ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಚರಿತ್ರೆಯ ನಿಜಗಳನ್ನು ಹೇಳಿದರೆ ಸಮಾರಸ್ಯಕ್ಕೆ ತೊಂದರೆಯಾಗುತ್ತದೆ ಎಂದು ಈ ನಿಜಗಳನ್ನು ಮುಚ್ಚಿಡಲಾಗಿದೆ. ಚರಿತ್ರೆಯಲ್ಲಾಗಿರುವ ದೌರ್ಜನ್ಯ, ತಪ್ಪುಗಳಿಗೆ ಈಗ ನ್ಯಾಯ ದೊರಕಿಸುವುದು ಸಾಧ್ಯವಿಲ್ಲ ನಿಜ, ಆದರೆ ಅವುಗಳನ್ನು ನಿರಾಕರಿಸುವುದು ಚರಿತ್ರೆಗೆ ಮಾಡಿದ ಅವಮಾನ ಎಂದು ಖ್ಯಾತ ಇತಿಹಾಸಕಾರ ಡಾ. ವಿಕ್ರಮ್ ಸಂಪತ್ ಹೇಳಿದ್ದಾರೆ.ಅವರು ಗುರುವಾರ ನಗರದ ಪುರಭವನದಲ್ಲಿ ಡಾ. ಪಾದೂರು ಗುರುರಾಜ ಭಟ್ ಜನ್ಮ ಶತಾಬ್ಧಿ ಪ್ರಯುಕ್ತ ಡಾ.ಪಾದೂರು ಗುರುರಾಜ ಭಟ್ ಸಂಸ್ಮರಣಾ ಟ್ರಸ್ಟ್ ವತಿಯಿಂದ ಕರ್ನಾಟಕದ ಖ್ಯಾತ ಇತಿಹಾಸಕಾರರ ಸಮಾವೇಶದಲ್ಲಿ ಪಾದೂರು ಗುರುರಾಜ ಭಟ್ ಜನ್ಮ ಶತಾಬ್ಧಿ ಪ್ರಶಸ್ತಿ - 2025 ಸ್ವೀಕರಿಸಿ ಮಾತನಾಡಿದರು.
ಹಿಂದೆ ಆಗಿರುವ ತಪ್ಪುಗಳಿಗೆ ಇಂದಿನ ಜನಾಂಗ ಹೊಣೆ ಅಲ್ಲ, ಆದ್ದರಿಂದ ಹಿರಿಯರು ಮಾಡಿದ ತಪ್ಪಿಗೆ ಇಂದಿನವರು ಅವಮಾನಿತರಾಗಬೇಕಾಗಿಲ್ಲ ಎಂದ ಅವರು, ಚರಿತ್ರೆಯ ಸತ್ಯ ಮತ್ತು ಸುಳ್ಳುಗಳನ್ನು ತಿಳಿದುಕೊಳ್ಳುವ ಹಕ್ಕು ಇಂದಿನ ಜನಾಂಗಕ್ಕೆ ಇದೆ ಎಂದರು.ಟಿಪ್ಪು ಸುಲ್ತಾನ್‌ಗೆ ನಮ್ಮ ಚರಿತ್ರೆಯಲ್ಲಿ ಉನ್ನತ ಸ್ಥಾನ ಇದೆ ನಿಜ, ಆದರೆ ಸರ್ಕಾರವೇ ಆತನ ಜಯಂತಿಯನ್ನು ಆಚರಿಸಿದರೆ, ಆತನಿಂದ ದೌರ್ಜನ್ಯಕ್ಕೊಳಗಾದ ಮಂಗಳೂರಿನ ಕ್ರೈಸ್ತರು, ಕೊಡಗಿನ ಜನರು, ಶ್ರೀರಂಗಪಟ್ಟಣದ ಅಯ್ಯಂಗಾರರಿಗೆ ಹೇಗನ್ನಿಸಬೇಡ ಎಂದವರು ಪ್ರಶ್ನಿಸಿದರು.
