ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರಿನಲ್ಲಿ ಯಾವುದೇ ಧರ್ಮದ ಹಬ್ಬಗಳ ಸಂದರ್ಭದಲ್ಲಿಯೂ ಈ ತನಕ ತೊಂದರೆ ಉಂಟಾಗಿಲ್ಲ. ಈ ಬಾರಿಯೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಗೆ ಜನತೆಯ ಸಹಕಾರ ಬೇಕಾಗಿದೆ ಎಂದು ಇನ್ಸ್‌ಪೆಕ್ಟರ್ ಸತೀಶ್ ಕುಮಾರ್ ಹೇಳಿದರು. ಗಣೇಶೋತ್ಸವ ಹಾಗೂ ಈದ್‌ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಗುರುವಾರ ಸಂಜೆ ಪುತ್ತೂರು ನಗರ ಠಾಣೆಯಲ್ಲಿ ನಡೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಬ್ಬಗಳ ಆಚರಣೆ ಮತ್ತು ಮೆರವಣಿಗೆ ಸಂದರ್ಭದಲ್ಲಿ ಡಿ.ಜೆಗೆ ಆವಕಾಶ ಇಲ್ಲ. ದೇವಾಲಯ, ಮಸೀದಿಗಳ ಮುಂಭಾಗದಲ್ಲಿ ಮೆರವಣಿಗೆ ಸಂದರ್ಭ ಯಾವುದೇ ಅನಗತ್ಯ ಘೋಷಣೆಗೆ ಅವಕಾಶ ಇಲ್ಲ. ಕಾರ್ಯಕ್ರಮಗಳನ್ನು ರಾತ್ರಿ ೧೦ ಗಂಟೆಯ ಒಳಗೆ ಮುಗಿಸಬೇಕು. ಸಮಯಪಾಲನೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಹಾಜರಿದ್ದ ವಿವಿಧ ಸಂಘಟನೆಗಳ ಮುಖಂಡರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದರು.
ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ಮಾತನಾಡಿ, ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಬೆಂಬಲ ಜನತೆಯಿಂದ ಬೇಕಾಗಿದೆ. ಯಾವುದೇ ಸಣ್ಣಪುಟ್ಟ ಘಟನೆಗಳು ನಡೆದಾಗ ಅನಗತ್ಯ ಅವಸರ ಮಾಡದೆ ತಾಳ್ಮೆಯಿಂದ ವರ್ತಿಸಿ. ಇದರಿಂದ ಸಮಸ್ಯೆಗಳ ಪರಿಹಾರಕ್ಕೆ ಸುಲಭವಾಗುತ್ತದೆ. ನಮ್ಮ ನಮ್ಮ ಧರ್ಮ ಪ್ರತಿಯೊಬ್ಬರಿಗೂ ಮುಖ್ಯವೇ, ಆದರೆ ಇನ್ನೊಂದು ಧರ್ಮಕ್ಕೆ ಯಾವುದೇ ತೊಂದರೆಯಾಗದಂತೆ ನಾವು ನಡೆದುಕೊಳ್ಳಬೇಕು ಎಂದರು.ಧಾರ್ಮಿಕ ಮುಖಂಡರಾದ ಜಗದೀಶ್ ನೆಲ್ಲಿಕಟ್ಟೆ, ಲೊಕೇಶ್ ಹೆಗ್ಡೆ, ರಾಧಾಕೃಷ್ಣ ನಂದಿಲ, ಮುರಳೀಕೃಷ್ಣ ಹಸಂತ್ತಡ್ಕ, ಶಿವಕುಮಾರ್ ಮತ್ತಿತರರು ಸಲಹೆ ನೀಡಿದರು. ಮೆರವಣಿಗೆ ಸಂದರ್ಭ ಸಂಚಾರ ವ್ಯವಸ್ಥೆ ಬದಲಿಸಬೇಕು ಎಂದು ಆಗ್ರಹಿಸಿದರು. ಮೆರವಣಿಗೆ ಸಂದರ್ಭ ಯುವಕರ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಸಲಹೆ ನೀಡಿದ ಸತೀಶ್ ಕುಮಾರ್ ಅವರು ಸ್ವಯಂಸೇವಕರ ತಂಡ ಹೆಚ್ಚು ಕ್ರೀಯಾಶೀಲವಾಗಿ ಪೊಲೀಸರಿಗೆ ಸಹಕಾರ ನೀಡಬೇಕು ಎಂದರು. ನೂರುದ್ದೀನ್ ಸಾಲ್ಮರ ಮಾತನಾಡಿದರು. ಧಾರ್ಮಿಕ ಮುಖಂಡರಾದ ದಿನೇಶ್ ಪಿ.ವಿ, ಸುದೇಶ್ ಚಿಕ್ಕಪುತ್ತೂರು, ದಯಾನಂದ್, ಎಲ್.ಟಿ. ರಝಾಕ್, ದಿನೇಶ್ ಪಂಜಿಗ, ಹರೀಶ್ ದೋಲ್ಪಾಡಿ, ಗಣೇಶ್ ಪೈ, ಬೇಬಿಜಾನ್, ಗೋವರ್ಧನ ಕಾವೇರಿಕಟ್ಟೆ ಮತ್ತಿತರರು ಭಾಗವಹಿಸಿದ್ದರು.