ಸಾರಾಂಶ
ರಾಮನಗರ: ಕನಕಪುರ ತಾಲೂಕು ಹೊಂಗಾಣಿದೊಡ್ಡಿ ಗ್ರಾಮದ ಭೂ ಮಾಲೀಕರು ಹಾಗೂ ಗೇಣಿದಾರ ರೈತರ ಒಪ್ಪಿಗೆ ಮೇರೆಗೆಯೇ ಕಾನೂನು ಪ್ರಕಾರ ನಾನು ಭೂಮಿ ಖರೀದಿಸಿದ್ದೇನೆ. ಆ ಭೂಮಿಯ ಹಕ್ಕು ಪತ್ರವನ್ನು ಮುಂದೆ ರೈತರಿಗೆ ಕೊಡಿಸುತ್ತೇನೆ. ಇದನ್ನು ಸಹಿಸದ ರೋಲ್ ಕಾಲ್ ಗಿರಾಕಿಗಳು ಸತ್ಯಾಂಶ ಮರೆಮಾಚಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಕಟುವಾಗಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಭೂಮಿ ಖರೀದಿ ಮಾಡಿರುವ ಸರ್ವೆ ನಂಬರ್ 265ನಲ್ಲಿ ಗ್ರಾಮ ಇದೆ. ಅಲ್ಲಿ ಯಾರಿಗೂ ಹಕ್ಕು ಪತ್ರ ಆಗಿಲ್ಲ. ಹಾಗಾಗಿ ನನ್ನ ಹೆಸರಿಗೆ ನೋಂದಣಿ ಮಾಡಿಸಿ ನಂತರ ಅವರಿಗೆ ಹಕ್ಕು ಪತ್ರ ಮಾಡಿಕೊಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಈ ವಿಚಾರ ತಿಳಿದ ಕೆಲ ರೋಲ್ ಕಾಲ್ ಗಿರಾಕಿಗಳು ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟುಕೊಂಡು ಬಂದಿದ್ದರು. ಹಣ ಕೊಡಲು ನಿರಾಕರಿಸಿದ್ದಕ್ಕೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.ಆ ಭೂಮಿ ಅಚ್ಚಲು ಸಾಹುಕಾರರಾದ ನವಾಬ್ ಜಾನ್ ಅವರಿಗೆ ಸೇರಿದ್ದು, ಅವರು ಸುಮಾರು 500 ಎಕರೆ ಜಮೀನುದಾರರು. 1987ರಲ್ಲಿ ರೈತರು ಜಮೀನಿಗಾಗಿ ಟೆನಂಟ್ ನಲ್ಲಿ ಅರ್ಜಿ ಹಾಕಿದಾಗ ಸರ್ಕಾರ 10 ಗುಂಟೆ, 1 ಎಕರೆ ಕಾನೂನು ಪ್ರಕಾರ ಗ್ರ್ಯಾಂಟ್ ಮಾಡಿತ್ತು. ಕೆಲ ರೈತರು ಹೆಚ್ಚಿನ ಭೂಮಿಯ ಅನುಭವದಲ್ಲಿದ್ದು, ಟೆನಂಟ್‌ನಲ್ಲಿ ಕಡಿಮೆ ಭೂಮಿ ಮಂಜೂರಾಗಿದೆ ಅಂತ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯ ಭೂ ನ್ಯಾಯ ಮಂಡಳಿಯಲ್ಲಿ ಎಷ್ಟು ಭೂಮಿ ಕೊಡಬೇಕೆಂದು ಆದೇಶವಾಗಿದೆಯೋ ಅದೇ ಅಂತಿಮವೆಂದು ಮೂರು ಬಾರಿ ಆದೇಶ ಹೊರಡಿಸಿತ್ತು. ಈ ಅವಧಿಯಲ್ಲಿ ಜಮೀನು ಮಾಲೀಕರು ಹಾಗೂ ಟೆನಂಟ್ ನಲ್ಲಿ ಅರ್ಜಿ ಹಾಕಿಕೊಂಡಿದ್ದ ರೈತರು ಸಾವನ್ನಪ್ಪಿದ್ದರು. ಆನಂತರವೂ ಜಮೀನು ಮಾಲೀಕರ ಕುಟುಂಬದವರು ಹಾಗೂ ಅರ್ಜಿ ಹಾಕಿದ್ದ ರೈತರ ಕುಟುಂಬದವರು ಮತ್ತೆ ಜಮೀನಿನ ಮೇಲೆ ಕೇಸು ಹಾಕಿಕೊಂಡ ಕಾರಣ ಆಗಿನಿಂದಲೂ ವ್ಯಾಜ್ಯ ನಡೆಯುತ್ತಲೇ ಬಂದಿದೆ ಎಂದರು.
