ಸಾರಾಂಶ
ತಮ್ಮ ಸ್ವಂತ ಪರಿಶ್ರಮದಿಂದ ಗಳಿಸಿದ ಹಣದಲ್ಲಿ ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರಕ್ಕೆ ತಾಯಿಯ ಹೆಸರಿನಲ್ಲಿ ಬಡರೋಗಿಗಳ ಅನುಕೂಲಕ್ಕಾಗಿ 10 ಉಚಿತ ಆ್ಯಂಬುಲೆನ್ಸ್ ಕೊಡುಗೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ : ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಅಸ್ಪತ್ರೆಗೆ ರೋಗಿಗಳ ಸಾಗಿಸಲು ತಮ್ಮ ತಾಯಿಯ ಹೆಸರಿನಲ್ಲಿ ತಾಯಿ ಹೆಸರಲ್ಲಿ ಒಟ್ಟು ಹತ್ತು ‘ಅಮ್ಮಾ ’ ಆ್ಯಂಬುಲೆನ್ಸ್ ಉಚಿತ ಸೇವೆಗೆ ಕೊಡುಗೆ ನೀಡಿದ್ದಾರೆ. ಇದರಲ್ಲಿ 48 ಲಕ್ಷ ರು.ಗಳ ವೆಚ್ಚದ ಹವಾನಿಯಂತ್ರಿತ ಹಾಗು ವೆಂಟಿಲೇಟರ್ ಸಮೇತ ಹೈಟೆಕ್ ಆ್ಯಂಬುಲೆನ್ಸ್ ಸಹ ಸೇರಿದೆ.
ಈ ಕುರಿತು ಪತ್ರಿಕೆಯೊಂದಿಗೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ತಾವು ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಮೇಲೆ, ಕ್ಷೇತ್ರದಲ್ಲಿ ಶಾಲೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದೇನೆ. ತಮ್ಮ ಸ್ವಂತ ಪರಿಶ್ರಮದಿಂದ ಗಳಿಸಿದ ಹಣದಲ್ಲಿ ಕ್ಷೇತ್ರಕ್ಕೆ 5 ಉಚಿತ ಅಂಬುಲೆನ್ಸ್ ಗಳ ಸೇವೆಯನ್ನು 2023 ಸೆಪ್ಟೆಂಬರ್ 12 ರಂದು ನಂದಿಯ ಭೋಗ ನಂದೀಶ್ವರ ದೇಗುಲದಲ್ಲಿ ಲೋಕಾರ್ಪಣೆ ಮಾಡಿದ್ದಾಗಿ ಹೇಳಿದರು.
ಬಡ ರೋಗಿಗಳಿಗೆ ಅನೂಕೂಲ
ನಂತರ ಜನತೆಗೆ ಅವಶ್ಯಕತೆ ಇದೆ ಎಂದು ಅರಿತು ಮತ್ತೆ ಐದು ಆ್ಯಂಬುಲೆನ್ಸ್ ನೀಡಿದೆ. ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆಯದೆ ನನ್ನ ಕಣ್ಣ ಮುಂದೆ ನನ್ನ ತಂದೆ ಈಶ್ವರಯ್ಯ ಮತ್ತು ತಾಯಿ ಮಂಜುಳಾ ರವರು ಒಟ್ಟಿಗೆ ಮರಣ ಹೊಂದಿದ್ದರು. ನನ್ನಂತೆ ಯಾರೂ ಕೂಡ ಅನಾಥರಾಗಬಾರದು. ಅನಾಥ ಮಕ್ಕಳಿಗೆ ಮಾತ್ರ ಅನಾಥರ ಕಷ್ಟ ಅರ್ಥವಾಗಲು ಸಾಧ್ಯ. ಬಡವರು ಹೆಚ್ಚಿರುವ ಪ್ರದೇಶದಲ್ಲಿಯೇ ಅವರಿಗೆ ಅನುಕೂಲವಾಗಲಿ ಎಂದು ಆ್ಯಂಬುಲೆನ್ಸ್ ಸೇವೆ ಒದಗಿಸುತ್ತಿದ್ದೇನೆ ಎಂದರು.
ಅತ್ಯಾಧುನಿಕ ಸೌಭ್ಯವುಳ್ಳ 48 ಲಕ್ಷ ವೆಚ್ಚದ ಒಂದು ಆ್ಯಂಬುಲೆನ್ಸ್ ಸಹ ನೀಡಲಾಗಿದೆ. ಉಳಿದ ಒಂಭತ್ತು ಆ್ಯಂಬುಲೆನ್ಸ್‌ಗಳು ಹವಾ ನಿಯಂತ್ರಿತ ಹಾಗು ಡಬಲ್ ವೆಂಟಿಲೇಟರ್ ವ್ಯವಸ್ಥೆ ಮಾಡಿ ಉಚಿತ ಸೇವೆಗಾಗಿ ಕ್ಷೇತ್ರದ ಜನರಿಗೆ ಒದಗಿಸಿದ್ದೇನೆ. ನಾವು ಬೆಂಗಳೂರು ಸಿಟಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ನನ್ನ ಕ್ಷೇತ್ರದ ಬಡ ರೋಗಿಗಳು ಈ ಹೈಟೆಕ್ ಸೌಲಭ್ಯಗಳೊಂದಿಗೆ ಆಸ್ಪತ್ರೆಗೆ ತೆರಳಬಹುದು ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಎಸ್ಎಸ್ಎಲ್‌ಸಿ ಮಕ್ಕಳಿಗೆ ವಿಶೇಷ ಪರೀಕ್ಷೆಗಳನ್ನು ನಡೆಸಿ ಅವರಲ್ಲಿನ ಕಲಿಕಾಸಕ್ತಿ ಹೆಚ್ಚಿಸಲು ನನ್ನ ಕೈಲಾದ ಮಟ್ಟಿಗೆ ಕಾರ್ಯಾರಂಭಿಸಿದ್ದೇನೆ. ಅದೇ ರೀತಿ ನನ್ನ ವಿಧಾಣಸಭಾ ಕ್ಷೇತ್ರದ ವಿದ್ಯಾರ್ಥಿಗಳೂ ಡಾಕ್ಟರ್ ಮತ್ತು ಎಂಜಿನಿಯರುಗಳಾಗಬೇಕು ಎಂದು ಕನಸು ಕಂಡಿದ್ದು, ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ಮತ್ತು ಸಿಇಟಿ ತರಗತಿಗಳನ್ನು ನಡೆಸುತ್ತಿರುವುದಾಗಿ ವಿವರಿಸಿದರು.