ಸಾರಾಂಶ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗೆ ತಲುಪಬೇಕು. ಈ ಮೂಲಕ ಸರ್ಕಾರ ಆಶಯ ಈಡೇರಿಸಬೇಕಾಗಿದೆ ಎಂದು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ವಿನಾಯಕ ಕುರುಬರ ಹೇಳಿದರು.
ಅಳ್ನಾವರ:
ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳು ಎಲ್ಲ ಫಲಾನುಭವಿಗಳಿಗೆ ತಲುಪಬೇಕು. ಯೋಜನೆಯ ಸಫಲತೆಗೆ ಸಮಿತಿ ಸದಸ್ಯರು, ಅಧಿಕಾರಿಗಳು ಶ್ರಮಿಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ವಿನಾಯಕ ಕುರುಬರ ಹೇಳಿದರು.ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿ ನಡೆದ ಪ್ರಥಮ ಸಭೆಯಲ್ಲಿ ಐದು ಇಲಾಖೆಗಳ ಪ್ರಗತಿ ಪರಿಶೀಲಿಸಿ, ಸದಸ್ಯರ ಅಹವಾಲು ಆಲಿಸಿ ಮಾತನಾಡಿದರು.
ಎಲ್ಲರ ಸಹಕಾರದಿಂದ ಜಿಲ್ಲೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ ಪ್ರಥಮ ತಾಲೂಕು ಮಾಡಲು ಶ್ರಮಿಸಲಾಗುವುದು ಎಂದ ಅವರು, ಬರುವ ದಿನದಲ್ಲಿ ಸಮಿತಿ ಸಭೆಗಳನ್ನು ಗ್ರಾಮ ಪಂಚಾಯಿತಿವಾರು ನಡೆಸುವ ಉದ್ದೇಶವಿದೆ. ಯಾರಿಗಾದರೂ ಯೋಜನೆ ತಲುಪದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಜತೆ ಅವರ ಮನೆಗಳಿಗೆ ಭೇಟಿ ನೀಡಿ ಪರಿಹಾರ ಸೂಚಿಸಲಾಗುವುದು. ಸಮಸ್ಯೆ ಆಲಿಕೆಗೆ ಸದಸ್ಯರ ತಾಲೂಕು ಮಟ್ಟದ ವಾಟ್ಸ್‌ಆ್ಯಪ್ ಗುಂಪು ರಚಿಸಲಾಗಿದೆ ಎಂದರು.ಪಟ್ಟಣದ ಯುವಕರಿಗೆ ನೌಕರಿ ದೊರಕಿಸಲು ಉದ್ಯೋಗ ಮೇಳ ಆಯೋಜಿಸುವ ಗುರಿ ಇದೆ. ಸಚಿವ ಸಂತೋಷ ಲಾಡ ಅವರ ಮಾರ್ಗದರ್ಶನದಲ್ಲಿ ಕ್ರಿಯಾಶೀಲ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ತಾಪಂ ಇಒ ಪ್ರಶಾಂತ ತುರ್ಕಾಣಿ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ತಿಂಗಳು ಸಭೆ ನಡೆಸುವುದು, ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.ಅನ್ನಭಾಗ್ಯ ಯೋಜನೆ ಬಗ್ಗೆ ಕಂದಾಯ ಇಲಾಖೆಯ ವಿನಾಯಕ ದೀಕ್ಷಿತ , ಗ್ರಹಲಕ್ಷ್ಮಿ ಯೋಜನೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಉಮಾ ಬಳ್ಳೊಳ್ಳಿ, ಹೆಸ್ಕಾಂ ಬಗ್ಗೆ ಸಹಾಯಕ ಎಂಜಿನಿಯರ್ ಕೆ.ಎಲ್ ನಾಯಕ, ಸ್ತ್ರೀಶಕ್ತಿ ಯೋಜನೆ ಪ್ರಗತಿ ಬಗ್ಗೆ ಹಳಿಯಾಳ ಬಸ್ ಡಿಪೋ ಮ್ಯಾನೇಜರ್ ಆರ್.ಬಿ. ರೋಗಿ ಹಾಗೂ ಯುವನಿಧಿ ಯೋಜನೆ ಬಗ್ಗೆ ಕೌಶಲಾಭಿವೃದ್ಧಿ ಇಲಾಖೆಯ ಅಧಿಕಾರಿ ಮಹೇಶ ಮಾಳವಾಡೆಕರ ಮಾಹಿತಿ ನೀಡಿದರು.
ಸಮಿತಿ ಸದಸ್ಯರಾದ ರಾಜು ಪನ್ನಾಳಕರ, ಮಂಜುನಾಥ ಕೊಳೆನ್ನವರ, ಫಕ್ಕೀರಪ್ಪ ದಬಾಲಿ, ಮಲಿಕ ಅಂಚಿ, ಕಲ್ಮೇಶ ಬಡಿಗೇರ, ಫಾರುಖ್ ಅಂಬಡಗಟ್ಟಿ, ಶಂಕರ ಕಲಾಜ, ಸತೀಶ ಬಡಸ್ಕರ, ಎಂ.ಕೆ. ಭಾಗವಾನ, ಪುಷ್ಪಾವತಿ ಆನಂತಪುರ, ಸಲೀಂ ತಡಕೋಡ, ಮಹಾಂತೇಶ ಬೋರಿಮನಿ, ರಾಹುಲ್ ಶಿಂಧೆ ಹಾಗೂ ಹಿರಿಯರಾದ ಪರಮೇಶ್ವರ ತೇಗೂರ, ಸತ್ತಾರ ಬಾತಖಂಡಿ ಇದ್ದರು.