ಕಾನೂನು ಪ್ರಕಾರವೇ ಭೂಮಿ ಖರೀದಿಸಿದ್ದೇನೆ:ನಾನು ಸ್ಥಳೀಯ ಹಾಗೂ ಸಮುದಾಯದ ನಾಯಕ ಎಂಬ ಕಾರಣಕ್ಕೆ ಮುಸ್ಲಿಂ ಬಾಂಧವರು ಈ ವ್ಯಾಜ್ಯ ಬಗೆಹರಿಸುವಂತೆ ಮನವಿ ಮಾಡಿಕೊಂಡರು. ಅದರಂತೆ ನಾನು ಗೇಣಿದಾರ ರೈತರನ್ನು ಕರೆದು ಚರ್ಚಿಸಿದಾಗ ಟೆನಂಟ್ ನಲ್ಲಿ ತಮಗೆ ಕಡಿಮೆ ಭೂಮಿ ಮಂಜೂರಾಗಿದೆ. ಎಸಿ, ಡಿಸಿ ಕೋರ್ಟಿನಲ್ಲೂ ನ್ಯಾಯ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಆಗ ಜಮೀನು ಮಾಲೀಕರು ಮತ್ತು ರೈತರನ್ನು ಕೂರಿಸಿ ಮುಖಾಮುಖಿ ಮಾತುಕತೆ ನಡೆಸಿದೆ. ಈ ವೇಳೆ ರೈತರಿಗೆ ಒಂದಷ್ಟು ಭೂಮಿ ಬಿಟ್ಟುಕೊಡುವಂತೆ ಮಾಲೀಕರ ಮನವೊಲಿಸಿದ್ದಾಗಿ ಹೇಳಿದರು.
ನಾನು ರೈತರು ಮತ್ತು ಭೂ ಮಾಲೀಕರ ಜೊತೆ ಮಾತನಾಡಿಯೇ ಕಾನೂನು ಪ್ರಕಾರ ಭೂಮಿ ಖರೀದಿಸಿದ್ದೇನೆ.ಇದಕ್ಕೆ 19 ಜನ ಗೇಣಿದಾರರು ಒಪ್ಪಿಗೆ ಕೊಟ್ಟಿದ್ದಾರೆ. ನನ್ನ ಹೆಸರಿಗೆ ಭೂಮಿ ನೋಂದಣಿ ಮಾಡಿಸಿದ ತರುವಾಯ ರೈತರಿಗೆ ಹಕ್ಕು ಪತ್ರ ಮಾಡಿಕೊಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ನಾನು ಗ್ರಾಮಸ್ಥರಿಗೆ ಬರಬೇಕಾಗಿರುವುದನ್ನು ದಾನ ಕೊಡುತ್ತೇನೆ. ಗೇಣಿಗಾರರ ಭೂಮಿಯನ್ನೇ ಖರೀದಿಸಿ ದಾನ ನೀಡುತ್ತೇನೆ ಎಂದು ಇಕ್ಬಾಲ್ ಹುಸೇನ್ ಸ್ಪಷ್ಟ ಪಡಿಸಿದರು.
