ಸಾರಾಂಶ
ಶಿರಹಟ್ಟಿ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೇ, ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದಳು. ಕುಟುಂಬದ ಸದಸ್ಯರ ಕಿರುಕುಳ ಸಹಿಸಿ ಅವರ ಅವಗುಣಗಳನ್ನು ಪ್ರೀತಿ, ಸಹನೆಯಿಂದ ತಿದ್ದಿ, ತೀಡಿ ಅವರನ್ನು ಸರಿದಾರಿಗೆ ತರಬಹುದು ಎಂಬುದನ್ನು ಜಗತ್ತಿಗೆ ತೋರಿಸಿದ ಏಕೈಕ ಮಹಿಳೆ ಹೇಮರಡ್ಡಿ ಮಲ್ಲಮ್ಮ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು. ಶನಿವಾರ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಮಾಜದ ಒಳಿತಿಗಾಗಿ ಉತ್ತಮ ಸಂದೇಶಗಳನ್ನು ನೀಡಿದ ಹೇಮರಡ್ಡಿ ಮಲ್ಲಮ್ಮ ಸಮಸ್ತ ಸ್ತ್ರಿಕುಲಕ್ಕೆ ಮಾದರಿಯಾಗಿದ್ದಾರೆ. ಅವರ ತತ್ವ ಸಿದ್ಧಾಂತ ಹಾಗೂ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಹೇಮರಡ್ಡಿ ಮಲ್ಲಮ್ಮ ಆಶೀರ್ವಾದ ಇರುವ ರೆಡ್ಡಿ ಸಮಾಜವು ನಂಬಿಕೆಗೆ ಅರ್ಹವಾಗಿದ್ದು, ಪ್ರತಿಯೊಂದು ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸದಾಕಾಲ ಕಾಯಕದಲ್ಲಿ ಶ್ರದ್ಧೆಯಿಟ್ಟು ಇಡೀ ಮನುಕುಲಕ್ಕೆ ಆದರ್ಶಳಾಗಿ ಬದುಕಿದ ಶಿವಶರಣೆ ಎನಿಸಿಕೊಂಡ ಹೇಮರಡ್ಡಿ ಮಲ್ಲಮ್ಮಳ ಬದುಕು ಸರ್ವರಿಗೂ ಸ್ಫೂರ್ತಿ ಎಂದ ಅವರು, ಸಾಕ್ಷಾತ್ ಮಲ್ಲಿಕಾರ್ಜುನನ್ನು ಒಲಿಸಿಕೊಂಡಿರುವ ಹೇಮರಡ್ಡಿ ಮಲ್ಲಮ್ಮ ಮಹಾಸಾದ್ವಿಯಾಗಿದ್ದಾರೆ ಎಂದರು.ಮಹಾ ಶಿವಶರಣೆಯಾಗಿ ಬೆಳಗಿದ ಹೇಮರಡ್ಡಿ ಮಲ್ಲಮ್ಮ ೧೨ನೇ ಶತಮಾನದ ಶಿವಶರಣರಂತೆ ವಚನಗಳನ್ನು ರಚಿಸಲಿಲ್ಲವಾದರೂ ಅವರ ಬದುಕೇ ಒಂದು ವಚನ ಸಂಪುಟದಂತಿದೆ. ಅವರ ಜೀವನಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಯಾಗಿವೆ. ಅವರು ಪ್ರತಿಪಾದಿಸಿದ ಭಕ್ತಿ ಮಾರ್ಗದ ದಾರಿಯಲ್ಲಿ ಎಲ್ಲರೂ ನಡೆಯಬೇಕು ಎಂದು ಹೇಳಿದರು. ರಡ್ಡಿ ಸಮಾಜಕ್ಕೆ ಬಡತನ ನೀಡಬೇಡವೆಂದು ಸಾಕ್ಷಾತ್ ಪರಮಾತ್ಮನಾದ ಮಲ್ಲಿಕಾರ್ಜುನನಲ್ಲಿ ತನ್ನ ಭಕ್ತಿಯಿಂದ ಭಜಿಸಿ ಪರಮಾತ್ಮನಿಗೆ ಅಂಬಲಿಯನ್ನು (ಪ್ರಸಾದ) ನೀಡಿದ ಶರಣೆ ಹೇಮರಡ್ಡಿ ಮಲ್ಲಮ್ಮ ನಮಗೆ ಆದರ್ಶಳಾಗಿದ್ದಾಳೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಇವರ ಜೀವನವು ಅವಿಸ್ಮರಣೀಯವಾಗಿದೆ. ಮುಖಂಡರಾದ ಎಲ್.