ಹಿಮೋಫಿಲಿಯಾ ತಾತ್ಕಾಲಿಕ ಶಮನವಾಗವಲ್ಲ ವ್ಯಾಧಿ

| Published : Dec 18 2024, 12:45 AM IST

ಸಾರಾಂಶ

ಹಿಮೋಫಿಲಿಯಾ (ಕುಸುಮ ರೋಗ), ರಕ್ತ ಹೆಪ್ಪುಗಟ್ಟುವ ಪ್ರೋಟೀನುಗಳ ಕೊರತೆಯಿಂದ ಉಂಟಾಗುವ ರಕ್ತಸ್ರಾವ ರೋಗ. ಯಾವುದಾದರೊಂದು ರಕ್ತನಾಳವು ಘಾಸಿಗೊಂಡಾಗ, ಆ ಜಾಗದಿಂದ ರಕ್ತವು ಚಿಮ್ಮಿ ಹೊರಬರುತ್ತದೆ. ಒಮ್ಮೊಮ್ಮೆ ಹೊರಬಾರದೇ ದೇಹದೊಳಗೇ ಶೇಖರಗೊಂಡು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಹಿಮೋಫಿಲಿಯಾ ತಜ್ಞ ಡಾ.ಸುರೇಶ ಹನಗವಾಡಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಅಂತರ ರಾಷ್ಟ್ರೀಯ ಪಾರ್ಶ್ವವಾಯು ದಿನ ಪ್ರಯುಕ್ತ ಕಾರ್ಯಾಗಾರದಲ್ಲಿ ಡಾ.ಸುರೇಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಡಿ. 17, ಹಿಮೋಫಿಲಿಯಾ (ಕುಸುಮ ರೋಗ), ರಕ್ತ ಹೆಪ್ಪುಗಟ್ಟುವ ಪ್ರೋಟೀನುಗಳ ಕೊರತೆಯಿಂದ ಉಂಟಾಗುವ ರಕ್ತಸ್ರಾವ ರೋಗ. ಯಾವುದಾದರೊಂದು ರಕ್ತನಾಳವು ಘಾಸಿಗೊಂಡಾಗ, ಆ ಜಾಗದಿಂದ ರಕ್ತವು ಚಿಮ್ಮಿ ಹೊರಬರುತ್ತದೆ. ಒಮ್ಮೊಮ್ಮೆ ಹೊರಬಾರದೇ ದೇಹದೊಳಗೇ ಶೇಖರಗೊಂಡು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಹಿಮೋಫಿಲಿಯಾ ತಜ್ಞ ಡಾ.ಸುರೇಶ ಹನಗವಾಡಿ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಇತ್ತೀಚೆಗೆ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಅಂತರ ರಾಷ್ಟ್ರೀಯ ಪಾರ್ಶ್ವವಾಯು ದಿನದ ಅಂಗವಾಗಿ ಆಯೋಜಿಸಿದ್ದ ಮಕ್ಕಳಲ್ಲಿ ಕಾಡುವ ಕುಸುಮ ರೋಗ- ಗಾಭರಿ ಬೇಡ, ಜವಾಬ್ಧಾರಿಯಿರಲಿ ಎಂಬ ಆರೋಗ್ಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹಿಮೋಫಿಲಿಯಾ ಗುಣಪಡಿಸಲಾಗದ, ಆದರೆ ತಾತ್ಕಾಲಿಕವಾಗಿ ಶಮನಗೊಳಿಸಬಹುದಾದ ವ್ಯಾಧಿ. ಪದೇಪದೇ ಕೀಲುಗಳಲ್ಲಿ ಆಗುವ ರಕ್ತಸ್ರಾವ ನಿಯಂತ್ರಿಸಲು ನಿಯಮಿತ ಭೌತಿಕ ಚಿಕಿತ್ಸೆ ಅತ್ಯಗತ್ಯ. ಮನೋಸಾಮಾಜಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಮನೋಸ್ಥೈರ್ಯ ತುಂಬುವ ಆಪ್ತ ಸಮಾಲೋಚನೆ ಅವಶ್ಯಕವಿರುತ್ತದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಗಂಡುಮಕ್ಕಳು ಈ ರೋಗದಿಂದ ಬಳಲುತ್ತಾರೆ. ಆದರೆ, ಹೆಣ್ಣುಮಕ್ಕಳು ಬಳಲದಿದ್ದರೂ, ತಮ್ಮ ಗಂಡು ಮಕ್ಕಳಿಗೆ ಪ್ರಸರಿಸುವ ವಾಹಕಿಯರಾಗುತ್ತಾರೆ. ಹಿಮೋಫಿಲಿಯಾ ಪೀಡಿತರಲ್ಲಿ ರಕ್ತಸ್ರಾವ ನಿಲ್ಲುವುದಿಲ್ಲ. ಏಕೆಂದರೆ, ಸಾಮಾನ್ಯವಾಗಿ ಗಾಯಗೊಂಡಾಗ, ರಕ್ತಸ್ರಾವ ನಿಲ್ಲುವುದು, ಮೊದಲು ರಕ್ತನಾಳವು ಸಂಕುಚಿತಗೊಳ್ಳುವುದು, ಪ್ಲೆಟ್‌ಲೆಟ್ ಕಣಗಳ ಬಂಡೆ ನಿರ್ಮಾಣ, ರಕ್ತ ಹೆಪ್ಪುಗಟ್ಟುವಿಕೆ (ಫೈಬ್ರಿನ್‌ನ ಉತ್ಪತ್ತಿ) ಕ್ರಿಯೆಗಳು ಕೇವಲ ಐದಾರು ನಿಮಿಷಗಳಲ್ಲಿ ನಡೆದು ಗಾಯದಿಂದ ಒಸರುವ ರಕ್ತಸ್ರಾವ ನಿಲ್ಲುತ್ತದೆ ಎಂದರು.

