ಸಾರಾಂಶ
-ಸುರಪುರ ನಗರಸಭೆಯ ನೂತನ ಉಪಾಧ್ಯಕ್ಷ ರಾಜಾ ಪಿಡ್ಡನಾಯಕ
-------ಕನ್ನಡಪ್ರಭ ವಾರ್ತೆ ಸುರಪುರ
ಸುರಪುರ ನಗರಸಭೆಯ, 2ನೇ ಅವಧಿಗಾಗಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹೀನಾ ಕೌಸರ್ ಹಾಗೂ ಉಪಾಧ್ಯಕ್ಷರಾಗಿ ಇದೇ ಪಕ್ಷದ ರಾಜಾ ಪಿಡ್ಡನಾಯಕ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಆಯ್ಕೆ ಅವಿರೋಧವಾದರೆ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಅಭ್ಯರ್ಥಿ ಪರ ಗೆಲುವು ಕಂಡಿತು.ಮೊದಲ ಅವಧಿಯಲ್ಲಿ ಬಿಜೆಪಿ ನಗರಸಭೆಯ ಗದ್ದುಗೇರಿದ್ದರೆ, ಎರಡನೇ ಅವಧಿಯಲ್ಲಿ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡಿದೆ.
ಮಂಗಳವಾರ ಬೆಳಗ್ಗೆ 10 ಗಂಟೆಯೊಳಗೆ ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಒಂದು ನಾಮಪತ್ರ ಸಲ್ಲಿಸಲಾಗಿತ್ತು. ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಒಂದೊಂದು ನಾಮಪತ್ರ ಸಲ್ಲಿಸಲಾಯಿತು. 10 ಗಂಟೆಯಿಂದ 10:30 ರೊಳಗೆ ಯಾರೊಬ್ಬರೂ ನಾಮಪತ್ರ ತೆಗೆದುಕೊಳ್ಳಲಿಲ್ಲ. ಇದರಿಂದ 12 ಗಂಟೆಗೆ ಆರಂಭವಾದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾಧಿಕಾರಿ ಕೈ ಎತ್ತುವ ಮೂಲಕ ಆಯ್ಕೆ ಮಾಡುವಂತೆ ಸೂಚಿಸಿದ್ದರಿಂದ, ಬಿಜೆಪಿ ಅಭ್ಯರ್ಥಿ ವಿಷ್ಣು ಗುತ್ತೇದಾರ್ ಪರ 12 ಮತಗಳು ಬಂದರೆ ಕಾಂಗ್ರೆಸ್ ಅಭ್ಯರ್ಥಿ ರಾಜಾ ಪಿಡ್ಡನಾಯಕ ಪರ 17 ಮತಗಳು ಬಂದವು. ಇದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ರಾಜಾ ಪಿಡ್ಡನಾಯಕ ಆಯ್ಕೆಯಾದರು.
ಕಾಂಗ್ರೆಸ್ ಅಭ್ಯರ್ಥಿ ಪರ ಸಂಸದ ಕುಮಾರ ನಾಯಕ, ಶಾಸಕ ರಾಜಾ ವೇಣುಗೋಪಾಲ ನಾಯಕ ಮತ ಚಲಾಯಿಸಿದರು. ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರು ಯಾರೊಬ್ಬರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಹೀನಾ ಕೌಸರ್ ಶಕೀಲ್ ಅಹಮದ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜಾ ಪಿಡ್ಡನಾಯಕ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.ಸಹಾಯಕ ಚುನಾವಣಾಧಿಕಾರಿಯಾಗಿ ಎಚ್.ಎ. ಸರಕಾವಸ್ ಕಾರ್ಯ ನಿರ್ವಹಿಸಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಂಸದ ಜಿ. ಕುಮಾರನಾಯಕ, ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಸನ್ಮಾನಿಸಿದರು.
ಸಂಭ್ರಮ: ಕಾಂಗ್ರೆಸ್‌ನಿಂದ ಅಧ್ಯಕ್ಷರು-ಉಪಾಧ್ಯಕ್ಷರು ಆಯ್ಕೆಯಾಗುತ್ತಿದ್ದಂತೆ ನಗರಸಭೆಯ ಎದುರುಗಡೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಒಬ್ಬರಿಗೊಬ್ಬರು ಗುಲಾಲು ಎರಚಿಗೊಂಡು ಸಂಭ್ರಮಿಸಿದರು. ಶಾಸಕರು ಮತ್ತು ಸಂಸದರು, ನಗರಸಭೆಯ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರಸಭೆಯ ಮುಂದೆ ಜಮಾವಣೆಗೊಂಡು ಜೈಕಾರ ಕೂಗಿದರು.ನಗರಸಭೆ ಸದಸ್ಯರಾದ ನಾಸೀರ್ ಕುಂಡಾಲೆ, ಕಮ್ರುದ್ದೀನ್, ಜುಮ್ಮಣ್ಣ ಕೆಂಗುರಿ, ಅಹಮದ್ ಶರೀಫ್ ಹಾಗೂ ಮುಖಂಡರಾದ ವೆಂಕೋಬ ಯಾದವ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ರಾಜಾ ಸಂತೋಷ ನಾಯಕ, ರಾಜಾ ವಿಜಯಕುಮಾರ ನಾಯಕ, ರಾಜಾ ಸುಶಾಂತ ನಾಯಕ, ನಿಂಗರಾಜ ಬಾಚಿಮಟ್ಟಿ, ಭೀಮರಾಯ ಮೂಲಿಮನಿ, ಅಬ್ದುಲ್ ಮಜೀದ್, ರಮೇಶ ದೊರೆ, ಅಬ್ದುಲ್ ಗಪೂರ ನಗನೂರಿ, ಮೆಹಬೂಬ್ ಸಾಬ್ ಒಂಟಿ, ಬೀರಲಿಂಗ ಬಾದ್ಯಾಪುರ ಇದ್ದರು.
--10ವೈಡಿಆರ್9 : ಸುರಪುರ ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಂಸದ ಕುಮಾರ ನಾಯಕ, ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಸನ್ಮಾನಿಸಿದರು.
10ವೈಡಿಆರ್10 : ಸುರಪುರ ನಗರಸಭೆಯ ನೂತನ ಅಧ್ಯಕ್ಷ ಹೀನಾ ಕೌಸರ್10ವೈಡಿಆರ್11 : ಸುರಪುರ ನಗರಸಭೆಯ ನೂತನ ಉಪಾಧ್ಯಕ್ಷ ರಾಜಾ ಪಿಡ್ಡನಾಯಕ