ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸರ್ಕಾರಿ ಶಾಲೆಗಳಿಲ್ಲದಿದ್ದರೆ ಅನೇಕ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಖಚಿತ. ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಎಲ್ಲ ಗ್ರಾಮಗಳಲ್ಲಿ ಶಾಲೆಗಳನ್ನು ತೆರೆದಿದೆ. ಆದರೆ ಶಾಲಾ ಕಟ್ಟಡಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ಇದರಿಂದಾಗಿ ಬಡ ಮಕ್ಕಳೂ ಸಹ ಸರ್ಕಾರಿ ಶಾಲೆಗಳಿಗೆಂದರೆ ಮೂಗು ಮುರಿಯುವಂತಾಗಿದೆ. ತಾಲೂಕಿನ ಡಿಕೆಹಳ್ಳಿ ಗ್ರಾಪಂಃಯ ದೊಡ್ಡೂರು ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದಕ್ಕೊಂದು ತಾಜಾ ಉದಾಹರಣೆ. ಸರ್ಕಾರ ಇಂದು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ ಗುಣಮಟ್ಟದ ಶಿಕ್ಷಣ ಜೊತೆ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದಾಗಿ ಹೇಳುತ್ತದೆ. ಆದರೆ ವಾಸ್ತವಾಂಶವೇ ಬೇರೆಯಾಗಿದೆ.ಶಿಕ್ಷಕರ ಕೊರತೆಯೇ ಸಮಸ್ಯೆ
ಕಟ್ಟಡವಿದ್ದರೆ ಶಿಕ್ಷಕರಿರುವುದಿಲ್ಲ,ಶಿಕ್ಷಕರಿದ್ದರೆ ಕಟ್ಟಡವಿರುವುದಿಲ್ಲ ಎಲ್ಲಯಿದ್ದರೂ ಮಕ್ಕಳೇ ಇರುವುದಿಲ್ಲ.ಆದರೆ ದೊಡ್ಡೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿದ್ದಾರೆ,ಶಿಕ್ಷಕರೂ ಇದ್ದಾರೆ,ಆದರೆ ಅಗತ್ಯವಾಗಿ ಬೇಕಾಗಿರುವ ಸುಸಜ್ಜಿತ ಕಟ್ಟಡವೇ ಇಲ್ಲ.೬೦ವರ್ಷದ ಹಿಂದೆ ನಿರ್ಮಾಣ ಮಾಡಿರುವ ಕಟ್ಟಡ ಈಗ ಶಿಥಿಲವಾಗಿದೆ, ಮೇಲ್ಚಾವಣಿಯ ಸಿಮೆಂಟ್ ಮಾಯವಾಗಿ ಚೆಲ್ಲಿ ಕಂಬಿಗಳು ಉದುರುತ್ತಿದೆ, ಮಳೆ ಬಂದರೆ ಕೊಠಡಿ ಪೂರ ನೀರಿನಿಂದ ಜಲಾವೃತಗೊಳ್ಳುವುದರಿಂದ ಮಳೆಗಾಲದಲ್ಲಿ ಮಕ್ಕಳು ಕೊಠಡಿಗಳಲ್ಲಿ ಕೂರದೆ ಹೊರಗಡೆ ಕೂತು ಪಾಠ ಕೇಳುವಂತಾಗಿದೆ.ಶಾಲೆಯಲ್ಲಿ ಒಟ್ಟು ೫ ಕೊಠಡಿಗಳಿದ್ದು ಇದರಲ್ಲಿ ೩ಕೊಠಡಿಗಳು ತುಂಬಾ ಅವ್ಯವಸ್ಥೆಯಿಂದ ಕೂಡಿವೆ. ಇದರಲ್ಲಿ ಪಾಠ ಮಾಡಲು ಬಳಸುವುದಿಲ್ಲ,ಉಳಿದ ಎರಡರಲ್ಲಿ ಮಾತ್ರ ಎಲ್ಲಾ ೮೦ ಮಕ್ಕಳು ಕಿಷ್ಕಿಂದೆಯಲ್ಲಿ ಕೂರುವಂತಾಗಿದೆ, ಒಮ್ಮೊಮ್ಮೆ ಮುಖ್ಯಶಿಕ್ಷಕರ ಕೊಠಡಿಯನ್ನೂ ಬಳಸುಕೊಳ್ಳುತ್ತಾರೆ.
ಶಿಥಿಲ ಶಾಲಾ ಕಟ್ಟಡಶಾಲೆಯ ದುಸ್ಥಿತಿಯನ್ನು ಕಂಡು ಹಳೇ ವಿದ್ಯಾರ್ಥಿಗಳು ಕೊಠಡಿಯ ಕಿಟಕಿ,ಬಾಗಿಳುಗಳನ್ನು ಬದಲಾಯಿಸಿದ್ದರು. ಈಗ ಮತ್ತೆ ಕಟ್ಟಡ ತುಂಬಾ ಶಿಥಿಲವಾಗಿದ್ದು ಯಾವ ಸಮಯದಲ್ಲಿ ಬೇಕಾದರೂ ನೆಲಕಚ್ಚಬಹುದು ಅಷ್ಟರ ಮಟ್ಟಿಗೆ ಅವ್ಯವಸ್ಥೆಯಿಂದ ಕೂಡಿದೆ.ಈ ಹಿಂದೆ ಶಾಲೆಗೆ ಸುತ್ತಮುತ್ತಲಿನ ೫ ಗ್ರಾಮಗಳಿಂದ ಮಕ್ಕಳು ಬರುತ್ತಿದ್ದರು,ಆಗ ೨೦೦ಮಕ್ಕಳಿದ್ದರು.ಈಗ ಶಾಲೆಯ ಸ್ಥಿತಿ ನೋಡಿ ಪೋಷಕರು ಟಿಸಿ ಪಡೆದು ಬೇರೆ ಶಾಲೆಗಳಿಗೆ ದಾಖಲಿಸಿದ್ದಾರೆ, ಈಗ ಕೇವಲ ೮೦ ಮಕ್ಕಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ.ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಅವಕಾಶ ಸಿಕ್ಕಾಗಲೆಲ್ಲಾ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತಲೂ ಯಾವುದರಲ್ಲಿಯೂ ಕಡಿಮೆ ಇಲ್ಲ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಭಾಷಣ ಮಾಡುತ್ತಾರೆ. ಆದರೆ ವಾಸ್ತವಾಂಶವೇ ಬೇರೆಯಾಗಿದೆ. ಗ್ರಾಮಸ್ಥರು ಶಾಲೆ ಬಗ್ಗೆ ಶಾಸಕರಿಗೂ ಬಿಇಒ ರವರಿಗೂ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದರೂ ಯಾರೂ ಗಮನಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
25 ಶಾಲೆಗೆ ಸ್ವಂತ ಕಟ್ಟಡವಿಲ್ಲಕ್ಷೇತ್ರದಲ್ಲಿ ೨೫ ಶಾಲೆಗಳು ಕಟ್ಟಡವಿಲ್ಲದೆ ನಿತ್ಯ ಅವ್ಯವಸ್ಥೆಯಲ್ಲಿ ಪಾಠ ಮಾಡುವಂತಾಗಿದೆ ಎಂಬುದು ಇಲಾಖೆಯ ದಾಖಲೆಗಳು ತಿಳಿಸುತ್ತದೆ. ಅನಾಹುತ ನಡೆದಾಗ ತಾಮುಂದು ನೀಮುಂದು ಎಂದು ಸ್ಥಳಕ್ಕೆ ಭೇಟಿ ನೀಡುವ ಜನಪ್ರತಿಧಿಗಳು ಯಾಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ, ಶಿಥಿಲವಾಗಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡದಿದ್ದರೆ ಶಾಲೆಗೆ ಬೀಗ ಹಾಕುವುದಾಗಿ ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.