ಸಾರಾಂಶ
ಕೊಪ್ಪಳದಲ್ಲಿ ತುಂಗಾಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿಹೋದ ಹಿನ್ನೆಲೆಯಲ್ಲಿ ಹಾಸನ ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ಮಂಗಳವಾರ ಜಲಾಶಯದ ಅಧಿಕಾರಿಗಳು ಜಲಾಶಯದ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು. . ಜಲಾಶಯದ 6 ರೇಡಿಯಲ್ ಕ್ರಸ್ಟ್ ಗೇಟ್ ಹಾಗೂ ಚೈನ್ ಲಿಂಕ್‌ಗಳು ಸುಭದ್ರವಾಗಿವೆ. ನಾಲ್ಕು ದಶಕಗಳ ಹಿಂದೆ ತಲಾ 25 ಟನ್ ತೂಕದ 6 ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಈ ಗೇಟುಗಳು ತುಕ್ಕು ಹಿಡಿಯದಂತೆ ಪ್ರತೀ ಆರು ತಿಂಗಳಿಗೊಮ್ಮೆ 15 ಲಕ್ಷ ರು. ವೆಚ್ಚದಲ್ಲಿ ಮೂರು ಬ್ಯಾರಲ್ 180 ಕೆಜಿ ಗ್ರೀಸಿಂಗ್ ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಹಾಸನ
ಕೊಪ್ಪಳದಲ್ಲಿ ತುಂಗಾಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿಹೋದ ಹಿನ್ನೆಲೆಯಲ್ಲಿ ಹಾಸನ ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ಮಂಗಳವಾರ ಜಲಾಶಯದ ಅಧಿಕಾರಿಗಳು ಜಲಾಶಯದ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು.ಮುಖ್ಯ ಎಂಜಿನಿಯರ್ ಜಿ.ಸಿ.ಮಂಜುನಾಥ್, ಸೂಪರಿಂಟೆಂಡೆಂಟ್ ಎಂಜಿನಿಯರ್ ಜ್ಯೋತಿ.ಜಿ.ಕೆ ಅವರನ್ನೊಳಗೊಂಡ ತಂಡದಿಂದ ಪರಿಶೀಲನೆ ನಡೆಸಲಾಯಿತು. ಜಲಾಶಯದ ಕ್ರಸ್ಟ್ ಗೇಟ್ ಸುರಕ್ಷತೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ವಿಡಿಯೋ ಗ್ರಫಿ, ಫೋಟೋಗ್ರಫಿ ಹಾಗೂ ಡ್ರೋನ್ ಮೂಲಕ ವಿಡಿಯೋ ಸಂಗ್ರಹಿಸಲಾಗಿದೆ. ಈ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಿದ್ದಾರೆ.
ಈ ನಡುವೆ ಜಿಲ್ಲಾಧಿಕಾರಿ ಕೂಡ ಜಲಾಶಯದ ಭದ್ರತೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆ ಪ್ರಕಾರ 1980ರಲ್ಲಿ ಹಾಸನ ತಾಲೂಕಿನ ಗೊರೂರು ಬಳಿ ನಿರ್ಮಾಣವಾಗಿರುವ ಹೇಮಾವತಿ ಜಲಾಶಯದಲ್ಲಿ ಒಟ್ಟು 37.103 ಟಿಎಂಸಿ 2922 ಅಡಿ ನೀರು ಸಂಗ್ರಹ ಸಾಮರ್ಥ್ಯವಿದೆ. ಜಲಾಶಯದ 6 ರೇಡಿಯಲ್ ಕ್ರಸ್ಟ್ ಗೇಟ್ ಹಾಗೂ ಚೈನ್ ಲಿಂಕ್‌ಗಳು ಸುಭದ್ರವಾಗಿವೆ. ನಾಲ್ಕು ದಶಕಗಳ ಹಿಂದೆ ತಲಾ 25 ಟನ್ ತೂಕದ 6 ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಈ ಗೇಟುಗಳು ತುಕ್ಕು ಹಿಡಿಯದಂತೆ ಪ್ರತೀ ಆರು ತಿಂಗಳಿಗೊಮ್ಮೆ 15 ಲಕ್ಷ ರು. ವೆಚ್ಚದಲ್ಲಿ ಮೂರು ಬ್ಯಾರಲ್ 180 ಕೆಜಿ ಗ್ರೀಸಿಂಗ್ ಮಾಡಲಾಗುತ್ತಿದೆ.