ಕಾಂಗ್ರೆಸ್‌ ಅಂದ್ರೆ ವಂಶಪಾರಂಪರ್‍ಯ ಪಕ್ಷ: ಆರ್‌. ಅಶೋಕ

| Published : Mar 25 2024, 12:48 AM IST

ಸಾರಾಂಶ

ಕಾಂಗ್ರೆಸ್‌ ಅಂದ್ರೆ ಅಳಿಯ, ಮಕ್ಕಳು, ಕೋ ಬ್ರದರ್‌, ಸೋಸೆಯಂದಿರ ಪಕ್ಷ ಎಂದೇ ಹಿಂದಿನಿಂದಲೂ ಖ್ಯಾತಿ ಪಡೆದಿದೆ. ಈ ಬಾರಿ ಎಐಸಿಸಿ ಅಧ್ಯಕ್ಷ ಡಾ. ಖರ್ಗೆಯವರು ಅಳಿಯ, ಮಕ್ಕಳು, ಕೋ-ಬ್ರದರ್, ಸೊಸೆ ಇವರನ್ನೇ ಹುಡುಕಿ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿ ತಮ್ಮದು ವಂಶಪಾರಂಪರ್ಯ ಪಕ್ಷವೆಂಬುದನ್ನು ಸಾಬೀತು ಮಾಡಿದ್ದಾರೆಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಾಂಗ್ರೆಸ್‌ ಅಂದ್ರೆ ಅಳಿಯ, ಮಕ್ಕಳು, ಕೋ ಬ್ರದರ್‌, ಸೋಸೆಯಂದಿರ ಪಕ್ಷ ಎಂದೇ ಹಿಂದಿನಿಂದಲೂ ಖ್ಯಾತಿ ಪಡೆದಿದೆ. ಈ ಬಾರಿ ಎಐಸಿಸಿ ಅಧ್ಯಕ್ಷ ಡಾ. ಖರ್ಗೆಯವರು ಅಳಿಯ, ಮಕ್ಕಳು, ಕೋ-ಬ್ರದರ್, ಸೊಸೆ ಇವರನ್ನೇ ಹುಡುಕಿ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿ ತಮ್ಮದು ವಂಶಪಾರಂಪರ್ಯ ಪಕ್ಷವೆಂಬುದನ್ನು ಸಾಬೀತು ಮಾಡಿದ್ದಾರೆಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟಕ್ಕೂ ಕಾಂಗ್ರೆಸ್ ಅಂದರೆ ವಂಶ ಪಂರಪರೆಯ ಪಕ್ಷ ತಾನೆ, ಖರ್ಗೆಯವರ ಕಾಲದಲ್ಲಿಯೂ ಇದು ಸಾಬೀತು ಆಗಿಹೋಯ್ತು ಎಂದರು.

ಮೊದ್ಲು ಕಾಂಗ್ರೆಸ್‌ ಮನೆ ಹಾಳಾಗಲಿ: ಬಿಜೆಪಿಯವರ ಮನೆ ಹಾಳಾಗಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಿರುವ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‍ನವರ ಮನೆ ಮೊದಲು ಹಾಳಾಗಬೇಕು ಎಂದರು.

ಭಯೋತ್ಪಾದಕ ದಾಳಿ ಶುರುವಾಗಿದ್ದೇ ಕಾಂಗ್ರೆಸ್ ಪಕ್ಷದ ಮನೆ ಹಾಳರಿಂದ ಅನ್ನೋದು ಎಲ್ಲರಿಗೂ ಗೊತ್ತಿದೆ. ಜಮ್ಮು ಕಾಶ್ಮೀರದಲ್ಲಿ ಗ್ರಾನೈಟ್, ಮದ್ದು, ಗುಂಡು ತಂದಿದ್ದು ಇವರೇ ತಾನೇ ಎಂದು ಪ್ರಶ್ನಿಸಿದ ಅವರು, ಈಗ ಆ ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋದು ಕೂಡ ದೇಶದ ಜನರಿಗೆ ಗೊತ್ತಿದೆ ಎಂದು ನುಡಿದರು.

ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದವರು ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಕರೆ ತಂದು ಪಾಕ್ ಪರ ಘೋಷಣೆ ಕೂಗಿಸಿದರು. ಇಷ್ಟೆಲ್ಲಾ ಪುರಾವೆಗಳು ಕಣ್ಣೆದುರು ಇರುವಾಗ ದೇಶದ ಮನೆ ಹಾಳು ಮಾಡಿದವರು ಕಾಂಗ್ರೆಸ್‍ನವರು ಅನ್ನೋದನ್ನು ಮತ್ತೊಮ್ಮೆ ಬಿಡಿಸಿ ಹೇಳಬೇಕಾ ಎಂದು ಮರು ಪ್ರಶ್ನೆ ಹಾಕಿದರು.

ಸೋನಿಯಾಗೆ ಬೈದಿದ್ದು ಸಿದ್ದುಗೆ ನೆನಪಿದೆಯಾ: ಈ ಹಿಂದೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಸರ್ವೋತ್ಕೃಷ್ಟ ನಾಯಕಿ ಸೋನಿಯಾ ಗಾಂಧಿ ಅವರನ್ನು ಬಾಯಿಗೆ ಬಂದಂತೆ ಬೈದಿದ್ದನ್ನು ಮರೆತಂತೆ ಕಾಣುತ್ತದೆ. ಅವರು ಸೋನಿಯಾಗಾಂಧಿ ವಿರುದ್ಧ ಎಷ್ಟೆಲ್ಲಾ ಕೆಟ್ಟ ಪದಗಳನ್ನು ಬಳಸಿದ್ದಾರೆ ಅನ್ನೋದಕ್ಕೆ ಈಗಲೂ ರೆಕಾರ್ಡ್ ಇದೆ. ಸಿದ್ದರಾಮಯ್ಯ ಅವರು ಎಂದಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರಾ? ಅವರೇನಿದ್ದರೂ ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡಿದ್ದಾರೆ ಎಂದು ಟೀಕಿಸಿದರು.