ಡಿ. ಪಾಟೀಲ, ಎನ್.ಎನ್, ಗೋಕಾವಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಮನೆಯ ಒಡತಿಯಾಗಿದ್ದರೂ ದಾಸಿಯಂತೆ ಸೇವೆ ಸಲ್ಲಿಸಿ ಎಂತಹ ಕಷ್ಟದಲ್ಲಿಯೂ ಶಿವನನ್ನು ಸ್ಮರಿಸುತ್ತಿದ್ದರು. ಪ್ರತಿಯೊಬ್ಬ ಮಹಿಳೆಗೂ ಆದರ್ಶಪ್ರಾಯವಾದ ವ್ಯಕ್ತಿತ್ವ ಹೊಂದಿದ ಹೇಮರಡ್ಡಿ ಮಲ್ಲಮ್ಮ ಚರಿತ್ರೆಯನ್ನು ಪ್ರತಿಯೊಬ್ಬ ಮಹಿಳೆಯೂ ಅರಿತುಕೊಳ್ಳಬೇಕು. ಇವರ ಆದರ್ಶ ಮೌಲ್ಯಗಳನ್ನು ಮಹಿಳೆಯರು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಏನೇ ಕಷ್ಟ ಬಂದರೂ ಅದಕ್ಕೆ ಹೆದರದೇ ಪರರಿಗೆ ಒಳಿತು ಮಾಡುವ ಗುಣ ಅವರಲ್ಲಿತ್ತು. ಅಂತಹ ಸದ್ಗುಣಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಏನೇ ಕಷ್ಟನಷ್ಟ ಅನುಭವಿಸಿದರು ಹೇಮರಡ್ಡಿ ಮಲ್ಲಮ್ಮ ಅವರು ಮಾತ್ರ ಇತರರಿಗೆ ಒಳಿತನ್ನು ಬಯಸುವ ವಿಶಾಲ ಮನೋಭಾವದ ಗುಣ ಹೊಂದಿದ್ದರು. ಅವರು ಕಾಯಕ ಮತ್ತು ದಾಸೋಹಕ್ಕೆ ವಿಶೇಷ ಒತ್ತು ನೀಡಿದ್ದರು ಎಂದು ಹೇಳಿದರು. ಸಹನೆ ಮತ್ತು ತಾಳ್ಮೆಗೆ ಇನ್ನೊಂದು ಹೆಸರೆಂಬಂತೆ ಬದುಕಿದ್ದ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ಎಲ್ಲಾ ಸ್ತ್ರೀಯರಿಗೂ ಮಾದರಿಯಾಗಿವೆ. ಕಷ್ಟ ಕಾರ್ಪಣ್ಯವನ್ನು ಸಹಿಸುವ ಸಹನೆ ಅವರಲ್ಲಿತ್ತು. ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು, ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಮಾದರಿ ಎಂದು ತಿಳಿಸಿದರು. ಅಜ್ಜು ಪಾಟೀಲ, ಜೆ.ಪಿ. ಪೂಜಾರ, ಸಂತೋಷ ಅಸ್ಕಿ, ರಾಧಾ ದೇಸಾಯಪಟ್ಟಿ, ಜೆ.ಎಚ್. ಭಾವಿಕಟ್ಟಿ, ಬಿ.ಎಸ್. ಕುರಡಗಿ, ಶಿವರಾಜ ಜಾಧವ, ಎಫ್.ಎಂ. ನಾರ್ಶಿ, ಕೆ.ಎ. ಬಳಿಗೇರ ಉಪಸ್ಥಿತರಿದ್ದರು.