1987ರಿಂದಲೂ ಗ್ರಾಮಸ್ಥರಿಗೆ ಸಿಗದಿರುವ ಹಕ್ಕು ಪತ್ರವನ್ನು ನಾನು ಕೊಡಿಸುತ್ತಿದ್ದೇನೆ. ಊರಿನ ಹಕ್ಕನ್ನು ರೈತರಿಗೆ ಕೊಡಿಸಬೇಕು, ಶಾಶ್ವತ ನೆಲೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ. ಈಗಾಗಲೇ ಗೇಣಿದಾರ ರೈತರಿಗೆ ಫಾರಂ 10 ಅನ್ನು ವಿತರಣೆ ಮಾಡಿಸಿದ್ದೇವೆ. ಜೊತೆಗೆ 10 ಗುಂಟೆ ಇರುವರಿಗೆ ಇನ್ನು 10 ಗುಂಟೆ ಸೇರಿಸಿ ಕಾನೂನು ಪ್ರಕಾರ ಕೊಟ್ಟಿದ್ದೇವೆ. ರೈತರಿಗೆ ಭೂಮಿ ಮೇಲೆ ಹಕ್ಕು ಬರುವ ರೀತಿ ಮಾಡಿದ್ದೇವೆ ಎಂದು ಹೇಳಿದರು.ಅನುಭೋಗದಲ್ಲಿ ಇರುವಷ್ಟು ಜಮೀನನ್ನು ನೀಡಬೇಕು ಎಂಬ ಗೇಣಿದಾರರು ಪಟ್ಟು ಹಿಡಿದಿದ್ದಾರಲ್ಲ ಎಂಬ ಪ್ರಶ್ನೆಗೆ ಇದು ಗೋಮಾಳದ ಭೂಮಿ ಅಲ್ಲ. ನ್ಯಾಯ ಮಂಡಳಿಯಲ್ಲಿ ಎಷ್ಟು ತೀರ್ಮಾನ ಆಗಿದೆಯೋ ಅಷ್ಟು ಭೂಮಿ ಕೊಡುತ್ತೇನೆ. ಎಲ್ಲವನ್ನೂ ಕೊಡಲು ಆಗಲ್ಲ. ಅವರು ಎಷ್ಟಾದರು ಅನುಭೋಗದಲ್ಲಿ ಇರಲಿ ಕಾನೂನಿನಲ್ಲಿ ಎಷ್ಟು ತೀರ್ಮಾನ ಆಗಿದೆಯೋ ಅಷ್ಟು ಭೂಮಿ ಕೊಡುತ್ತೇವೆ. ಇದು ಖಾಸಗಿ ಜಮೀನು, ಮೂರು - ನಾಲ್ಕು ಎಕರೆ ಕೊಡಿ ಅಂದರೆ ಯಾರು ಕೊಡುತ್ತಾರೆ. ಮೂಲ ವಾರಸುದಾರರಿಗೆ ಮಕ್ಕಳಿಲ್ಲವೇ ಎಂದು ಪ್ರಶ್ನಿಸಿದರು.
ನಾನೊಬ್ಬ ರೈತನ ಮಗನಾಗಿದ್ದು, ನನ್ನಲ್ಲಿ ನೂರಾರು ಎಕರೆ ಇದೆ. ಕಾನೂನು ರೀತಿ ರೈತರಿಗೆ ಭೂಮಿ ಮೇಲೆ ಹಕ್ಕು ಬರಲೆಂದು ಈ ರೀತಿ ಮಾಡಿದ್ದೇವೆ. ಈ ಸತ್ಯಾಂಶ ಮರೆಮಾಚಿ ರೋಲ್ ಕಾಲ್ ಗಿರಾಕಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಇಕ್ಬಾಲ್ ಹುಸೇನ್ ಬೇಸರ ವ್ಯಕ್ತಪಡಿಸಿದರು.