ಮಹಾತ್ಮ ಗಾಂಧಿ ಅವರು ದೇಶಾದ್ಯಂತ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಿಗೊಳಿಸಿದವರು ಎಂಬುದು ನಿಜ, ಆದರೆ ಅಷ್ಟರಿಂದಲೇ ಸ್ವಾತಂತ್ರ್ಯ ಸಿಕ್ಕಿತು ಎನ್ನುವುದು ಸರಿಯಲ್ಲ. ಅದಕ್ಕೆ ಮೊದಲು ನಡೆದ ಸಶಸ್ತ್ರ ಕ್ರಾಂತಿಗಳು ಸ್ವಾತಂತ್ರ್ಯ ಸಿಗುವಲ್ಲಿ ಪ್ರಮುಖ ಕಾರಣವಾಗಿವೆ ಎಂದವರು ಹೇಳಿದರು.ಭಾರತೀಯರ ಅಭಿರುಚಿ, ತತ್ವ, ನೀತಿ ಎಲ್ಲವೂ ಬ್ರಿಟಿಷರದ್ದು, ಚರ್ಮದ ಬಣ್ಣ ಮಾತ್ರ ಭಾರತೀಯರದ್ದು. ನಮ್ಮದು ದೇಶದ ಚರಿತ್ರೆ ಅಲ್ಲ, ಅದು ಚರಿತ್ರೆ ಬರೆದವರ ಚರಿತ್ರೆಯಾಗಿದೆ ಅರ್ಥಾತ್ ಬ್ರಿಟೀಷರ ಚರಿತ್ರೆಯಾಗಿದೆ ಎಂದವರು ವಿಶ್ಲೇಷಿಸಿದರು.ಇದಕ್ಕೆ ಮೊದಲು ಪ್ರಾಸ್ತಾವಿಕ ಮಾತುಗಳನ್ನಾಡಿದ ಟ್ರಸ್ಟ್ ಅಧ್ಯಕ್ಷ ಪ್ರೊ. ಪಿ. ಶ್ರೀಪತಿ ತಂತ್ರಿ, ಶಾಲಾ ಕಾಲೇಜುಗಳಲ್ಲಿ ಇತಿಹಾಸ ಕಲಿಸಲಾಗುತ್ತಿಲ್ಲ, ಇತಿಹಾಸದ ಹೆಸರಿನಲ್ಲಿ ಸಿದ್ಧಾಂತ (ಐಡಿಯಲಾಜಿ)ಗಳನ್ನು ಕಲಿಸಲಾಗುತ್ತಿದೆ. ಈ ಶಿಕ್ಷಣದಲ್ಲಿ ರಾಜಕೀಯದ ಹಿಡನ್ ಅಜೆಂಡಾಗಳಿವೆ. ಅದಕ್ಕಾಗಿಯೇ 1947ರಿಂದ 77ರ ವರೆಗೆ ಕೇಂದ್ರ ಸರ್ಕಾರದಲ್ಲಿ ಒಂದು ಸಮುದಾಯಕ್ಕೆ ಸೇರಿದವರೆ ಶಿಕ್ಷಣ ಸಚಿರಾಗಿದ್ದಾರೆ ಎಂದರು.ಪಾದೂರು ಅವರ ಶಿಷ್ಯ ಡಾ. ಮಾಲತಿ ಮೂರ್ತಿ, ಪಾದೂರರ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯ ಪುರಾತತ್ವ ತಜ್ಞ ಕೆ.ಕೆ. ಮುಹಮ್ಮದ್, ದೇವಾಲಯಗಳ ತಜ್ಞ ಸುರೇಂದ್ರನಾಥ ಬೊಪ್ಪರಾಜು ಉಪಸ್ಥಿತರಿದ್ದರು. ಪ್ರೊ. ರವಿಶಂಕರ ಅವರು ಕಾರ್ಯಕ್ರಮ ನಿರೂಪಿಸಿದರು.----------------
ಬ್ರಿಟಿಷರು ಬರುವ ಮೊದಲೇ ಭಾರತವಿತ್ತು...ಬ್ರಿಟಿಷರು ಬರುವ ಮೊದಲು ಭಾರತವೇ ಇರಲಿಲ್ಲ, ಭಾರತ ಬ್ರಿಟಿಷರ ಕೊಡುಗೆ ಎನ್ನುವುದು ಸುಳ್ಳು. ವಿಷ್ಣು ಪುರಾಣದಲ್ಲಿ ಭರತ ಖಂಡ, ಭಾರತ ವರ್ಷ ಎಂದು ದೇಶದ ಗಡಿಗಳನ್ನು ಹೇಳಲಾಗಿದೆ. ಭಾರತ ಚರಿತ್ರೆ ಎಂದರೆ ಅದು ನಿರಂತರ ಸೋಲುಗಳ ಕಥನ ಎಂಬುದು ಸರಿಯಲ್ಲ, ಭಾರತದ ಅನೇಕ ರಾಜರು ವಿರೋಚಿತ ಗೆಲವುಗಳನ್ನು ಸಾಧಿಸಿದ್ದಾರೆ. ಚರಿತ್ರೆಯ ಕೆಲವು ಘಟನೆಗಳು ಸಾಮರಸ್ಯಕ್ಕೆ ಅಡ್ಡಿಯಾಗುತ್ತವೆ ಎಂಬುದು ಸರಿಯಲ್ಲ, ಇದ್ದದ್ದನ್ನು ಇದ್ದ ಹಾಗೇ ಹೇಳುವುದೇ ಚರಿತ್ರೆ ಎಂದು ವಿಕ್ರಮ್ ಸಂಪತ್ ಹೇಳಿದರು.