ಯಾವುದೇ ಕಾರಣಕ್ಕೂ ಹೇಮಾವತಿ ನೀರು ಮಾಗಡಿ ರಾಮನಗರಕ್ಕೆ ನೀಡುವುದಿಲ್ಲ ಎಂದು ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಹೇಳಿದರು
ಕನ್ನಡಪ್ರಭ ವಾರ್ತೆ ಗುಬ್ಬಿ
ಯಾವುದೇ ಕಾರಣಕ್ಕೂ ಹೇಮಾವತಿ ನೀರು ಮಾಗಡಿ ರಾಮನಗರಕ್ಕೆ ನೀಡುವುದಿಲ್ಲ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಬರುವ ಮುನ್ನವೇ ಲಿಂಕ್ ಕೆನಾಲ್ ಕಾಮಗಾರಿ ಮಾಡುವ ಬಗ್ಗೆ ಮಾತನಾಡಿರುವ ಕುಣಿಗಲ್ ಶಾಸಕ ರಂಗನಾಥ್ ಹೈಕೋರ್ಟ್ ನಲ್ಲಿ ಈ ಕಾಮಗಾರಿ ಕುರಿತ ಎಷ್ಟು ಕೇಸ್ ಗಳು ಇವೆ ಎನ್ನುವ ಬಗ್ಗೆ ತಿಳಿದುಕೊಳ್ಳಬೇಕು. ಭೂ ಸ್ವಾಧೀನ ಕೇಸ್ ಬಗ್ಗೆ ಆದೇಶ ಸಿಗುವ ಮುನ್ನವೇ ಪತ್ರಿಕಾ ಹೇಳಿಕೆ ನೀಡಿ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಸರ್ಕಾರದ ಅಧಿಕಾರ ದುರುಪಯೋಗ ಮಾಡಿಕೊಂಡು ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದರೆ ಸಾವಿರ ಸಂಖ್ಯೆ ಲಕ್ಷಕ್ಕೆ ತಿರುಗಿ ಉಗ್ರ ಹೋರಾಟ ಮಾಡಲು ಇಲ್ಲಿನ ರೈತರು ಸಜ್ಜಾಗಿದ್ದಾರೆ. ನಾವೇ ಶಾಮಿಯಾನ ಹಾಕಿಸಿ ಊಟ ತಿಂಡಿ ವ್ಯವಸ್ಥೆ ಮಾಡುತ್ತೇವೆ. ಕುಣಿಗಲ್ ಕೆರೆಗಳಿಗೆ ನೀರಿಗೆ ನಾವು ಹೋರಾಟ ಮಾಡುತ್ತೇವೆ. ಅಕ್ರಮಕ್ಕೆ ಬಲಿಯಾಗುವ ರೈತರು ನಾವಲ್ಲ. ತಿರುಕನ ಕನಸು ಕಾಣಬೇಡಿ ಎಂದು ಕುಣಿಗಲ್ ರಂಗನಾಥ್ ಅವರಿಗೆ ಟಾಂಗ್ ನೀಡಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಜಿಲ್ಲೆಯ ರೈತರ ಬದುಕು ಹೇಮಾವತಿ ನೀರಿನ ಮೇಲೆ ಅವಲಂಬಿತವಾಗಿದೆ. ಲಿಂಕ್ ಕೆನಾಲ್ ಬಗ್ಗೆ ಮಾತನಾಡಿದ ರಂಗನಾಥ್ ಅವರ ಹೇಳಿಕೆ ಬಗ್ಗೆ ಕುಣಿಗಲ್ ವಿರೋಧ ಪಕ್ಷವೇ ಒಪ್ಪುತ್ತಿಲ್ಲ. ಕುಣಿಗಲ್ ಹೆಸರಿನಲ್ಲಿ ಮಾಗಡಿ ರಾಮನಗರದತ್ತ ನೀರು ಹರಿಸುವ ಹುನ್ನಾರ ಎಂದು ಅಲ್ಲಿನ ರೈತರಿಗೂ ತಿಳಿದಿದೆ ಎಂದರು. ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ, ಜಿಪಂ ಮಾಜಿ ಸದಸ್ಯ, ಪಿ.ಬಿ.ಚಂದ್ರಶೇಖರಬಾಬು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ರೈತಸಂಘದ ಶಿವಕುಮಾರ್, ಬಿ.ಲೋಕೇಶ್, ತಿರುಮಲೇಶ್, ಜಯಣ್ಣ, ಶಿವಾನಂದ್, ಹೊಸಕೆರೆ ಬಸವರಾಜು, ಪತ್ರೆ ದಿನೇಶ್, ಹೇರೂರು ರಮೇಶ್, ಹೊಸಹಳ್ಳಿ ರೇಣುಕಾ ಪ್ರಸಾದ್ ಇನ್ನಿತರರು ಇದ್ದರು.