ಸಾರಾಂಶ
ಕನ್ನಪ್ರಭ ವಾರ್ತೆ ಬೆಳಗಾವಿ
ನ್ಯಾಯದ ಅಂತಿಮ ಗುರಿ ಸತ್ಯದ ಅನ್ವೇಷಣೆ. ನ್ಯಾಯಾಲಯಗಳು ಸತ್ಯವನ್ನು ಕಂಡುಹಿಡಿದು, ಅದರ ಮೇಲೆ ತಮ್ಮ ನಿರ್ಧಾರಗಳನ್ನು ತೆಗೆದುಕೊಂಡಾಗ ಸಮಾಜ ನ್ಯಾಯವನ್ನು ಅನುಭವಿಸುತ್ತದೆ. ನ್ಯಾಯ ನೀಡುವಲ್ಲಿ ಸಾಕ್ಷಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸಾವು ಅಥವಾ ಗಾಯ ಒಳಗೊಂಡ ಸಂಕೀರ್ಣ ಪ್ರಕರಣಗಳಲ್ಲಿ, ನ್ಯಾಯಾಲಯಗಳು ಸಂತ್ರಸ್ತರಿಗೆ ನ್ಯಾಯ ಕಲ್ಪಿಸಲು ವೈದ್ಯಕೀಯ ವೃತ್ತಿಪರರ ನೆರವು ಪಡೆಯುವುದು ಅತ್ಯಗತ್ಯವಾಗಿದೆ. ವೃತ್ತಿಪರರು ಜ್ಞಾನವುಳ್ಳವರಾಗಿದ್ದು, ಕಾನೂನು ಅವರ ಅಭಿಪ್ರಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ತಜ್ಞ ಸಾಕ್ಷ್ಯಎಂದು ಪರಿಗಣಿತವಾಗುತ್ತದೆ ಎಂದು ರಾಜ್ಯದ ಕಾನೂನು, ನಾಗರಿಕ ಹಕ್ಕು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಕಾಹೇರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಫಾರೆನ್ಸಿಕ್ ಮೆಡಿಸಿನ್ ಹಾಗೂ ಟಾಕ್ಸಿಕಾಲಾಜಿ ವಿಭಾಗ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ಮೆಡಿಕೋ ಲೀಗಲ್ ಸಂಸ್ಥೆಯ 32ನೇ ವಾರ್ಷಿಕ ರಾಜ್ಯ ಸಮ್ಮೇಳನವನ್ನು (ಕೆಎಎಮ್ಎಲ್ಎಸ್ ಕಾನ) ಉದ್ಘಾಟಿಸಿ ಮಾತನಾಡಿದ ಅವರು, ಸಂತ್ರಸ್ತರ ಕುಂದುಕೊರತೆ ಪರಿಹರಿಸಿ, ನ್ಯಾಯದಾನಕ್ಕಾಗಿ ನ್ಯಾಯಾಲಯಗಳು ತಜ್ಞರ ಸಾಕ್ಷ್ಯವನ್ನು ಹೆಚ್ಚಾಗಿ ಅವಲಂಬಿಸಿವೆ. ವಿಜ್ಞಾನ, ಔಷಧ, ವಿಧಿವಿಜ್ಞಾನ, ಎಂಜಿನಿಯರಿಂಗ್ ಅಥವಾ ಇನ್ನಿತರ ವಿಶೇಷ ವಿಭಾಗಗಳಂತಹ ಕ್ಷೇತ್ರಗಳ ಕಾನೂನು ಪ್ರಕ್ರಿಯೆಗಳಲ್ಲಿ ತಜ್ಞರ ಅಭಿಪ್ರಾಯಗಳನ್ನು ಪುರಾವೆಯಾಗಿ ಸ್ವೀಕರಿಸಿ, ಅಗತ್ಯ ಸಂದರ್ಭಗಳಲ್ಲಿ ನಿಖರವಾದ ನಿರ್ಧಾರ ತೆಗೆದುಕೊಳ್ಳಲು ಸತ್ಯ-ಶೋಧಕರಿಗೆ ಸಹಾಯ ಮಾಡುತ್ತವೆ ಎಂದವರು ಅಭಿಪ್ರಾಯಪಟ್ಟರು.
