ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಕರಾವಳಿ, ಮಲೆನಾಡು, ಬಯಲುಸೀಮೆನ್ನೊಳಗೊಂಡ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರವನ್ನು ಸಮೃದ್ಧ ಅಭಿವೃದ್ಧಿಗೊಳಿಸುವುದು ನನ್ನ ಕನಸಾಗಿದೆ. ಇದಕ್ಕಾಗಿ ಪ್ರತ್ಯೇಕ ಪ್ರಣಾಳಿಕೆ ರಚಿಸಿದ್ದೇನೆ. ನಾನು ಗೆದ್ದರೇ ಈ ಪ್ರಣಾಳಿಕೆ ಪ್ರಮಾಣಿಕವಾಗಿ ಜಾರಿಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಅವರು ಸಮೃದ್ಧ ಉಡುಪಿ ಚಿಕ್ಕಮಗಳೂರು- ಜೆಪಿ ಹೆಗ್ಡೆ ಪ್ರಣಾಳಿಕೆ ಮುಖ್ಯಾಂಶ ಮತದಾರರಿಗೆ ಬಿಡುಗಡೆ ಮಾಡಿದ್ದಾರೆ.
ನಿಷ್ಕ್ರಿಯವಾಗಿರುವ ಅಡಿಕೆ ಸಂಶೋಧನಾ ಕೇಂದ್ರದ ಪುನಶ್ಚೇತನ, ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಗೋರಖ್ ಸಿಂಗ್ ವರದಿ ಅನುಷ್ಠಾನ, ಅಡಿಕೆ ಬೆಳೆ ಎಲೆಚುಕ್ಕಿ ರೋಗದ ನಿವಾರಣೆಗೆ ಸಂಶೋಧನೆ, ಚಿಕ್ಕಮಗಳೂರಿನಲ್ಲಿ ಕೆಎಮ್ಎಫ್ ಘಟಕ ಸ್ಥಾಪಿಸಿ ಹೈನುಗಾರಿಕೆಗೆ ಉತ್ತೇಜನ, ನೀರಾದಿಂದ ಉದ್ಯೋಗಾವಕಾಶ ಸೃಷ್ಟಿಗೆ ಯೋಜನೆ, ಮಲೆನಾಡಿನ ಕೃಷಿ ಉತ್ಪನ್ನಗಳಿಗೆ ಜಿಐ ಟ್ಯಾಗ್ ಪಡೆಯಲು ಕ್ರಮ, ಈರುಳ್ಳಿ ಇತರ ತರಕಾರಿಗಳಿಗೆ ಕೋಲ್ಡ್ ಸ್ಟೋರೇಜ್ ಸ್ಥಾಪನೆ.ಕಾಡು ಪ್ರಾಣಿಗಳಿಂದಾಗುವ ನಷ್ಟ ಪರಿಹಾರ ಹೆಚ್ಚಳ, ಮಲೆನಾಡಿನ ಜನವಾಸ ಸ್ಥಳಗಳ ಪುನರ್ ಸರ್ವೇ, ಅಲ್ಲಿನ ಮನೆಗಳಿಗೆ ನಮೂನೆ 9-11ಎ ನೀಡುವುದು, ಪ್ರತಿವರ್ಷ ಏ.15 ಮಲೆನಾಡ ದಿನಾಚರಣೆ, ಮಲೆನಾಡನ್ನು ವಿಶೇಷ ಕೃಷಿವಲಯ ಘೋಷಣೆಗೆ ಪ್ರಯತ್ನ.
