12 ರಿಂದ ರಾಷ್ಟ್ರೀಯ ಗಾಂಧಿ ಶಿಲ್ಪ ಬಜಾರ್

| Published : Sep 10 2025, 01:03 AM IST

ಸಾರಾಂಶ

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸುವರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದ ಹೊರ ವರ್ತುಲ ರಸ್ತೆಲ್ಲಿರುವ ಜೆಎಸ್ಎಸ್ ಅರ್ಬನ್ ಹಾತ್‌ ನಲ್ಲಿ ಕೇಂದ್ರ ಜವಳಿ ಸಚಿವಾಲಯದ ಕರಕುಶಲ ವಿಭಾಗದ ಸಹಕಾರದಲ್ಲಿ ಸೆ.12 ರಿಂದ 21 ರವರೆಗೆ ರಾಷ್ಟ್ರೀಯ ಮಟ್ಟದ ಗಾಂಧಿ ಶಿಲ್ಪ ಬಜಾರ್- ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ ಎಂದು ಕರಕುಶಲ ಸೇವಾಕೇಂದ್ರ ಸಹಾಯಕ ನಿರ್ದೇಶಕ ಎಸ್. ವಿನೋದ್ ಕುಮಾರ್ ತಿಳಿಸಿದರು.ಈ ಮೇಳವನ್ನು ಸೆ.12ರ ಸಂಜೆ 4ಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸುವರು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕಿ ಡಾ.ಎಂ. ರೂಪಕಲಾ ಶಶಿಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಮೊದಲಾದವರು ಪಾಲ್ಗೊಳ್ಳುವರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ದೇಶದ 25 ಹೆಚ್ಚು ರಾಜ್ಯಗಳ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕರಕುಶಲಕರ್ಮಿಗಳು, ಕೈಮಗ್ಗ ನೇಕಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡುವರು. ಮರದ ಶಿಲ್ಪಗಳು, ಕಂಚಿನ ವಿಗ್ರಹಗಳು, ಆಭರಣಗಳು, ಸೀರೆ ಮುಂತಾದ ಉಡುಪುಗಳು, ಚಪ್ಪಲಿಗಳು ದೊರೆಯಲಿವೆ‌. ಈ ಮೇಳವು ಬೆಳಗ್ಗೆ 10.30 ರಿಂದ ರಾತ್ರಿ 9 ರವರೆಗೆ ತೆರೆದಿರಲಿದೆ ಎಂದು ಅವರು ವಿವರಿಸಿದರು.ಜೆಎಸ್ಎಸ್ ಅರ್ಬನ್ ಹಾತ್ ಯೋಜನಾಧಿಕಾರಿ ಶಿವನಂಜಸ್ವಾಮಿ, ಸಂಯೋಜಕ ರಾಕೇಶ್ ಇದ್ದರು.