ಜನಸ್ಪಂದನಾ ಸಭೆಯಿಂದ ಬಡವರಿಗೆ ಸಹಾಯ: ಸಚಿವ ಮಂಕಾಳ ವೈದ್ಯ

| Published : Jun 30 2024, 12:45 AM IST

ಸಾರಾಂಶ

ಭಟ್ಕಳ ತಾಲೂಕಿನ ಬೆಳಕೆಯ ಬೊಮ್ಮನಕೇರಿ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಶನಿವಾರ ತಾಲೂಕು ಮಟ್ಟದ ಜನಸ್ಪಂದನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಬೆಳಕೆಯ ಬೊಮ್ಮನಕೇರಿ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಶನಿವಾರ ತಾಲೂಕು ಮಟ್ಟದ ಜನಸ್ಪಂದನಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಜನರ ಸಂಕಷ್ಟಗಳಿಗೆ ನಾವು ಸ್ಪಂದಿಸಬೇಕಾಗಿದೆ, ಇದು ನಮ್ಮ ಕರ್ತವ್ಯವಾಗಿದ್ದು ಸರಕಾರದ ಜನಸ್ಪಂದನದಿಂದ ಬಡವರಿಗೆ ಸಹಾಯವಾಗಲಿದೆ. ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ನಡೆಸಬೇಕಾಗಿದೆ. ನಮ್ಮನ್ನು ಆಯ್ಕೆ ಮಾಡಿ ಒಂದು ವರ್ಷ ಮುಗಿದಿದ್ದು, ಈ ಅವಧಿಯಲ್ಲಿ ನಿಮಗೆ ಸಹಾಯ ಮಾಡುವಷ್ಟು ಮಾಡಿದ್ದೇನೆ. ತಾಲೂಕು ಮಟ್ಟದ ಅಧಿಕಾರಿಗಳು ಇಂದು ಬಂದು ಜನತೆಗೆ ಸಹಾಯ ಸಹಕಾರ ಮಾಡಿದ್ದಾರೆ. ಯಾವುದೇ ಸಮಸ್ಯೆ ಇದ್ದರೆ ಅದನ್ನು ಚರ್ಚೆ ಮಾಡಿ ಪರಿಹರಿಸಿಕೊಳ್ಳಿ ಎಂದು ಕರೆ ನೀಡಿದರು.

ತಾಲೂಕು ಮಟ್ಟದಲ್ಲಿ ಪರಿಹಾರವಾಗದ ಸಮಸ್ಯೆ ಇದ್ದಲ್ಲಿ ಜಿಲ್ಲಾ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ರಾಜ್ಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡಲಾಗುವುದು ಎಂದೂ ಅವರು ಹೇಳಿದರು.

ಅಧಿಕಾರಿಗಳೂ ಎಲ್ಲರೂ ಒಟ್ಟಾಗಿ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಹೇಳಿದ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

ನಂತರ ತಾಲೂಕಿನ ಜನತೆಗೆ ಮಂಜೂರಿಯಾದ ವಿಧವಾ ವೇತನ, ಅಂಗವಿಲಕ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸೌಲಭ್ಯಗಳ ಮಂಜೂರಿ ಪತ್ರವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ಎನ್., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿ.ಡಿ. ಮೊಗೇರ, ತಹಸೀಲ್ದಾರ್ ನಾಗರಾಜ ನಾಯ್ಕಡ, ಬೆಳಕೆ ಗ್ರಾಮ ಪಂಚಾಯತ್ ಆಧ್ಯಕ್ಷ ಜಗದೀಶ ನಾಯ್ಕ, ಪಾಂಡುರಂಗ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ನಂತರ ಜನರಿಂದ ಅಹವಾಲು ಸ್ವೀಕರಿಸಿದ ಸಚಿವರು ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿಕೊಟ್ಟರು. ಬೆಳಕೆ ಗ್ರಾಮದಲ್ಲಿ ಪೋಡಿಮುಕ್ತ ಗ್ರಾಮ ಮಾಡಿದ್ದರೂ ತಮ್ಮ ಸರ್ವೆ ನಂಬ್ರ ಒಡೆದು ಕೂಡಿಸಿಕೊಟ್ಟಿಲ್ಲ ಎಂದು ಸಾರ್ವಜನಿಕರು ದೂರಿದರು.

ರಸ್ತೆ, ಸೇತುವೆ, ಅಂಗನವಾಡಿ ಶಿಕ್ಷಕಿ, ಸರ್ವೆ ಇಲಾಖೆ, ಕಂದಾಯ, ಕೃಷಿ ಇಲಾಖೆ, ಹೆಸ್ಕಾಂ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ವಿಷಯ ಚರ್ಚೆಗೆ ಬಂದಿದ್ದು ಒಟ್ಟು ೩೬ ಅರ್ಜಿಗಳು ಸ್ವೀಕೃತಗೊಂಡಿವೆ. ಅವುಗಳಲ್ಲಿ ಬಹುತೇಕ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಿದ್ದು, ಉಳಿದವುಗಳನ್ನು ಸೂಕ್ತ ಕ್ರಮಕ್ಕೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.