ಕುಮಟಾದಿಂದ ಹೆಗಡೆ ರಸ್ತೆಯು ಹಲವಾರು ಕಡೆ ತೀರಾ ಇಕ್ಕಟ್ಟಾಗಿದೆ. ಕೆಲವೆಡೆ ಗಟಾರಕ್ಕೂ ಜಾಗವಿಲ್ಲದಂತಾಗಿದ್ದು, ಮಳೆಗಾಲದಲ್ಲಿ ಸಂಪೂರ್ಣ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ.
ಕುಮಟಾ: ತಾಲೂಕಿನ ಹೆಗಡೆ ಗ್ರಾಮದ ಮುಖ್ಯ ರಸ್ತೆಯನ್ನು ಅಗಲಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ವಿನಂತಿಸಿ ಗ್ರಾಮಸ್ಥರು ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕುಮಟಾದಿಂದ ಹೆಗಡೆ ರಸ್ತೆಯು ಹಲವಾರು ಕಡೆ ತೀರಾ ಇಕ್ಕಟ್ಟಾಗಿದೆ. ಕೆಲವೆಡೆ ಗಟಾರಕ್ಕೂ ಜಾಗವಿಲ್ಲದಂತಾಗಿದ್ದು, ಮಳೆಗಾಲದಲ್ಲಿ ಸಂಪೂರ್ಣ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಅತಿಹೆಚ್ಚು ಜನವಾಹನ ಸಂಚಾರ ಇರುವ ಮಾರ್ಗವಾಗಿರುವುದರಿಂದ ರಸ್ತೆಯ ಇಕ್ಕಟ್ಟಾದ ಭಾಗಗಳಲ್ಲಿ ವರ್ಷವಿಡೀ ಸಮಸ್ಯೆಯನ್ನು ಎದುರಿಸಬೇಕಾಗಿದೆ.ಮುಖ್ಯವಾಗಿ ಇತ್ತೀಚೆಗೆ ತಾರಿಬಾಗಿಲದಲ್ಲಿ ಹೆಗಡೆ ಹಾಗೂ ಪಕ್ಕದ ಮಿರ್ಜಾನ ನಡುವೆ ಸಂಪರ್ಕಕೊಂಡಿಯಾಗಿ ಅಘನಾಶಿನಿ ನದಿಗೆ ಸೇತುವೆ ನಿರ್ಮಿಸಲಾಗಿದೆ. ಸೇತುವೆಯನ್ನು ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರಕ್ಕೆ ತೆರವುಗೊಳಿಸಿಲ್ಲವಾದರೂ ಬೈಕ್, ರಿಕ್ಷಾ ಸಹಿತ ಲಘು ವಾಹನಗಳು ಸೇತುವೆಯ ಮೇಲಿಂದ ಸಂಚರಿಸುತ್ತಿವೆ.
ಹೆಗಡೆ ಸೇತುವೆಯ ಕಾರಣದಿಂದ ದಿವಗಿ ಸೇತುವೆಯ ಮೇಲಿಂದ ಕುಮಟಾ ನಡುವೆ ಸಂಚರಿಸುತ್ತಿದ್ದವರಿಗೆ ಸುಮಾರು ೯ ಕಿಮೀ ಉಳಿತಾಯವಾಗುತ್ತಿದೆ. ಹೀಗಾಗಿ ಹೆಗಡೆ ರಸ್ತೆಯಲ್ಲಿ ವಾಹನ ದಟ್ಟಣೆ ಬಹಳ ಹೆಚ್ಚಾಗಿದೆ. ಆದರೆ ಹೆಗಡೆ ರಸ್ತೆಯ ಇಕ್ಕಟ್ಟಾದ ಭಾಗಗಳಲ್ಲಿ ಎದುರಿನಿಂದ ಬಸ್ ಆಥವಾ ಟ್ರಕ್ ಬಂದರೆ ಬೈಕ್ ಕೂಡಾ ದಾಟಲಾಗದಷ್ಟು ಸಮಸ್ಯೆ ಮೊದಲಿನಿಂದಲೂ ಚಾಲ್ತಿಯಲ್ಲಿದ್ದು, ಈಗ ಹೆಚ್ಚಾಗಿದೆ.ಆದ್ದರಿಂದ ಶೀಘ್ರ ಕುಮಟಾ- ಹೆಗಡೆ ರಸ್ತೆಯನ್ನು ಅಗಲಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಪಘಾತಗಳು ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿಯನ್ನು ತಹಸೀಲ್ದಾರ್, ಉಪವಿಭಾಗಾಧಿಕಾರಿಯವರಿಗೂ ಸಲ್ಲಿಸಲಾಯಿತು. ಹೆಗಡೆ ಗ್ರಾಮಸ್ಥರಾದ ಎನ್.ವಿ. ನಾಯ್ಕ, ಡಿ.ಎಸ್. ನಾಯ್ಕ, ಗಣೇಶ ನಾಯ್ಕ, ಎಸ್.ವಿ. ನಾಯ್ಕ ರಾಮಕೃಷ್ಣ ಪಟಗಾರ, ವಿನಾಯಕ ಪಟಗಾರ, ವಿಜಯ ಶಾನಭಾಗ, ಅಮರನಾಥ ಭಟ್, ಶ್ರೀಧರ ಅಂಬಿಗ, ರಾಮಾ ಮುಕ್ರಿ, ಉಮೇಶ ನಾಯ್ಕ ಇತರರು ಇದ್ದರು.