು.
ಚೈನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ವಿಳಂಬಮಾಲೂರು, ಬಂಗಾರಪೇಟೆ, ಕೆಜಿಎಫ್ ಮೂಲಕ ಹಾದು ಹೋಗಿರುವ ಚೈನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಗೆ ಭೂಮಿಯನ್ನು ರೈತರು ನೀಡಿದ್ದು ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳಿಂದ ಕಾಮಗಾರಿ ವಿಳಂಬವಾಗುತ್ತಿದೆ. ಕೆಲ ರೈತರಿಗೆ ಪರಿಹಾರ ಹಣದ ವಿಚಾರವಾಗಿ ಗೊಂದಗಳಿದ್ದು ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ. ಕೋಲಾರಕ್ಕೆ ಕೃಷ್ಣಾ ನೀರುಆಂಧ್ರದ ಸಿಎಂ ಚಂದ್ರಬಾಬು ನಾಯ್ದು ಎನ್.ಡಿ.ಎ ಕೂಟದಲ್ಲಿ ಭಾಗವಾಗಿದ್ದು ಅವರೊಂದಿಗೆ ಚರ್ಚಿಸಿ ಕೃಷ್ಣಾ ನದಿಯ ನೀರನ್ನು ಕೋಲಾರ ಜಿಲ್ಲೆಗೆ ಹರಿಸಲು ಯೋಜನೆ ವಿಸ್ತರಿಸಬೇಕು ಹಾಗೂ ಮಾಜಿ ಸಂಸದ ಎಸ್.ಮುನಿಸ್ವಾಮಿ ಅವಧಿಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿದ್ದ ರಸ್ತೆ ಅಭಿವೃದ್ದಿ ಕೆಲಸಗಳನ್ನು ಮುಂದುವರೆಸಬೇಕೆಂದು ಸಚಿವ ಕುಮಾರಸಾಮಿ ಅವರಿಗೆ ಮನವಿ ಮಾಡಿದರು. ಕೋಲಾರ ಜಿಲ್ಲೆಯ ಕೆಜಿಎಫ್, ಮುಳಬಾಗಿಲು, ಶ್ರೀನಿವಾಸಪುರ ಮತ್ತು ಮಾಲೂರು ಗಡಿ ಭಾಗಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದ್ದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದರು.