ಕನ್ನಡಪ್ರಭ ವಾರ್ತೆ ಹುಳಿಯಾರು

ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕಾದರೆ ನಿಖರವಾದ ಅಂಕಿ-ಅಂಶಗಳ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸ್ವಯಂ ಜನಗಣತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ಮನವಿ ಮಾಡಿದ್ದಾರೆ. ​ಚಿಕ್ಕನಾಯಕನಹಳ್ಳಿ ಪಟ್ಟಣದ ತಿನಂಶ್ರೀ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,​ ಸಾರ್ವಜನಿಕರು ಸ್ವತಃ ತಾವೇ ಮೊಬೈಲ್ ಮೂಲಕ ಗಣತಿ ಮಾಡಿಸಿಕೊಳ್ಳಲು ಅವಕಾಶವಿದೆ. ಏಪ್ರಿಲ್ 15ರಿಂದ ಮೇ 15ರವರೆಗೆ ​ಮನೆ-ಮನೆ ಸಮೀಕ್ಷೆ ಅಧಿಕಾರಿಗಳು ಪ್ರತಿಯೊಬ್ಬರ ಮನೆಬಾಗಿಲಿಗೆ ಬಂದು ನಡೆಸಲಿದ್ದಾರೆ. ಪ್ರತಿಯೊಬ್ಬ ನಾಗರಿಕರು ತಮ್ಮ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳಿಗೆ ನಿಖರವಾದ ಮಾಹಿತಿಯನ್ನು ನೀಡಬೇಕು. ಆದ್ದರಿಂದ ಎಲ್ಲಾ ವರ್ಗದ ಜನರು, ತಾವು ಯಾವ ಸಮಾಜಕ್ಕೆ ಸೇರಿದವರು ಮತ್ತು ನಿಮ್ಮ ಅಗತ್ಯತೆಗಳೇನು ಎಂಬ ವಾಸ್ತವ ಸಂಗತಿಯನ್ನು ಅಧಿಕಾರಿಗಳಿಗೆ ತಿಳಿಸುವ ಮೂಲಕ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸಹಕರಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿಯೇ ಸ್ವಯಂ ಡಿಜಿಟಲ್ ಗಣತಿಯಲ್ಲಿ ಶಾಸಕ ಸಿ ಬಿ ಸುರೇಶ್ ಬಾಬು ಭಾಗವಹಿಸಿ ತಮ್ಮ ವಿವರವನ್ನು ಅಪ್ಲೋಡ್ ಮಾಡಿದರು.

​ಈ ಸಂದರ್ಭದಲ್ಲಿ ತಹಸೀಲ್ದಾರ್ ಮಮತಾ ಹಾಗೂ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಗಣತಿ ಪ್ರಕ್ರಿಯೆಯ ಕುರಿತು ತಾಂತ್ರಿಕ ಮಾಹಿತಿಗಳನ್ನು ನೀಡಿದರು.