ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಯಶಸ್ಸು ಸಾಧಿಸಲು ನನ್ನ ತಾಯಿ ಮತ್ತು ಅಣ್ಣನ ನೆರವು ಸಹಕಾರಿಯಾಗಿದೆ. ಪದವಿ ವಿದ್ಯಾರ್ಥಿಗಳು ಹಿಂಜರಿಕೆ ಬಿಟ್ಟು ಧೈರ್ಯದಿಂದ ಪರೀಕ್ಷೆ ಬರೆದರೆ ಯಶಸ್ಸು ಸಾಧಿಸಬಹುದು ಎಂದು ಬಿ.ಎಸ್ ಚಂದನ್ ತಿಳಿಸಿದರು.ಸಮೀಪದ ಮಾಸ್ಟರ್ ದೊಡ್ಡಿ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಯುಪಿಎಸ್ಸಿ ಪರೀಕ್ಷೆಯಲ್ಲಿ 731ನೇ ರ್‍ಯಾಂಕ್ ಪಡೆದ ಬಿ.ಎಸ್. ಚಂದನ್ ಮಾತನಾಡಿ, ನಾನು ಓದಿದ ಶಾಲೆಯಲ್ಲಿ ನನಗೆ ಅಭಿನಂದನೆ ಹಮ್ಮಿ ಕೊಂಡಿರುವುದು ತುಂಬಾ ಸಂತೋಷವಾಗಿದೆ ಎಂದರು.
ವಿದ್ಯಾರ್ಥಿಗಳು ಸಾಧನೆ ಮಾಡುವ ಛಲದೊಂದಿಗೆ ಶಿಕ್ಷಕರಿಂದ ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಕರು ಶಿಕ್ಷಣದ ಜೊತೆಗೆ ಜೀವನದ ಮೌಲ್ಯವನ್ನು ಹೇಗೆ ಬೆಳೆಸಿಕೊಂಡು ಹೋಗಬೇಕು ಎಂಬುದನ್ನು ಕಲಿಸಿಕೊಟ್ಟಿದ್ದಾರೆ. ಅದರಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಅದಕ್ಕಾಗಿ ನಾನು ನಮ್ಮ ಶಿಕ್ಷಕರಿಗೆ ಆಭಾರಿಯಾಗಿದ್ದೇನೆ ಎಂದರು.ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು ಎಂದು ಯಾವುದಕ್ಕೂ ಹಿಂಜರಿಯದೆ ಧೈರ್ಯವಾಗಿ ಪರೀಕ್ಷೆಗಳನ್ನು ಬರೆದರೆ ನೀವು ಸಹ ನನ್ನ ಹಾಗೆ ಸಾಧನೆ ಮಾಡಬಹುದು. ನಿಮ್ಮಲ್ಲಿ ಛಲ ಬೆಳೆಸಿಕೊಂಡರೆ ಯಾವುದಾದರೂ ಪರೀಕ್ಷೆಯನ್ನು ಎದುರಿಸಲು ನೆರವಾಗುತ್ತದೆ ಎಂದರು.
ಪೋಷಕರು ನಿಮ್ಮ ಮಕ್ಕಳಿಗೆ ವ್ಯಾಸಂಗ ಮಾಡಲು ಪೂರ್ಣ ಸಹಕಾರ ನೀಡಬೇಕು. ಯಾವ ವಿಷಯದಲ್ಲಿ ಅಭಿರುಚಿಯಿದೆ ಅದಕ್ಕೆ ಪ್ರೋತ್ಸಾಹ ನೀಡಬೇಕು. ಸಾಧನೆ ಮಾಡಲು ಹೊರಟಾಗ ಏಳು ಬೀಳುಗಳು ಬರುತ್ತವೆ, ಅದಕ್ಕೆ ಬೇಸರ ಪಡದೆ ಮತ್ತೆ ಪ್ರಯತ್ನಗಳನ್ನು ಮಾಡುತ್ತಿರಬೇಕು. ಇದರಿಂದ ಎಂದಾದರೂ ಒಂದು ದಿನ ಯಶಸ್ಸು ಸಾಧಿಸಬಹುದು ಎಂದರು.ರೇಷ್ಮೆ ರಾಜ್ಯೋತ್ಸವ ವಿಜೇತ, ಕಿರಣಗೆರೆ ಜಗದೀಶ್ ಮಾತನಾಡಿ, ಈ ಹಿಂದೆ ನಾವು ವ್ಯಾಸಂಗ ಮಾಡುತ್ತಿದ್ದ ವೇಳೆ ಯಾವುದೇ ಸರ್ಕಾರದ ಸವಲತ್ತುಗಳು ಸಿಗುತ್ತಿರಲಿಲ್ಲ. ಈಗಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಸವಲತ್ತುಗಳು ದೊರಕುತ್ತಿವೆ. ವಿದ್ಯೆ ಯಾರ ಮನೆಯ ಸ್ವತ್ತಲ್ಲ. ಯಾರು ಕಷ್ಟಪಟ್ಟು ವ್ಯಾಸಂಗ ಮಾಡುತ್ತಾರೆ ಅವರಿಗೆ ಲಭಿಸುತ್ತದೆ ಎಂದರು.
ಕಾಡಂಚಿನ ಗ್ರಾಮದಲ್ಲಿ ವ್ಯಾಸಂಗ ಮಾಡುತ್ತಿದ್ದ ಚಂದನ್ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇತರೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಅವರ ಮಾರ್ಗವನ್ನು ನೀವುಗಳು ಅನುಸರಿಸಿಕೊಂಡು ಹೋಗಬೇಕು. ಚಂದನ್ ಸರ್ಕಾರದಲ್ಲಿ ಉತ್ತಮ ಸೇವೆಗಳನ್ನು ಮಾಡಿ ಉತ್ತಮ ಅಧಿಕಾರಿಯಾಗಿ ಸಮಾಜಸೇವೆ ಮಾಡಲಿ ಎಂದು ಶುಭ ಹಾರೈಸಿದರು.ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಚಂದನ್ ಬಗ್ಗೆ ಮುಖ್ಯ ಶಿಕ್ಷಕ ಮಹಾದೇವ್ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಒಳ್ಳೆಯ ಮಾರ್ಗದಲ್ಲಿ ನಡೆದುಕೊಂಡು ಹೋಗುವಂತೆ ಮಾಡುವುದೇ ಶಿಕ್ಷಕರ ವೃತ್ತಿ. ಅವರ ಬೋಧನೆಯಿಂದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿ ಇದ್ದಾರೆ. ನಾಡಿಗೆ ಪೊಲೀಸರು, ದೇಶಕ್ಕೆ ಸೈನಿಕರು, ಸಮಾಜಮುಖಿ ಸೇವೆ ಮಾಡಲು ಶಿಕ್ಷಕರ ಪಾತ್ರ ಅಮೂಲ್ಯವಾದದ್ದು ಎಂದರು.
ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೋಜು- ಮಸ್ತಿ ಗಳನ್ನು ಬಿಟ್ಟರೆ ಮಾತ್ರ ಯಾವುದಾದರೂ ಸಾಧನೆ ಮಾಡಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ರಾಜು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್ ಮಾತನಾಡಿದರು.
ಚಂದನ್ ಅವರಿಗೆ ಶಿಕ್ಷಕರಾಗಿದ್ದ ಪ್ರಭಾಕರ್, ತಾಯಿ ಸವಿತಾ ಹಾಗೂ ಸಹೋದರ ಬಿ.ಎಸ್.ಚೇತನ್, ಎಂ. ಬಸವರಾಜು, ಅರಣ್ಯ ಇಲಾಖೆ ಅಧಿಕಾರಿಗಳಾದ ರವಿ ಬುರ್ಜಿ, ಪ್ರವೀಣ್ ಕುಮಾರ್, ಶಿಕ್ಷಕ ವೃಂದ ಸೇರಿದಂತೆ ಮಾಸ್ಟರ್ ದೊಡ್ಡಿ, ಬೀರೋಟ, ಮರಿ ಜೋಗಿ ದೊಡ್ಡಿ, ಕೊನ್ನಾಪುರ ದೊಡ್ಡಿ ಗ್ರಾಮಸ್ಥರು ಪಾಲ್ಗೊಂಡಿದ್ದರು.