ಇನ್ನೊಂದೆಡೆ, ಗೃಹ ಸಚಿವ ಜಿ.ಪರಮೇಶ್ವರ ಅವರು ತಾವು ಯಾವಾಗ ಮುಖ್ಯಮಂತ್ರಿ ಆಗಬಹುದೋ ಎಂದು ಪರಮಾತ್ಮನ ಕಡೆಗೆ ನೋಡುತ್ತಿದ್ದಾರೆ. ಹಾಗೆ ನೋಡಿದರೆ ಪರಮೇಶ್ವರ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ದುರಂತವೆಂದರೆ, ಯಾರೋ ಕಟ್ಟಿರುವ ಹುತ್ತದಲ್ಲಿ ಸಿದ್ದರಾಮಯ್ಯ ಸೇರಿಕೊಂದ್ದಾರೆ ಎಂದರು.

ಸಿದ್ದರಾಮಯ್ಯ ಅದ್ಯಾವ ಸ್ವಾತಂತ್ರ್ಯ ಹೋರಾಟದಲ್ಲಿದ್ದರು: ಹಾಗೆ ನೋಡಿದರೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರ ಬಳಿ ಯಾವುದೇ ನೈತಿಕತೆ ಇಲ್ಲ. ಇನ್ನು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತಾಡುವ ಯಾವ ನೈತಿಕತೆಯೂ ಅವರಿಗಿಲ್ಲ. ‘ಸ್ವಾತಂತ್ರ್ಯ ಚಳವಳಿಯಲ್ಲಿ ನೀವೇನಾದ್ರೂ ಭಾಗವಹಿಸಿದ್ದೀರಾ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಈ ಮೊದಲು ಇದ್ದದ್ದು ಹಸು, ಕರು ಚಿಹ್ನೆಯ ಕಾಂಗ್ರೆಸ್ ಪಕ್ಷ. ಈಗ ಕಾಂಗ್ರೆಸ್‍ನವರು ಹಸು-ಕರು ಎರಡನ್ನೂ ಕಸಾಯಿಖಾನೆಗೆ ಹೊಡೆದಿದ್ದಾರೆ. ಆರ್‌ಎಸ್‍ಎಸ್‍ನವರು ಭಾರತ ಮಾತೆಯ ಮಕ್ಕಳು ಎಂದಿರುವ ಸಿದ್ದರಾಮಯ್ಯ ಕಾಂಗ್ರೆಸ್‍ನವರು ಭ್ರಷ್ಟಾಚಾರಿಗಳ ಮಕ್ಕಳು ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ತಮ್ಮಂತಹ ಸತ್ಯವಂತ ಯಾರೂ ಇಲ್ಲ ಎಂದು ಕೇಜ್ರಿವಾಲ್ ಬೀಗುತ್ತಿದ್ದರು. ಈಗ ಸುಮಾರು 600 ಕೋಟಿ ರು. ಅಬಕಾರಿ ಹಗರಣದಲ್ಲಿ ಒಳಗೆ ಹೋಗಿದ್ದಾರೆ. ಒಂದುವೇಳೆ, ಅವರು ತಪ್ಪು ಮಾಡಿಲ್ಲ ಎನ್ನುವುದಾದರೆ ಮೊದಲ ನೋಟಿಸ್‍ಗೇ ಉತ್ತರ ಕೊಡಬಹುದಿತ್ತಲ್ಲ ಎಂದರು.

ಬೀದರ್ ಬಿಜೆಪಿ ವಿದ್ಯಮಾನಗಳ ಕುರಿತು ಮಾತನಾಡಿದ ಅವರು, ಬೀದರ್ ಬಿಜೆಪಿ ಅಭ್ಯರ್ಥಿ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಹಾಗಾಗಿ ಕಳೆದ ವಾರವೇ ಬೀದರ್‌ಗೆ ಬಂದು ಜಿಲ್ಲೆಯ ಶಾಸಕರು ಪದಾಧಿಕಾರಿಗಳ ಜೊತೆ ಒನ್ ಟೂ ಒನ್ ಮಾತುಕತೆ ನಡೆಸುವ ಭರವಸೆ ನೀಡಿದ್ದೆ. ಈಗ ಎಲ್ಲದಕ್ಕೂ ಪರಿಹಾರ ಸಿಕ್ಕಿದೆ. ಬೀದರ್ ಹಾಗೂ ಕಲಬುರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲ್ಲಬೇಕು ಎಂದರು.

ಡಾ.ಮಂಜುನಾಥ ಗೆಲುವು 1000 ಪರ್ಸೆಂಟ್ ಗ್ಯಾರಂಟಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.ಸಿ.ಎನ್ ಮಂಜುನಾಥ ಅವರು ಗೆಲವು ಸಾವಿರ ಪರ್ಸೆಂಟ್ ಗ್ಯಾರಂಟಿಯಾಗಿದ್ದು, ಅವರು ಸುಮಾರು ಒಂದುವರೆ ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಮಾಜಿ ಡಿಸಿಎಂ ಅಶೋಕ್ ಭವಿಷ್ಯ ನುಡಿದರು.