ನಿವೇಶನಕ್ಕಾಗಿ ಡಿಸಿ ಕಚೇರಿ ಎದುರು ಹೆಬಸೂರು ಗ್ರಾಮಸ್ಥರ ಪ್ರತಿಭಟನೆ

| Published : Aug 03 2024, 12:35 AM IST

ಸಾರಾಂಶ

ಹೆಬಸೂರು ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಗೋವಿಂದಪ್ಪ ಸೋಮಪ್ಪ ನಲವಡಿ ಎಂಬುವರು 2003ರಲ್ಲಿ ಸಂಘಕ್ಕೆ ಭೂಮಿ ಖರೀದಿಸಲು ಫಕ್ಕೀರವ್ವ ರಂಗನಗೌಡ ಪಾಟೀಲ ಕುಲಕರ್ಣಿ ಅವರ ಜಮೀನು ನೋಡಿದ್ದರು. ಈ ಹಣದ ವ್ಯವಹಾರಕ್ಕಾಗಿ 150 ಕುಟುಂಬಗಳಿಂದ ತಲಾ ₹ 5 ಸಾವಿರ ತುಂಬಿಸಿಕೊಂಡಿದ್ದರು.

ಧಾರವಾಡ:

ನಿವೇಶನಕ್ಕೆಂದು ₹ 5000 ತುಂಬಿ 23 ವರ್ಷ ಕಳೆದರೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.

ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಗೋವಿಂದಪ್ಪ ಸೋಮಪ್ಪ ನಲವಡಿ ಎಂಬುವರು 2003ರಲ್ಲಿ ಸಂಘಕ್ಕೆ ಭೂಮಿ ಖರೀದಿಸಲು ಫಕ್ಕೀರವ್ವ ರಂಗನಗೌಡ ಪಾಟೀಲ ಕುಲಕರ್ಣಿ ಅವರ ಜಮೀನು ನೋಡಿದ್ದರು. ಈ ಹಣದ ವ್ಯವಹಾರಕ್ಕಾಗಿ ಗ್ರಾಮದ ಜನರಿಗೆ ₹ 5 ಸಾವಿರ ನೀಡಿದವರಿಗೆ ನಿವೇಶನ ನೀಡಲಾಗುವುದು ಎಂದು ಹೇಳಿ 150 ಕುಟುಂಬಗಳಿಂದ ತಲಾ ₹ 5 ಸಾವಿರ ತುಂಬಿಸಿಕೊಂಡಿದ್ದರು. ಆಗ ನೀಡಿದ ಹಣದಿಂದ ಬರೀ ಸಂಚಕಾರ ಮಾತ್ರ ಮಾಡಿಕೊಂಡಿದ್ದು ಖರೀದಿ ಮಾಡಿರಲಿಲ್ಲ. ಸಂಘದ ಅಧ್ಯಕ್ಷರು ಪೂರ್ತಿ ಹಣತುಂಬದ ಕಾರಣ ಹೊಲದ ಮಾಲೀಕರು ನ್ಯಾಯಾಲದ ಮೊರೆ ಹೋಗಿ ಹೊಲವನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇದೀಗ ಗುರುತಿಸಿದ ಜಾಗವೂ ಇಲ್ಲ, ಹಣವೂ ಇಲ್ಲದಾಗಿದ್ದು ಈ ಪ್ರಕರಣದಲ್ಲಿ ಸಂಘದ ಅಧ್ಯಕ್ಷರು ಹಣ ಲಪಟಾಯಿಸಿದ್ದು ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಮನವಿ ಮಾಡಿದರು.

ಈ ಕುರಿತು ತಹಸೀಲ್ದಾರ್‌ರಿಗೂ ದೂರು ನೀಡಿದ್ದು ಸ್ಪಂದಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವೇ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಗ್ರಾಮಸ್ಥರಾದ ಸುರೇಶ ಮುದರೆಡ್ಡಿ, ಹನುಮಂತಪ್ಪ ತಳವಾರ, ಮಾರುತಿ ಜಾಧವ, ದೇವಕ್ಕ ದಾಸರ, ರತ್ನವ್ವ ಹರ್ಲಾಪೂರ, ರಜಾಕ ಫೀರಖಾನ್‌ ಎಚ್ಚರಿಸಿದರು.