ಮಾನವ ಸರಪಳಿ ವೇಳೆ ಹೆಜ್ಜೇನು ದಾಳಿ

| Published : Sep 16 2024, 01:52 AM IST

ಸಾರಾಂಶ

ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಹಲವರು ತಾಡಪತ್ರಿ ಹಾಗೂ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡದರು

ಲಕ್ಷ್ಮೇಶ್ವರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ವೇಳೆ ಹೆಜ್ಜೇನು ದಾಳಿ ಮಾಡಿದ ಘಟನೆ ಸಮೀಪದ ಬಾಲೆಹೊಸೂರ ಗ್ರಾಮದ ಹೊರವಲಯದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ಶಿಕ್ಷಕರಿಗೆ ಶಾಸಕ ಡಾ. ಚಂದ್ರು ಲಮಾಣಿ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದ ವೇಳೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಲು ಆರಂಭಿಸಿದೆ. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಹಲವರು ತಾಡಪತ್ರಿ ಹಾಗೂ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡದರು.

ಶಾಸಕ ಡಾ. ಚಂದ್ರು ಲಮಾಣಿ ಪ್ರಜಾಪ್ರಭುತ್ವ ದಿನಾಚರಣೆ ಮುಗಿಸಿ ಅದೆ ಮಾರ್ಗದಲ್ಲಿ ವಾಪಸ್ ಹೋಗುತ್ತಿರುವಾಗ ಹೆಜ್ಜೇನು ದಾಳಿಯಿಂದ ಗಾಯಗೊಂಡ ಶಿಕ್ಷಕಿ ಸರಸ್ವತಿ ಗುಡಿಸಾಗರ, ಸರೋಜಾ ದಿಂಡೂರ ಅವರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಬಂದು ಬಾಲೆಹೊಸೂರಿನ ಸರ್ಕಾರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದರು.