ತಮಿಳುನಾಡಿಗೆ ಕಾವೇರಿ ಕಣಿವೆಯ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯದ ನೀರನ್ನು ಹರಿಸುತ್ತಿರುವುದಲ್ಲದೇ, ಹೇಮಾವತಿ ಜಲಾಶಯದಿಂದಲೂ ಹೆಚ್ಚುವರಿ ನೀರನ್ನು ಪಡೆದುಕೊಂಡು ಒಟ್ಟು 13 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಹರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳುನಾಡಿಗೆ ಕಾವೇರಿ ಕಣಿವೆಯ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯದ ನೀರನ್ನು ಹರಿಸುತ್ತಿರುವುದಲ್ಲದೇ, ಹೇಮಾವತಿ ಜಲಾಶಯದಿಂದಲೂ ಹೆಚ್ಚುವರಿ ನೀರನ್ನು ಪಡೆದುಕೊಂಡು ಒಟ್ಟು 13 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಹರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಹೇಮಾವತಿ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಒಳಹರಿವಿನ ಪ್ರಮಾಣ ಕಡಿಮೆಯಿದ್ದರೂ ಸೋಮವಾರದಿಂದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ನೀರನ್ನು ಕೆಆರ್‌ಎಸ್‌ಗೆ ಹರಿಸಿಕೊಂಡು ತಮಿಳುನಾಡಿನತ್ತ ಹರಿಯಬಿಟ್ಟಿರುವುದಾಗಿ ತಿಳಿದುಬಂದಿದೆ.
ಜಲಸಂಪನ್ಮೂಲ ಇಲಾಖೆ ಬಿಡುಗಡೆಗೊಳಿಸಿರುವ ಮಾಹಿತಿಯಂತೆ ಹೇಮಾವತಿ ಜಲಾಶಯಕ್ಕೆ ಕೇವಲ ೪೫೮೪ ಕ್ಯುಸೆಕ್ ಒಳಹರಿವಿದ್ದು, ಹೊರಹರಿವಿನ ಪ್ರಮಾಣ ೭೨೭೫ ಕ್ಯುಸೆಕ್ ಇದೆ. ಭಾನುವಾರ ಹೊರಹರಿವಿನ ಪ್ರಮಾಣ ೫೫೦೦ ಕ್ಯುಸೆಕ್ ಇತ್ತಾದರೂ ಸೋಮವಾರದಿಂದ ಹೆಚ್ಚುವರಿಯಾಗಿ ೧೮೦೦ ಕ್ಯುಸೆಕ್‌ಗೆ ಏರಿಕೆ ಮಾಡಲಾಗಿದೆ. ಒಟ್ಟು ನದಿ-ನಾಲೆ ಸೇರಿದಂತೆ ಅಣೆಕಟ್ಟೆಯಿಂದ ೮೮೫೦ ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ ೨೯೨೨ ಅಡಿಗಳಾಗಿದ್ದು, ಪ್ರಸ್ತುತ ಅಣೆಕಟ್ಟೆಯಲ್ಲಿ ೨೯೧೨.೭೦ ಅಡಿ ಇದೆ. ಜಲಾಶಯದಲ್ಲಿ ಶೇ.೭೮ರಷ್ಟು ನೀರು ಸಂಗ್ರಹವಾಗಿದ್ದು, ೨೮.೭೮ ಟಿಎಂಸಿ ನೀರು ಶೇಖರಣೆಗೊಂಡಿದೆ.ಕೆಆರ್‌ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ ೧೨೪.೮೦ ಅಡಿ ಇದ್ದು, ಅಣೆಕಟ್ಟೆಯಲ್ಲಿ ೧೦೯.೭೪ ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ ೪೩೭೫ ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, ಅಣೆಕಟ್ಟೆಯಿಂದ ೪೯೮೧ ಕ್ಯುಸೆಕ್ ನೀರನ್ನು ನದಿಗೆ ಸೇರಿ ೭೬೯೭ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ೩೧.೪೬೧ ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೂ ಬಳಕೆಗೆ ಸಿಗುವ ನೀರು ೨೩.೦೮೨ ಟಿಎಂಸಿ ಅಡಿಯಷ್ಟು ಮಾತ್ರ ಅಣೆಕಟ್ಟೆಯಲ್ಲಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಾಡಿರುವ ಆದೇಶಕ್ಕಿಂತಲೂ ತಮಿಳುನಾಡಿಗೆ ಹೆಚ್ಚು ನೀರು ಹರಿಯುತ್ತಿದ್ದರೂ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಇದುವರೆಗೆ ೩೫ ಟಿಎಂಸಿ ನೀರು ಹರಿದುಬರಬೇಕಿತ್ತು. ಅಷ್ಟು ನೀರು ಹರಿದುಬಂದಿಲ್ಲವೆಂದು ವಾದ ಮಂಡಿಸಿದೆ. ಪ್ರಾಧಿಕಾರ ತಮಿಳುನಾಡಿಗೆ ನಿತ್ಯ ೯೫೦೦ ಕ್ಯುಸೆಕ್ ನೀರು ಹರಿಸುವಂತೆ ಸೂಚಿಸಿದ್ದರೂ ಕಾವೇರಿ ಕಣಿವೆ ಜಲಾಶಯಗಳಾದ ಕೆಆರ್‌ಎಸ್‌ನಿಂದ ನದಿಗೆ ೪೯೮೧, ಕಬಿನಿಯಿಂದ ೪೪೨೫ ಕ್ಯುಸೆಕ್ ನೀರು ಹರಿದುಹೋಗುತ್ತಿದೆ. ಇದರ ನಡುವೆ ಹೇಮಾವತಿಯಿಂದ ೭೨೭೫ ಕ್ಯುಸೆಕ್ ನೀರನ್ನು ಕೆಆರ್‌ಎಸ್‌ಗೆ ಹರಿಸಿಕೊಂಡು ಸುಮಾರು 13 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ.ನಾಲೆಗಳಿಗೆ, ಕುಡಿಯುವ ನೀರಿನ ನೆಪದಲ್ಲಿ ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಹರಿಸುವ ಮೂಲಕ ನೀರಾವರಿ ಇಲಾಖೆ ಅಧಿಕಾರಿಗಳು ನೈಜ ಮಾಹಿತಿಯನ್ನು ಬಹಿರಂಗಪಡಿಸದೆ ಸರಾಗವಾಗಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ಹೇಳಲಾಗಿದೆ.