ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಹೆಮ್ಮನಹಳ್ಳಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಮಾ.20 ರಿಂದ 21ವರೆಗೆ ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಮಾ.20 ರಂದು ಮಧ್ಯಾಹ್ನ 12 ಗಂಟೆಗೆ ಚೌಡೇಶ್ವರಿ ಅಮ್ಮನವರ ದೇಗುಲದ ಅಮೃತ ಮಣ್ಣಿನ ದ್ವಾರವನ್ನು ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ತೆರೆಯಲಾಗುವುದು. ಕಳೆದ ವರ್ಷ ಅಮ್ಮನವರ ಗುಡಿಯಲ್ಲಿ ಹಚ್ಚಲಾಗಿದ್ದ ನಂದಾದೀಪ, ದೇವಿಯ ದರ್ಶನ ಭಾಗ್ಯವು ಭಕ್ತಾದಿಗಳಿಗೆ ಸಿಗಲಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ದೂರದೂರುಗಳಿಂದ ಬರುವ ಸಹಸ್ರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಅಮ್ಮನವರ ಬಂಡಿ ಉತ್ಸವ, ರಾತ್ರಿ 12 ಗಂಟೆಗೆ ಅಮ್ಮನವರ ಕರಗ ಉತ್ಸವ, ರಾತ್ರಿ 12.30 ಕ್ಕೆ ಸರಿಯಾಗಿ ಕೊಂಡಕ್ಕೆ ಅಗ್ನಿ ಸ್ಪರ್ಶ ನೆರವೇರಲಿದೆ.ಮಾ.21ರ ಬೆಳಗಿನ ಜಾವ 4 ಗಂಟೆಗೆ ಅಮ್ಮನವರ ಉತ್ಸವದೊಂದಿಗೆ ಕೊಂಡೋತ್ಸವ, ಮಧ್ಯಾಹ್ನ 12 ಗಂಟೆಗೆ ವೇಳೆಗೆ ಮಹಾ ರಥೋತ್ಸವ, ರಾತ್ರಿ 12 ಗಂಟೆಗೆ ಪುನಃ ಅಮ್ಮನವರ ಗರ್ಭಗುಡಿ ದ್ವಾರವನ್ನು ಅಮೃತ ಮಣ್ಣಿನಿಂದ ಮುಚ್ಚುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಅಂತಿಮ ತೆರೆ ಬೀಳಲಿದೆ.
ವರ್ಷದಲ್ಲಿ ಕೇವಲ 36 ಗಂಟೆಗಳ ಕಾಲ ದರ್ಶನ ನೀಡುವ ಪುರಾಣ ಪ್ರಸಿದ್ಧ ಶ್ರೀ ಚೌಡೇಶ್ವರಿ ಅಮ್ಮನ ದೇವಸ್ಥಾನ ಹಲವು ವೈಶಿಷ್ಟ್ಯಗಳನ್ನು ಹೊಂದಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ. ಕೇವಲ 36 ಗಂಟೆಗಳು ಮಾತ್ರ ದೇವಿಯ ದರ್ಶನ ಸಿಗುವುದರಿಂದ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. 2 ದಿನಗಳ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀ ಚೌಡೇಶ್ವರಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ.ದೇವಿ ದರ್ಶನದಿಂದ ಕಷ್ಟಗಳು ನಿವಾರಣೆ:
ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರೆ ಅಂದುಕೊಂಡಂತೆ ಎಲ್ಲವೂ ನೆರವೇರುತ್ತದೆ. ಭಯ, ರೋಗ, ರುಜೀನಗಳು, ಸಕಲ ಕಷ್ಟ- ಕಾರ್ಪಣ್ಯಗಳನ್ನು ನಿವಾರಿಸುತ್ತದೆ ಎಂಬುದು ಭಕ್ತರ ನಂಬಿಕೆ. ಅದಕ್ಕಾಗಿ ಭಕ್ತರು ಹರಕೆ ಹಾಗೂ ಕಾಣಿಕೆಗಳನ್ನು ನೀಡುವುದು ಪ್ರತೀತಿಯಾಗಿದೆ.ಈ ತಾಯಿಯ ಇಚ್ಛೆಯಂತೆ ದೇಗುಲದ ಗರ್ಭಗುಡಿಯಲ್ಲಿ ಸದಾಕಾಲವೂ ಬೆಳೆಗುತ್ತಿರುವ ನಂದಾದೀಪವಿರಬೇಕು. ಆ ನಂದಾದೀಪವು ಇಡೀ ವರ್ಷ ಗರ್ಭಗುಡಿಯಲ್ಲೇ ಬೆಳೆಗುತ್ತಿದ್ದು, ದೇವಿ ದರ್ಶನದ ಸಮಯದಲ್ಲಿ ಬೆಳಗುತ್ತಿರುವ ನಂದಾ ದೀಪದ ಕಿರಣಗಳು ಬಿದ್ದಾಗ ಅದರಿಂದ ಅವರ ಕಷ್ಟ, ನೋವು, ದುಃಖ, ದುಮ್ಮಾನಗಳು ದೂರಾಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಹೊಯ್ಸಳ ಕಾಲದ ಅಮ್ಮನವರ ದೇಗುಲ ಜೀರ್ಣೋದ್ಧಾರಗೊಂಡಿದ್ದು ಸಪ್ತ ಮಾತೃಕೆಯರನ್ನು, ಅಷ್ಟ ಲಕ್ಷ್ಮೀಯರ ವಿಗ್ರಹಗಳನ್ನು ಸುಂದರವಾಗಿ ಕೆತ್ತಲಾಗಿದೆ, ದೇಗುಲದ ವಿಮಾನ ಗೋಪುರ ಹಾಗೂ ರಾಜಗೋಪುರವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ.ತನ್ನದೆಯಾದ ಪವಾಡ ಹಾಗೂ ಮಹಿಮೆಗಳ ಮೂಲಕ ಇಡೀ ರಾಜ್ಯದ ಭಕ್ತರ ಪಾಲಿನ ಶಕ್ತಿದೇವಿಯಾಗಿರುವ ಚೌಡೇಶ್ವರಿ ದೇವಿ ಇಚ್ಛಿಸಿದ್ದನ್ನು ಕರುಣಿಸುವ ಮಹಾಮಹಿಮೆ ಎಂಬುದು ಜನರ ಮನಸ್ಸಿನಲ್ಲಿ ನೆಲೆಯಾಗಿರುವುದು ವಿಶೇಷವಾಗಿದೆ.