ಪ್ರತಿಯೊಬ್ಬರೂ ಮತದಾನ ಮಾಡಲು ಮನವಿ

| Published : Apr 30 2024, 02:04 AM IST

ಸಾರಾಂಶ

ಪ್ರತಿಯೊಬ್ಬರೂ ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಬೇಕು. ನಿರ್ಲಕ್ಷ್ಯ, ಅಸಡ್ಡೆ ತೋರದೇ ಪ್ರತಿಯೊಬ್ಬರೂ ಮತದಾನ ಮಾಡಬೇಕು.

ಭಟ್ಕಳ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಮತದಾನವಾಗುವಂತೆ ಮಾಡಲು ಸರ್ಕಾರಿ ನೌಕರರ ವಾಹನ ಜಾಥಾಕ್ಕೆ ತಾಲೂಕು ಚುನಾವಣೆ ರಾಯಭಾರಿ ಮಾನಾಸುತ ಶಂಭು ಹೆಗಡೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಬೇಕು. ನಿರ್ಲಕ್ಷ್ಯ, ಅಸಡ್ಡೆ ತೋರದೇ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಮತದಾನ ಹೆಚ್ಚಾಗಲು ವಿವಿಧ ಜಾಗೃತಿ ಮೂಡಿಸುತ್ತಿದ್ದು, ಇದರಲ್ಲಿ ಸರ್ಕಾರಿ ನೌಕರರ ದ್ವಿಚಕ್ರ ವಾಹನ ಜಾಥಾವೂ ಒಂದಾಗಿದೆ ಎಂದರು.

ತಾಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ ಮಾತನಾಡಿ, ಮತದಾನದಲ್ಲಿ ಇಳಿಕೆ ಆಗುವುದನ್ನು ತಪ್ಪಿಸಲು ಈಗಾಗಲೇ ಅನೇಕ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಬೇಕಿದೆ. ಪ್ರತಿಯೊಬ್ಬರೂ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ ಎಂದರು.

ನೌಕರ ವಾಹನ ಜಾಥಾ ಆಡಳಿತ ಸೌಧದಿಂದ ಶಿರಾಲಿ ತನಕ ಹೋಗಿ ವಾಪಸ್ ಭಟ್ಕಳ ಪುರಸಭೆಯವರೆಗೆ ಆಗಮಿಸಿ ಸಮಾಪ್ತಿಗೊಂಡಿತು. ತಾಲೂಕು ಪಂಚಾಯಿತಿ ಆವರಣದಲ್ಲಿ ತಹಸೀಲ್ದಾರ್‌ ನಾಗರಾಜ ನಾಯ್ಕಡ ಅವರು ಅಂಗವಿಕಲರ ವಾಹನ ಜಾಥಾಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ದಾಂಡೇಲಿಯಲ್ಲಿ ಮತದಾನ ಜಾಗೃತಿ ಜಾಥಾ

ದಾಂಡೇಲಿ: ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪ್ರಮಾಣ ಹೆಚ್ಚಿಸಲು ತಾಲೂಕು ಸ್ಪೀಪ್‌ ಸಮಿತಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ನಗರದ ಬಸ್‌ ನಿಲ್ದಾಣ, ಲೆನಿನ್ ರಸ್ತೆ, ಸಂಡೆ ಮಾರುಕಟ್ಟೆ ಹಾಗೂ ಮೀನು ಮಾರುಕಟ್ಟೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.ನಗರಸಭೆ ಕಚೇರಿ ವ್ಯವಸ್ಥಾಪಕ ಪರಶುರಾಮ ಸಿಂದೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇ 7ರಂದು ನಡೆಯಲಿರುವ ಮತದಾನ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಎಲ್ಲರೂ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಾಯಿತು.ಈ ವೇಳೆ ಸಾರ್ವಜನಿಕರಿಗೆ ಬಿತ್ತಿ ಪತ್ರಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಎಂಜಿನಿಯರ್‌ ಸುನಿತಾ ನಾಯ್ಕ, ಅಧಿಕಾರಿ ಬಾಳು ಗವಾಸ, ಶುಭಂ ರಾಯ್ಕರ, ವಿಘ್ನೇಶ, ಪ್ರಜ್ವಲ, ಪಿಯುಶ್, ಫಿಲಿಫ್, ತಿಪ್ಪಣ್ಣ, ರವಿಚಂದ್ರ, ರಂಗನಾಥ, ವಿಲ್ಸನ್, ಯೂನಿಸ್ ಇದ್ದರು.