ಜಿಲ್ಲೆಯಲ್ಲಿ ಆಹಾರ ಯೋಜನೆಗಳನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸುವ ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು (ಎನ್‌ಎಫ್‌ಎಸ್ಎ) ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳು ಸಹಕರಿಸಬೇಕು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ತಿಳಿಸಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ ಆಹಾರ ಯೋಜನೆಗಳನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸುವ ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು (ಎನ್‌ಎಫ್‌ಎಸ್ಎ) ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳು ಸಹಕರಿಸಬೇಕು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ತಿಳಿಸಿದರು.ಕರ್ನಾಟಕ ರಾಜ್ಯ ಆಹಾರ ಆಯೋಗವು ಶಿವಮೊಗ್ಗ ಜಿಲ್ಲಾ ಪ್ರವಾಸ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಜಿ.ಪಂ ಸಭಾಂಗಣದಲ್ಲಿ ನಡೆಸಲಾದ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯು ಆಹಾರ ಹಕ್ಕಿಗೆ ಕಾನೂನಾತ್ಮಕ ಭದ್ರತೆ ನೀಡಿದ್ದು, ಸರ್ಕಾರ ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರಿಗೆ ವಿವಿಧ ಆಹಾರ ಯೋಜನೆಗಳಾದ ಅನ್ನಭಾಗ್ಯ, ಪಿಎಂ ಪೋಷಣ್, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಮಾತೃ ವಂದನಾ, ಗರ್ಭಿಣಿ, ಬಾಣಂತಿಯರಿಗೆ, ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ, ಸರ್ಕಾರಿ ವಸತಿ ನಿಲಯಗಳಲ್ಲಿ ನೀಡುವ ಆಹಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡುವ ಆಹಾರ, ಅಪೌಷ್ಟಿಕತೆವುಳ್ಳ ಮಕ್ಕಳಿಗೆ ನೀಡುವ ಆಹಾರ ಸೇರಿದಂತೆ ಸರ್ಕಾರ ನೀಡುತ್ತಿರುವ ಸಮಗ್ರ ಆಹಾರ ಯೋಜನೆಗಳನ್ನು ಗ್ರಾಮಮಟ್ಟದಿಂದ ಜಿಲ್ಲೆಯ ಮಟ್ಟದವರೆಗೆ ಸಮರ್ಪಕವಾಗಿ ಜಾರಿಗೊಳಿಸಲು, ಫಲಾನುಭವಿಗಳಿಗೆ ಗುಣಮಟ್ಟದೊಂದಿಗೆ ತಲುಪಿಸಲು ಎಲ್ಲಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.ಈ ಎಲ್ಲ ಆಹಾರ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವಿಯೇ ಎಂದು ಪರಿಶೀಲಿಸಲು ನ್ಯಾಯಬೆಲೆ ಅಂಗಡಿಗಳು, ವಿವಿಧ ಹಾಸ್ಟೆಲ್‌ಗಳು, ಮಧ್ಯಾಹ್ನ ಬಿಸಿಯೂಟ ನೀಡುವ ಶಾಲೆಗಳು, ಅಂಗನವಾಡಿ ಕೇಂದ್ರಗಳು, ತಾಲೂಕು ಕಚೇರಿ, ನಿರಾಶ್ರಿತರ ಕೇಂದ್ರಗಳನ್ನು ಭೇಟಿ ನೀಡಿ ಪರಿಶೀಲಿಸಿ, ಲೋಪದೋಷಗಳು ಕಂಡು ಬಂದ ಕಡೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ಮುಖ್ಯವಾಗಿ ಸ್ವಚ್ಛತೆ ಇಲ್ಲದಿರುವುದು, ದಾಸ್ತಾನು ತಾಳೆ ಆಗದಿರುವುದು, ಜಾಗೃತಿ ಸಮಿತಿ ಸದಸ್ಯರ ಹೆಸರನ್ನು ಫಲಕದಲ್ಲಿ ಹಾಕದಿರುವುದು, ತೂಕದ ಮಷೀನ್‌ನಲ್ಲಿ ಲೋಪ, ಕೆಲವೆಡೆ ಕಂಪ್ಯೂಟರ್ ಮತ್ತು ಪ್ರಿಂಟರ್ ಇಲ್ಲದಿರುವುದು ಕಂಡು ಬಂದಿದೆ.

ಅಶೋಕ ನಗರ, ಶೇಷಾದ್ರಿಪುರ ಹಾಗೂ ಹೊಸನಗರ ತಾಲೂಕಿನ ಹುಂಚದ ನ್ಯಾಯಬೆಲೆ ಅಂಗಡಿ ಸೇರಿ ಒಟ್ಟು 3 ನ್ಯಾಯಬೆಲೆ ಅಂಗಡಿಗಳಲ್ಲಿ ಕಂಡುಬಂದ ಲೋಪಕ್ಕಾಗಿ ಅವರ ಪರವಾನಗಿ ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