ಆದರೆ ಹಿಮೋಫಿಲಿಯಾ ಪೀಡಿತರಲ್ಲಿ ರಕ್ತನಾಳಗಳು ಮತ್ತು ಪ್ಲೆಟ್‌ಲೆಟ್ ಬಂಡೆಯ ನಿರ್ಮಾಣ ಸಹಜವಾಗಿ ನಡೆಯುತ್ತದೆ. ಆದರೆ ಬಂಡೆಯನ್ನು ಹೆಬ್ಬಂಡೆಯನ್ನಾಗಿಸುವ ಕ್ರಿಯೆ ನಡೆಯುವುದಿಲ್ಲ. ಕಾರಣ ಫೈಬ್ರಿನ್ ಉತ್ಪತ್ತಿಗೆ ಅವಶ್ಯಕವಾಗಿರುವ 13 ಪ್ರೊಟೀನುಗಳಲ್ಲಿ ಯಾವುದಾದರು ಒಂದು ಪ್ರೊಟೀನು ಕೊರತೆ ಆಗಿರುತ್ತದೆ. ಸಾಮಾನ್ಯವಾಗಿ 8ನೇ ಪ್ರೊಟೀನಿನ ಕೊರತೆಯುಂಟಾಗಿ ಕ್ಲಾಸಿಕಲ್ ಹಿಮೋಫಿಲಿಯಾ (ಹಿಮೋಫಿಲಿಯಾ-ಎ) ಎಂದೂ ಅಥವಾ 9ನೇ ಪ್ರೊಟೀನಿನ ಕೊರತೆಯುಂಟಾಗಿ ಹಿಮೋಫಿಲಿಯಾ-ಬಿ ರೋಗ ಎಂದು ಗುರುತಿಸಲಾಗುವುದು ಎಂದು ತಿಳಿಸಿದರು.

ಹುಟ್ಟಿನಿಂದಲೇ ಬರುವ ಈ ರೋಗವು, ಮಗುವಿನ ಮೈಮೇಲಾಗುವ ಕಂದುಮಿಶ್ರಿತ ಕಲೆಗಳು ಅಥವಾ ಗಾಯಗೊಂಡಾಗ ನಿಲ್ಲದಿರುವ ರಕ್ತಸ್ರಾವ ಅಥವಾ ಕೀಲು ಸ್ನಾಯುಗಳ ಊತ ಕಂಡು ತಾಯಂದಿರು ಗಾಬರಿಗೊಂಡು ವೈದ್ಯರ ಬಳಿ ಬರುತ್ತಾರೆ. ವೈದ್ಯರು ರೋಗಿಯನ್ನು ಕೆಲವು ರಕ್ತ ಪರೀಕ್ಷೆಗಳಿಗೆ ಒಳಪಡಿಸಿ, ಯಾವ ರಕ್ತಹೆಪ್ಪುಗಟ್ಟುವ ಪ್ರೋಟಿನ್‌ ಕೊರತೆ ಮತ್ತು ಪ್ರಮಾಣದ ಹಿಮೋಫಿಲಿಯಾ ಎಂದು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಗೆ ಒಳಪಡಿಸುತ್ತಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆ ನಿರ್ದೇಶಕ ಡಾ.ಗುರುಪ್ರಸಾದ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಮೂಗನಗೌಡ ಪಾಟೀಲ್, ಡಾ.ಕೌಜಲಗಿ, ಡಾ.ಮೃತ್ಯುಂಜಯ, ಡಾ.ರಮೇಶ್, ಡಾ.ರೇವಪ್ಪ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ರೊಳ್ಳಿ ಮಂಜುನಾಥ, ನರ್ಸಿಂಗ್ ವಿದ್ಯಾರ್ಥಿಗಳು, ಪೋಷಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.

- - -

ಕೋಟ್‌

ಹಿಮೋಫಿಲಿಯಾ ರಕ್ತ ಹೆಪ್ಪುಗಟ್ಟುವ ಕ್ರಿಯೆಯಲ್ಲಾಗುವ ನ್ಯೂನತೆಗಳಿಂದ ಆಗುವುದರಿಂದ, ಕೊರತೆಯಿರುವ ಅಂಶವನ್ನು ಆ ರೋಗಿಯ ರಕ್ತದಲ್ಲಿ ಸೇರಿಸಿ, ತಾತ್ಕಾಲಿಕವಾಗಿ ರಕ್ತ ಹೆಪ್ಪುಗಟ್ಟಿಸಿ ರಕ್ತಸ್ರಾವ ನಿಲ್ಲಿಸುವುದು ಅತ್ಯಂತ ಸೂಕ್ತ ಚಿಕಿತ್ಸೆ

- ಡಾ.ಸುರೇಶ ಹನಗವಾಡಿ, ಹಿಮೋಫಿಲಿಯಾ ತಜ್ಞ, ಜೆಜೆಎಂ ವೈದ್ಯಕೀಯ ಕಾಲೇಜು

- - - -17ಕೆಡಿವಿಜಿ38: ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆರೋಗ್ಯ ಕಾರ್ಯಾಗಾರ ನಡೆಯಿತು.

-17ಕೆಡಿವಿಜಿ39: ಆರೋಗ್ಯ ಕಾರ್ಯಾಗಾರದಲ್ಲಿ ಡಾ.ಸುರೇಶ ಹನಗವಾಡಿ ಮಾತನಾಡಿದರು.