ಭಾರೀ ಗಾಳಿ ಮಳೆ: ಬಂಟ್ವಾಳದಲ್ಲಿ ಅಪಾರ ಹಾನಿ

| Published : Apr 24 2025, 12:07 AM IST

ಸಾರಾಂಶ

ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಹಲವೆಡೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ವಿಪರೀತ ಸೆಕೆ ವಾತಾವರಣವಿತ್ತು. ಸಂಜೆ ವೇಳೆಗೆ ದಿಢೀರನೆ ಮೋಡ ಕವಿದು ಹತ್ತು ನಿಮಿಷಗಳ ಕಾಲ ಮಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಹಲವೆಡೆ ಹಾನಿಯಾಗಿದೆ.

ಪಾಣೆಮಂಗಳೂರು ಗ್ರಾಮದ ಹಾಮದ್ ಬಾವ ಮತ್ತು ಉಸ್ಮಾನ್ ಎಂಬವರ ವಾಸದ ಮನೆಗಳ ಹಂಚು ಛಾವಣಿಗೆ ಹಾನಿಯಾಗಿದೆ. ಪಾಣೆಮಂಗಳೂರು ಗ್ರಾಮದ ವಸಂತಿ ಎಂಬವರ ಮನೆಗೆ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಅಂಶಿಕ ಹಾನಿಯಾಗಿದೆ.ಇಲ್ಲಿನ ಶೇಖಬ್ಬ ಅವರ ಮನೆಗೆ ಹಾನಿಯಾಗಿದೆ. ಮಣಿನಾಲ್ಕೂರು ಗ್ರಾಮದ ನೆಲ್ಯಪಲ್ಕೆ ಎಂಬಲ್ಲಿ ಕುಲ್ಸುಂಬಿ ಎಂಬವರ ವಾಸದ ಮನೆಯ ಹಿಂಬದಿಯ ಗೋಡೆ ಬಿರುಕು ಬಿಟ್ಟಿದ್ದು, ಮನೆಯ ಸುಮಾರು 12 ಶೀಟುಗಳು ಗಾಳಿ ಮಳೆಗೆ ಹಾನಿಯಾಗಿದೆ.

ಮಣಿನಾಲ್ಕೂರು ಗ್ರಾಮದ ಕೊಟ್ಟುಂಜ ಎಂಬಲ್ಲಿ ಪ್ರವೀಣ್ ಆಳ್ವ ಎಂಬವರ ತೋಟದಲ್ಲಿದ್ದ ಮರವೊಂದು ಅಡಕೆ ಮರಗಳ ಮೇಲೆ ಬಿದ್ದು ಸುಮಾರು 35 ಅಡಕೆ ಮರಗಳಿಗೆ ಹಾನಿಯಾಗಿದೆ. ಪಾಣೆಮಂಗಳೂರು ಗ್ರಾಮದ ಗಿರಿಧರ್ ಕಾಮತ್ ಎಂಬವರ ರೈಸ್ ಮಿಲ್ ಹಂಚು ಛಾವಣಿಗೆ ಹಾನಿಯಾಗಿದೆ ಎಂದು ತಹಸೀಲ್ದಾರ್‌ ಅರ್ಚನಾ ಭಟ್‌ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಲ್ಲಿ ಸೋಮವಾರ ರಾತ್ರಿ ಮಳೆಯೊಂದಿಗೆ ಬೀಸಿದ ಭಾರಿ ಗಾಳಿಗೆ ಹಲವೆಡೆ ಹಾನಿ ಸಂಭವಿಸಿದೆ.ದೇರಾರ್ ಶಾರದಾ ಪೂಜಾರಿ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿ ಉಂಟಾಗಿದೆ. ಇನ್ನೊಂದು ತೆಂಗಿನ ಮರ ಬಚ್ಚಲು ಕೊಟ್ಟಿಗೆಗೆ ಬಿದ್ದು ಅದು ಧರಾಶಾಹಿ ಆಗಿದೆ.ಪ್ರಶಾಂತ್ ಎಂಬವರ ಮನೆಯ 20 ಶೀಟ್ ಗಳು ಗಾಳಿಗೆ ಹಾರಿ ಹೋಗಿ ಹಾನಿಯಾಗಿದೆ. ಕೇಶವ ಎಂಬವರ ಮನೆಯ ಮೇಲೆ ಅಡಕೆ ಮರ ಬಿದ್ದು ಹಾನಿಯಾಗಿದೆ. ನೂರಾರು ಅಡಕೆ ರಬ್ಬರ್ ಮರಗಳು ಮುರಿದು ಬಿದ್ದಿವೆ.

ಮಂಗಳೂರು ನಗರ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಮಂಗಳವಾರ ಸಂಜೆಯ ವೇಳೆಗೆ ಕೆಲಕಾಲ ಉತ್ತಮ ಮಳೆ ಸುರಿದಿದೆ.ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ವಿಪರೀತ ಸೆಕೆ ವಾತಾವರಣವಿತ್ತು. ಸಂಜೆ ವೇಳೆಗೆ ದಿಢೀರನೆ ಮೋಡ ಕವಿದು ಹತ್ತು ನಿಮಿಷಗಳ ಕಾಲ ಮಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ.ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಕೆಲವೆಡೆ ಹನಿ ಚದುರಿದಂತೆ ಮಳೆಯಾಗಿರುವ ಕುರಿತು ವರದಿಯಾಗಿದೆ.