ಕರಾವಳಿ ಅಳಿವೆ, ಬಂದರಿನ ಡ್ರಜ್ಜಿಂಗ್, ಬಂದರಿನ ತ್ಯಾಜ್ಯ ವಿಲೇವಾರಿ ಸ್ವಚ್ಚತೆಗೆ ಆದ್ಯತೆ ಮೀನುಗಾರಿಕಾ ಕಾರ್ಮಿಕರಿಗೂ ಅಸಂಘಟಿತ ಕಾರ್ಮಿಕರ ಸೌಲಭ್ಯ, ಮಹಿಳಾ ಮೀನುಗಾರರಿಗೆ ಬಡ್ಡಿ ರಹಿತ ಸಾಲ, ನಿವೃತ್ತ ಮೀನುಗಾರರಿಗೆ ಪಿಂಚಣಿ, ನಾಡದೋಣಿಗಳ ಸೀಮೆಎಣ್ಣೆ ಸಬ್ಸಿಡಿ 50 ರು.ಗೆ ಹೆಚ್ಚಳ, ಸಂಕಷ್ಟ ಪರಿಹಾರ 10 ಲಕ್ಷ ರು.ಗೆ, ಮತ್ಸಾಶ್ರಯ ಯೋಜನೆ ಸಹಾಯಧನ 5 ಲಕ್ಷ ರು.ಗೆ ಹೆಚ್ಚಳ, ಕರಾವಳಿಯಲ್ಲಿ ಮೀನುಗಾರಿಕೆಗೆ ಹವಾಮಾನ ಮುನ್ಸೂಚನಾ ಕೇಂದ್ರ ಸ್ಥಾಪನೆ.ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಏರ್ ಸ್ಟ್ರಿಪ್ ನಿರ್ಮಾಣ, ಉದ್ಯೋಗ ಸೃಷ್ಟಿಗೆ ಪ್ರವಾಸೋದ್ಯಮ ನೀತಿ, ದೇವಾಲಯ ಪ್ರವಾಸೋದ್ಯಮ ಅಭಿವೃದ್ಧಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಸಣ್ಣ ಕೈಗಾರಿಕಾ ವಸಾಹತು ಅಭಿವೃದ್ಧಿ, ಮಲೆನಾಡಿನಲ್ಲಿ ವಿಶೇಷ ಕೃಷಿ ಕಾರಿಡಾರ್, ಮೀನುಗಾರಿಕಾ ಕೈಗಾರಿಕಾ ವಲಯ, ಸಮುದ್ರ ಆಹಾರ ಸಂಸ್ಕರಣಾ ವಲಯ ಸ್ಥಾಪನೆ.
ಉಡುಪಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಚಿಕ್ಕಮಗಳೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಸುಸಜ್ಜಿತ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಕ್ರಮ. ಎಸ್ಎಆರ್ ಎಫ್ಎಇಎಸ್ ಐ ಕಾಯ್ದೆ ವ್ಯಾಪ್ತಿಯಿಂದ ಕಾಫಿ ಬೆಳೆ ಪ್ರದೇಶ ಮುಕ್ತಗೊಳಿಸಲು ಕ್ರಮ, ಕಾಫಿ ಬೆಳೆಗಾರರಿಗೆ ಶೇ 4 ದರದಲ್ಲಿ ಸಾಲ, ಫಾರಂ ನಂ. 53, 57, 94ಸಿ ಅಡಿಯಲ್ಲಿ ಭೂರಹಿತರಿಗೆ, ಸಣ್ಣರೈತರಿಗೆ ರೈತಕಾರ್ಮಿಕರಿಗೆ ಜಮೀನುಗಳ/ಮನೆಗಳ ಮಂಜೂರಾತಿ ಶೀಘ್ರ ಪೂರ್ಣಗೊಳಿಸಲು ಪ್ರಯತ್ನ, ಅಡಕೆ ಚುಕ್ಕಿ ರೋಗ ಮತ್ತು ಹಳದಿ ರೋಗ ನಿಯಂತ್ರಣಕ್ಕೆ ಅನುದಾನ - ರೋಗ ನಿರ್ವಹಣೆ,ಅತಿವೃಷ್ಟಿ/ಅನಾವೃಷ್ಟಿಯಿಂದ ತೋಟಗಾರಿಕಾ ಬೆಳೆಗಳಿಗೆ ಈಗಿರುವ 2 ಹೆಕ್ಟೇರ್ ವ್ಯಾಪ್ತಿ 10 ಹೆಕ್ಟೇರ್ ಗೆ ವಿಸ್ತರಿಸುವುದು, ಹವಾಮಾನ ವೈಪರೀತ್ಯದಿಂದ ನಾಶವಾಗುವ ಕಾಫಿ ಬೆಳೆಗೆ ವಿಮೆಗೆ ಪ್ರಯತ್ನ ಮಾಡಲಾಗುವುದು ಎಂದು ಹೆಗ್ಡೆ ಅವರು ಹೇಳಿದ್ದಾರೆ.