ವಿಧಿವಿಜ್ಞಾನ ಮತ್ತು ವಿಷಶಾಸ್ತ್ರ ವಿಭಾಗದಲ್ಲಿ ಸಂಶೋಧನೆಗಳು ಕಡಿಮೆ. ಆದ್ದರಿಂದ ಸಂಶೋಧನೆಗಳು ಅಧಿಕಗೊಂಡು ನ್ಯಾಯ ನೀಡುವಿಕೆಗೆ ಪರಿಹಾರ ಕಲ್ಪಿಸುವಂತಾಗಬೇಕು. ವಿಧಿವಿಜ್ಞಾನ ಹಾಗೂ ವಿಷಶಾಸ್ತ್ರವನ್ನು ಕಾನೂನು ಮಹಾವಿದ್ಯಾಲಯಗಳಲ್ಲಿ ಅಳವಡಿಸುವ ಕುರಿತು ಯೋಚಿಸಲಾಗುತ್ತಿದೆ. ಈ ವಿಭಾಗವನ್ನು ಉನ್ನತೀಕರಿಸಲು ಅವಶ್ಯವಿರುವ ಎಲ್ಲ ಸಹಕಾರ ನೀಡಲಾಗುತ್ತದೆ. ವೈದ್ಯಕೀಯ ತಜ್ಞರು ತನಿಖಾ ಅಧಿಕಾರಿಗಳಿಗೆ ಕಾಣದ ಸೂಕ್ಷ್ಮ ಪುರಾವೆ ಸಂಗ್ರಹಿಸುವಲ್ಲಿ ನಿಸ್ಸೀಮರು. ಅಪರಾಧ ನ್ಯಾಯದ ಆಡಳಿತದಲ್ಲಿ ವಿಧಿವಿಜ್ಞಾನ ಮತ್ತು ವಿಷಶಾಸ್ತ್ರ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ನಿರ್ಣಾಯಕ ಮತ್ತು ಮಹತ್ವದ ದಾಖಲೆಗಳನ್ನು ಒದಗಿಸಿ, ಸತ್ಯ ನಿರ್ಧರಿಸಲು ನ್ಯಾಯಾಲಯಗಳಿಗೆ ಅನುವು ಮಾಡಿಕೊಡುತ್ತದೆ. ಅಸಹಜ ಸಾವು, ಕೊಲೆಗಳು, ವಿಷ ಸೇವನೆ, ಮಾದಕ ದ್ರವ್ಯ ಸೇವನೆ, ಆತ್ಮಹತ್ಯೆ ಇತ್ಯಾದಿ ಪ್ರಕರಣಗಳಲ್ಲಿ ಅವುಗಳ ಪ್ರಾಮುಖ್ಯತೆ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.ಆರಂಭದಲ್ಲಿ ವಿಧಿವಿಜ್ಙಾನ ಮತ್ತು ವಿಷಶಾಸ್ತ್ರ ಮುಖ್ಯವಾಗಿ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಗಳು, ಆಕಸ್ಮಿಕ ಅಥವಾ ಯಾವುದೇ ರೀತಿಯ ಅಸ್ವಾಭಾವಿಕ ಅಥವಾ ಅನುಮಾನಾಸ್ಪದ ಸಾವುಗಳಿಂದ ಉಂಟಾಗುವ ಸಾವು-ನೋವುಗಳನ್ನು ತನಿಖೆ ಮಾಡಲು ಬಳಸಲಾಗುತ್ತಿತ್ತು. ಆದರೆ ಇಂದು ಸಾಕಷ್ಟು ಪ್ರಕರಣಗಳಲ್ಲಿ ವಿಧಿವಿಜ್ಞಾನ ಮತ್ತು ವಿಷಶಾಸ್ತ್ರ ತಜ್ಞರ ಸಹಾಯ ಪಡೆಯಲಾಗುತ್ತಿದೆ ಎಂದ ಅವರು, ಅಪರಾಧ ಮಾಡುವಲ್ಲಿ ತನ್ನ ಹೆಜ್ಜೆಗಳನ್ನು ಮರೆಮಾಚಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಅಪರಾಧಿ ಯಾವಾಗಲೂ ಜಾಗರೂಕನಾಗಿ, ವಿವೇಚನೆಯಿಂದ್ದಿರುತ್ತಾನೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, 1984ರಲ್ಲಿ ಮರಣೋತ್ತರ ಪರೀಕ್ಷೆ ಮಾಡುವುದು ಅತ್ಯಂತ ಕಠಿಣವಾಗಿತ್ತು. ಈಗ ಎಲ್ಲ ಕಡೆ ವಿಧಿವಿಜ್ಞಾನ ಮತ್ತು ವಿಷಶಾಸ್ತ್ರ ವೈದ್ಯರು ಲಭ್ಯವಿರುವುದರಿಂದ ಸಾಕಷ್ಟು ಅನುಕೂಲವಾಗಿದೆ. ಇದನ್ನು ಅಭ್ಯಸಿಸಲು ಶುಲ್ಕ ಪಡೆಯದೇ ಸ್ಟೈಪಂಡ್ ನೀಡಲಾಗುತ್ತಿದೆ ಎಂದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವವರಿಗೆ ಸರ್ಕಾರ ತರಬೇತಿ ನೀಡಬೇಕೆಂದು ಸಲಹೆ ನೀಡಿದರು. ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾಣೆ ಮಾತನಾಡಿದರು. ವೇದಿಕೆ ಮೇಲೆ ಡಾ. ಎನ್ ಎಸ್ ಮಹಾಂತಶೆಟ್ಟಿ ಉಪಸ್ಥಿತರಿದ್ದರು. ಸಂಘಟನಾಧ್ಯಕ್ಷ ಡಾ. ರವೀಂದ್ರ ಹೊನ್ನುಂಗರ ಸ್ವಾಗತಿಸಿದರು. ಡಾ. ವಿನಯ ಬನ್ನೂರ ವಂದಿಸಿದರು. ಡಾ.ಅವಿನಾಶ ಕವಿ ನಿರೂಪಿಸಿದರು.ಸಾಕ್ಷಿಗಳನ್ನು ಗೊಂದಲಗೊಳಿಸುವಲ್ಲಿ ವಕೀಲರು ತಜ್ಞರಾಗಿರುತ್ತಾರೆ. ಭಾರತದಲ್ಲಿ ಶೇ.80ರಷ್ಟು ಅಪರಾಧ ಪ್ರಕರಣಗಳು ವ್ಯವಹಾರಗಳಾಗಿವೆ. ಈಗೀಗ ಜನರು ಕಾನೂನು ಸುಶಿಕ್ಷಿತರಾಗುತ್ತಿದ್ದಾರೆ. ಅದರ ಕುರಿತು ಪರಾಮರ್ಶಿಸುತ್ತಿದ್ದಾರೆ. ಆದ್ದರಿಂದ ಸತ್ಯ ಮರೆಮಾಚದಂತೆ ಅದು ಸದಾ ಗೋಚರಿಸುವಂತಾಗಲು ತಮ್ಮ ಜವಾಬ್ದಾರಿ ಸಾಕಷ್ಟಿದೆ. ಈ ಕುರಿತು ನ್ಯಾಯಾಧೀಶರು ಕೂಡ ಮನವರಿಕೆ ಮಾಡುತ್ತಿರುತ್ತಾರೆ. ಆದರೂ ಕೂಡ ಸಾಕ್ಷಿ ವಿರುದ್ಧ ಹೋದರೆ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಸಕಲ ವ್ಯವಸ್ಥೆಯೊಂದಿಗೆ ಸಾಕ್ಷಿಗಳನ್ನು ನೀಡುತ್ತದೆ. ಅಪರಾಧಗಳಿಗೆ ಶೇ.100ರಷ್ಟು ನ್ಯಾಯ ನೀಡಿದರೆ ಅಪರಾಧ ಮತ್ತು ವಂಚನೆಗಳು ಕಡಿಮೆಯಾಗುತ್ತವೆ. ಅದರ ಕುರಿತು ಪಾರೆನ್ಸಿಕ್ ವಿಭಾಗ ಗಮನಹರಿಸಬೇಕು.
- ಎಚ್.ಕೆ. ಪಾಟೀಲ ಕಾನೂನು, ನಾಗರಿಕ ಹಕ್ಕುಗಳ ಸಚಿವ