ಮನೆಯಲ್ಲಿನ ಹಿರಿಯರು ಮತ್ತು ಪಾಲಕರು ಮಕ್ಕಳಿಗೆ ವಚನ ಕಲಿಸಿಕೊಡುವ ಕೆಲಸ ಮಾಡಬೇಕು, ಆಧ್ಯಾತ್ಮದ ಒಲವು ಮೂಡಿಸಲು ಮುಂದಾಗಬೇಕು

ಕುಷ್ಟಗಿ: ಮಕ್ಕಳಲ್ಲಿ ಸನಾತನ ಸಂಸ್ಕೃತಿ ಮತ್ತು ಸಂಸ್ಕಾರ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಶಿಕ್ಷಕಿ ಹೇಮಲತಾ ಹಿರೇಮಠ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಲ ಸಜ್ಜನ ಪುಣ್ಯಸ್ಮರಣೆಯ ಅಂಗವಾಗಿ ನಿರ್ಮಲ ಪ್ರಕಾಶದಿಂದ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಮನೆಯಲ್ಲಿನ ಹಿರಿಯರು ಮತ್ತು ಪಾಲಕರು ಮಕ್ಕಳಿಗೆ ವಚನ ಕಲಿಸಿಕೊಡುವ ಕೆಲಸ ಮಾಡಬೇಕು, ಆಧ್ಯಾತ್ಮದ ಒಲವು ಮೂಡಿಸಲು ಮುಂದಾಗಬೇಕು ಎಂದರು.

ವಚನಗಳಿಂದ ಮನುಷ್ಯನಲ್ಲಿರುವ ಕೆಟ್ಟ ಗುಣ ಕಿತ್ತೊಗೆಯುವ ಶಕ್ತಿ ಇದೆ, ಪ್ರತಿಯೊಬ್ಬರು ಉತ್ತಮ ಕಾಯಕ ಮಾಡಬೇಕು, ಸತ್ಯವನ್ನೇ ನುಡಿಯಬೇಕು,ನುಡಿದಂತೆ ನಡೆಯಬೇಕು, ಕಾಯಕದಲ್ಲಿ ದೇವರನ್ನು ಕಾಣಬೇಕು ದಿನಕ್ಕೊಂದು ತಾಸು ಆಧ್ಯಾತ್ಮಿಕತೆಗೆ ಒಳಗಾದರೆ ಯಾವುದೇ ಕಾಯಿಲೆಗಳು ಬರುವದಿಲ್ಲ ಆರೋಗ್ಯವಂತರಾಗಿರುತ್ತೇವೆ ಎಂದ ಅವರು ವಚನಗಳ ಸಾರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕುಷ್ಟಗಿ ತಾಲೂಕು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಪ್ರತೀಕವಾಗಿವೆ. ವಚನ ಸಾಹಿತ್ಯ ಸಮಾಜದಲ್ಲಿ ಅನೇಕ ರೀತಿಯಲ್ಲಿ ಸುಧಾರಣೆ ತಂದಿವೆ. ವಚನ ಸಾಹಿತ್ಯವು ಪ್ರಜಾಪ್ರಭುತ್ವವಾದಿ ನಿಲುವಿನ ಸಾಹಿತ್ಯವಾಗಿದ್ದು ಎಲ್ಲ ವರ್ಗಗಳನ್ನು ಒಳಗೊಂಡ ಸಾಹಿತ್ಯವಾಗಿದೆ. ಬಸವಾದಿ ಶಿವಶರಣರ ವಚನ ವಿದ್ಯಾರ್ಥಿಗಳು ಓದಿ ಅವುಗಳ ಸಾರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಸಾಹಿತಿ ನಿಂಗಪ್ಪ ಸಜ್ಜನ ಮಾತನಾಡಿ, ವಚನಗಳು ಮಕ್ಕಳಲ್ಲಿ ನೈತಿಕ ಮೌಲ್ಯಗಳ ವೃದ್ಧಿಗೆ ಸಹಕಾರಿಯಾಗಿದೆ ಎಂದ ಅವರು, ಇಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ಇಂದಿನ ಸಮಾಜದಲ್ಲಿ ಅಗತ್ಯವಿದೆ ಎಂದರು.

ಹಿರಿಯ ಸಾಹಿತಿ ಕೆ.ವೈ.ಕಂದಕೂರು, ಎಸ್ಡಿಎಂಸಿ ಅಧ್ಯಕ್ಷ ಬಂದೇನವಾಜ್ ಬಿಜಕತ್ತಿ, ಚಂದಪ್ಪ ಹಕ್ಕಿ, ಅಯ್ಯಪ್ಪ ಗೋತಗಿ, ಪ್ರಭುದೇವ ಕಲ್ಯಾಣಮಠ, ಚನ್ನಬಸಪ್ಪ ಕುಂಬಾರ, ಮಲ್ಲೇಶ ಕಿರಗಿ, ಶ್ರೀನಿವಾಸ ಕಂಟ್ಲಿ, ನಾರಾಯಣ ಮಾಡಬಾಳ, ಮಹೇಶ ಹಡಪದ, ನಾಗರಾಜ ಶೆಟ್ಟರ್, ಶಿವಪ್ಪ ಗೊರ್ಜನಾಳ, ಬಸಯ್ಯ ವಸ್ತ್ರದಮಠ, ದೇವರಾಜ ವಿಶ್ವಕರ್ಮ, ಸುರೇಶ ಹುನಗುಂದ, ಪರಶಿವಮೂರ್ತಿ ಮಾಟಲದಿನ್ನಿ, ಶರಣಪ್ಪ ಮಡಿವಾಳರ, ಸುಜಾತ ಮಡಿವಾಳರ, ಅಮರೇಶ ಸಜ್ಜನ, ರಾಘವೇಂದ್ರ ಕುಂಬಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.

ವಚನ ಕಂಠಪಾಠ ಸ್ಪರ್ಧೆಯಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದರು. ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಬಸವಶ್ರೀ ಸೇವಾರತ್ನ ಪ್ರಶಸ್ತಿ ಪುರಸ್ಕೃತ ಮಹೇಶ ಹಡಪದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳು ವಚನ ಪ್ರಸ್ತುತಪಡಿಸಿದರು.