ಅಣ್ಣಾನಗರದ ಹರ್ಷಿತಾ ಸ್ಟೋರ್ಸ್ ನ್ಯಾಯಬೆಲೆ ಅಂಗಡಿ, ಗುತ್ಯಪ್ಪ ಕಾಲೋನಿಯ ನಾಗರಿಕ ಸೇವಾ ಸಂಘ ನ್ಯಾಯಬೆಲೆ ಅಂಗಡಿ. ಗಾಡಿಕೊಪ್ಪದ ಶಿವಮೂರ್ತಿ ನ್ಯಾಯಬೆಲೆ ಅಂಗಡಿಗಳಿಗೆ ಮತ್ತು ಕಸಬ ರೈತ ಸಂಪರ್ಕ ಕೇಂದ್ರಕ್ಕೆ ನೋಟಿಸ್ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು. ಎಂಎಸ್‌ಪಿಸಿಗೆ ಭೇಟಿ ನೀಡಿದ ವೇಳೆ ಅಕ್ಕಿ ಮತ್ತು ಗೋಧಿ ದಾಸ್ತಾನು ವ್ಯತ್ಯಾಸ ಕಂಡು ಬಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಲು ಹಾಗೂ ಕೃಷಿ ಜಂಟಿ ನಿರ್ದೇಶಕರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.ಸರ್ಕಾರ ಕಲ್ಯಾಣ ಇಲಾಖೆಗಳ ಮೂಲಕ ನಡೆಸಲಾಗುತ್ತಿರುವ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ ವೇಳೆ ಸ್ವಚ್ಛತೆ ಕೊರತೆ, ಆಹಾರ ಗುಣಮಟ್ಟದಲ್ಲಿ ಕೊರತೆ ಕಂಡು ಬಂದಿತು. ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳ ಸಮಸ್ಯೆ, ಕಂಪ್ಯೂಟರ್ ರಿಪೇರಿ, ಸಿಸಿ ಟಿವಿ ಸರಿಯಾಗಿಲ್ಲದಿರುವುದು, ವಿದ್ಯಾರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಆಗದಿರುವುದು, ಬಿಸಿನೀರು ಸೌಲಭ್ಯ ಇಲ್ಲದಿರುವುದು, ಶೌಚಾಲಯ ರಿಪೇರಿ, ಮೆನು ಪ್ರಕಾರ ಆಹಾರ ನೀಡದಿರುವುದು, ಕ್ರೀಡಾ ಸಾಮಗ್ರಿ ಕೊರತೆ, ಹಾಸಿಗೆ, ಮಂಚ ಕೊರತೆ ಇರುವುದು ಕಂಡು ಬಂದಿದ್ದು, ಸಂಬಂಧಿಸಿದ ವಾರ್ಡನ್ ಮತ್ತು ಅಧಿಕಾರಿಗಳಿಗೆ ಇವುಗಳನ್ನು ಒದಗಿಸುವಂತೆ ಸೂಚನೆ ನೀಡಿದ ಅವರು, ಸರ್ಕಾರಿ ರಜೆ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಿಂದ ಮನೆಗೆ ಹೋಗುವಂತೆ ಒತ್ತಾಯಿಸಬಾರದು ಎಂದು ಸೂಚಿಸಿದರು. ಕರ್ತವ್ಯ ಲೋಪವೆಸಗಿರುವ ಕೆಲವು ಹಾಸ್ಟೆಲ್‌ಗಳ ವಾರ್ಡನ್‌ಗಳನ್ನು ತಾತ್ಕಾಲಿಕವಾಗಿ ಅಮಾನತು ಪಡಿಸಲು ಸೂಚಿಸಿದ್ದು, ಈ ಬಗ್ಗೆ ಶೀಘ್ರವಾಗಿ ಕ್ರಮ ವಹಿಸಬೇಕೆಂದರು.

ಸಭೆಯಲ್ಲಿ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತರಾವ್, ಮಾರುತಿ ದೊಡ್ಡಲಿಂಗಣ್ಣನವರ್, ವಿಜಯಲಕ್ಷ್ಮಿ, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ ಸಿಇಒ ಎನ್‌.ಹೇಮಂತ್, ಜಿಲ್ಲಾಮಟ್ಟದ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.

ತ್ಯಾವರೆಕೊಪ್ಪದ ನಿರಾಶ್ರಿತರ ಕೇಂದ್ರ

ಅತ್ಯುತ್ತಮ ನಿರ್ವಹಣೆ: ಡಾ.ಎಚ್. ಕೃಷ್ಣ

ತ್ಯಾವರೆಕೊಪ್ಪದ ನಿರಾಶ್ರಿತರ ಕೇಂದ್ರದಲ್ಲಿ 275 ಸದಸ್ಯರಿದ್ದು, ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತಿದೆ. ಬಸವನಗುಡಿಯ ಅಂಗನವಾಡಿ ಕೇಂದ್ರವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗ ಅಧ್ಯಕ್ಷದ ಡಾ.ಎಚ್. ಕೃಷ್ಣ ಹೇಳಿದರು. ಎನ್‌ಟಿ ರಸ್ತೆ ಅಂಬೇಡ್ಕರ್ ವಸತಿನಿಲಯ ನಿರ್ವಹಣೆ ಚೆನ್ನಾಗಿದೆ. ಶಿವಮೊಗ್ಗ ತಾಲೂಕು ಕಚೇರಿಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗೆ ಸಂಬಂಧಿಸಿದಂತೆ ಸಕಾಲದಲ್ಲಿ ಪ್ರಕರಣಗಳು ಬಾಕಿಯಿಲ್ಲ. ಉತ್ತಮ ನಿರ್ವಹಣೆ ಆಗುತ್ತಿದೆ. ಹಾಗೂ ಶಿವಮೊಗ್ಗ ಎಸಿಯವರು ಆಹಾರ ಸುರಕ್ಷತಾ ಅಂಕಿತಾಧಿಕಾರಿಯಾಗಿ ಪ್ರಭಾರ ವಹಿಸಿ ಬೇಕರಿಗಳು, ದರ್ಶಿನಿಗಳು, ಹಾಸ್ಟೆಲ್‌ಗಳು, ತಿನಿಸು ತಯಾರಿಸುವ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.