ಸಾರಾಂಶ
ಶುಕ್ರವಾರ ತಡರಾತ್ರಿ ಹೆಮ್ಮಾಡಿಯ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಕನ್ನ ಹಾಕಿದ್ದ ಅಪರಿಚಿತ ಕಳ್ಳ, ದೇಗುಲದ ಹುಂಡಿ ಹಣ ಹಾಗೂ ಸತ್ಯನಾರಾಯಣ ಪೂಜೆಯ ಸಂಗ್ರಹಿತ ಹಣವನ್ನು ದೋಚಿ ಕೊಂಡೊಯ್ಯುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಕನ್ನಡಪ್ರಭ ವಾರ್ತೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇಗುಲದ ಹುಂಡಿಯದ್ದು ಎನ್ನಲಾದ ಚಿಲ್ಲರೆ ನೋಟುಗಳಿದ್ದ ಚೀಲವೊಂದು ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ. ಶುಕ್ರವಾರ ತಡರಾತ್ರಿ ಹೆಮ್ಮಾಡಿಯ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಕನ್ನ ಹಾಕಿದ್ದ ಅಪರಿಚಿತ ಕಳ್ಳ, ದೇಗುಲದ ಹುಂಡಿ ಹಣ ಹಾಗೂ ಸತ್ಯನಾರಾಯಣ ಪೂಜೆಯ ಸಂಗ್ರಹಿತ ಹಣವನ್ನು ದೋಚಿ ಕೊಂಡೊಯ್ಯುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಹಕಾರದಿಂದ ತನಿಖೆ ಮುಂದುವರಿಸಿದ್ದರು.ಸರಣಿ ಕಳ್ಳತನ:
ಅದೇ ದಿನ ಸಮೀಪದ ಮೂರು ಮನೆಗಳಿಗೂ ಕನ್ನ ಹಾಕಿದ್ದ ಕಳ್ಳ, ಅಲ್ಪ ಸ್ವಲ್ಪ ಹಣ ದೋಚಿ ನಸುಕಿನ ಜಾವ 4.30ರ ವೇಳೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯಾವಳಿಯೂ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಮೂರು ಮನೆಯವರು ಮನೆಯಲ್ಲಿಲ್ಲದ ಕಾರಣ ಅಲ್ಲಿನ ಕಳ್ಳತನ ಪ್ರಕರಣಗಳು ಶನಿವಾರ ಮಧ್ಯಾಹ್ನದ ವೇಳೆ ಬೆಳಕಿಗೆ ಬಂದಿತ್ತು.ಶಾಲೆಯಲ್ಲಿ ಹಣದ ಚೀಲ ಪತ್ತೆ:
ದೇವಸ್ಥಾನದ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಯ ವರಾಂಡದ ಜಗುಲಿಯ ಮೇಲೆ ಶನಿವಾರ ಹಸಿರು ಬಣ್ಣದ ಚೀಲವೊಂದು ಇದ್ದುದನ್ನು ಗಮನಿಸಿದ್ದ ಶಿಕ್ಷಕರು, ಈ ಬಗ್ಗೆ ಅಷ್ಟೇನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸೋಮವಾರ ಚೀಲವನ್ನು ಗಮನಿಸಿದ ವಿದ್ಯಾರ್ಥಿಗಳು ಚೀಲವನ್ನು ಬಿಡಿಸಿದಾಗ ಅದರಲ್ಲಿ ಹಣ ಇರುವುದು ಗಮನಕ್ಕೆ ಬಂದಿದೆ. ದೇವಸ್ಥಾನದ ಕಳವಿನ ಮಾಹಿತಿ ಇದ್ದ ಮುಖ್ಯಶಿಕ್ಷಕರು, ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಆಡಳಿತ ಮಂಡಳಿಯವರು ಕುಂದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಕುಂದಾಪುರ ಅಪರಾಧ ವಿಭಾಗದ ಪಿಎಸ್ಐ ಪುಷ್ಪಾ ಹಾಗೂ ಸಿಬ್ಬಂದಿ ಹಣವನ್ನು ವಶಕ್ಕೆ ಪಡೆದುಕೊಂಡುಕೊಂಡು ತನಿಖೆ ಮುಂದುವರಿಸಿದ್ದಾರೆ.ಚೀಲದಲ್ಲಿ ಬಹುತೇಕ 10 ರು. ಮೌಲ್ಯದ ನೋಟುಗಳಿದ್ದು, ಹುಂಡಿಯಲ್ಲಿ ಒಟ್ಟಾದ ಕಾಣಿಕೆ ಹಣದಲ್ಲಿ ದೊಡ್ಡ ನೋಟುಗಳನ್ನು ತುಂಬಿಸಿಕೊಂಡ ಕಳ್ಳ ಚಿಲ್ಲರೆ ನೋಟುಗಳನ್ನು ಬಿಟ್ಟು ಹೋಗಿರುವ ಶಂಕೆ ಇದೆ.