ರಸ್ತೆ, ರೈಲು ಸಂಪರ್ಕ, ಜಲ ಸಂಪನ್ಮೂಲ, ಅಗತ್ಯ ಕಟ್ಟಡ ಸೇರಿದಂತೆ ಎಲ್ಲಾ ಸೌಕರ್ಯ ಹೊಂದಿರುವ ರಾಜ್ಯದ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ನಿರ್ಧಾರ ಕೈಗೊಳ್ಳುವಂತೆ ಜನತಾ ಬಜಾರ್ ಮಾಜಿ ಅಧ್ಯಕ್ಷ, ಎಚ್.ಶಿವಪ್ಪ ಪ್ರತಿಷ್ಠಾನದ ಎಚ್.ಎಸ್.ನಾಗರಾಜ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಸ್ತೆ, ರೈಲು ಸಂಪರ್ಕ, ಜಲ ಸಂಪನ್ಮೂಲ, ಅಗತ್ಯ ಕಟ್ಟಡ ಸೇರಿದಂತೆ ಎಲ್ಲಾ ಸೌಕರ್ಯ ಹೊಂದಿರುವ ರಾಜ್ಯದ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ನಿರ್ಧಾರ ಕೈಗೊಳ್ಳುವಂತೆ ಜನತಾ ಬಜಾರ್ ಮಾಜಿ ಅಧ್ಯಕ್ಷ, ಎಚ್.ಶಿವಪ್ಪ ಪ್ರತಿಷ್ಠಾನದ ಎಚ್.ಎಸ್.ನಾಗರಾಜ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈಕೋರ್ಟ್ ಪೀಠದ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲಿ ಅದನ್ನು ಪ್ರಾರಂಭಿಸಬೇಕೆಂಬ ಪರಿಶೀಲನೆಗೆ ಮೂವರು ನ್ಯಾಯಮೂರ್ತಿಗಳ ಸಮಿತಿ ಸಹ ರಚನೆಯಾಗಿದ್ದು, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಪೀಠಕ್ಕೆ ಎಲ್ಲ ಸೌಲಭ್ಯವಿದ್ದು, ಇಲ್ಲೇ ಪೀಠ ಸ್ಥಾಪಿಸಿದರೆ ಎಲ್ಲ ಕ್ಷೇತ್ರಗಳಲ್ಲೂ ಅನುಕೂಲವಾಗಲಿದೆ ಎಂದರು.

ಹೈಕೋರ್ಟ್ ಪೀಠ ಇಲ್ಲಿ ಸ್ಥಾಪನೆಯಾದರೆ ಆಡಳಿತಾತ್ಮಕ ವ್ಯವಸ್ಥೆ ಸ್ಥಳಾಂತರವಾಗಲಿದೆ. ಹಲವಾರು ಜಿಲ್ಲೆ ಜನರು, ವಕೀಲರು, ಅಧಿಕಾರಿಗಳು, ಕಕ್ಷಿದಾರರು ಬರುತ್ತಾರೆ. ವ್ಯವಹಾರಿಕ, ಉದ್ಯೋಗ ಕ್ಷೇತ್ರಕ್ಕೂ ಅನುಕೂಲವಾಗಲಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಇಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಬಗ್ಗೆ ಜಿಲ್ಲೆಯ ಇಬ್ಬರು ಸಚಿವರು, ಸಂಸದರು, ಶಾಸಕರು, ಮಾಜಿ ಸಚಿವರು, ಶಾಸಕರು, ಎಲ್ಲ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಉತ್ತಮ ರಸ್ತೆ, ರೈಲ್ವೆ ಸೌಲಭ್ಯ, ತುಂಗಭದ್ರಾ ನದಿ ನೀರು ಹೀಗೆ ಎಲ್ಲ ಅನುಕೂಲ ಇಲ್ಲಿದ್ದು, ರಸ್ತೆ ಮಾರ್ಗವಾಗಿ ನಾಡಿನ ನಾಲ್ಕೂ ದಿಕ್ಕಿಗೂ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನ ದಾವಣಗೆರೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣ ಮುಗಿಯುವ ಹಂತಕ್ಕೆ ಬಂದಿದೆ. ಎಲ್ಲ ಅಂಶ ಅನುಕೂಲಕರವಾಗಿವೆ. ಹಾಗಾಗಿ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠದ ಪ್ರಾರಂಭಿಸಲು ಮುಖ್ಯಮಂತ್ರಿ, ಕಾನೂನು ಸಚಿವರು, ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.

ಹೈಕೋರ್ಟ್ ಪೀಠ ಇಲ್ಲಿ ಸ್ಥಾಪಿಸುವಂತೆ ಇಲ್ಲಿಂದ ಬೆಂಗಳೂರಿಗೆ ಪಾದಯಾತ್ರೆ ಸೇರಿದಂತೆ ಎಲ್ಲ ರೀತಿ ಹೋರಾಟ ನಡೆಸಲಾಗುವುದು. ಜಿಲ್ಲಾ ವಕೀಲರ ಸಂಘದ ನೇತೃತ್ವ, ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರು, ಎಲ್ಲಾ ಪಕ್ಷಗಳೂ ಸೇರಿದಂತೆ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು. ಈ ಬಗ್ಗೆ ಶೀಘ್ರವೇ ಸಭೆ ನಡೆಸಿ, ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಆಗಲೇಬೇಕೆಂಬ ವಕೀಲರ ಹೋರಾಟಕ್ಕೆ ಎಚ್.ಶಿವಪ್ಪ ಪ್ರತಿಷ್ಠಾನದ ಜೊತೆ ಓರ್ವ ನಾಗರೀಕನಾಗಿ ಸಂಪೂರ್ಣ ಬೆಂಬಲ ನೀಡುವೆ. ಹೈಕೋರ್ಟ್ ಪೀಠ ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ. ಬೇರೆ ಕಡೆಯವರೂ ಒತ್ತಡ ಹಾಕುತ್ತಿರುತ್ತಾರೆ. ಈ ಸಲ ಅವಕಾಶ ಕಳೆದುಕೊಂಡರೆ ದಾವಣಗೆರೆಗೆ ಮತ್ತೆಂದಿಗೂ ಪೀಠ ದೊರೆಯುವುದಿಲ್ಲ. ದಾವಣಗೆರೆ ರಾಜ್ಯದ ರಾಜಧಾನಿಯಾಗಬೇಕಿತ್ತು. ಆದರೆ, ಪ್ರಭಾವದಿಂದ ಅಂತಹ ಪಟ್ಟ ಬೆಂಗಳೂರು ಆಯಿತು. ಎರಡನೇ ರಾಜಧಾನಿಯೂ ಬೆಳಗಾವಿಗೆ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟದ ಕೊರತೆಯಿಂದ ಎಲ್ಲವನ್ನೂ ದಾವಣಗೆರೆ ನಗರ, ಜಿಲ್ಲೆಯವರು, ಮಧ್ಯ ಕರ್ನಾಟಕದವರು ಕಳೆದುಕೊಳ್ಳುವಂತಾಗಿದೆ. ಹೈಕೋರ್ಟ್ ಪೀಠ ಪಡೆಯಲೇಬೇಕೆಂಬ ಗಟ್ಟಿತನದ ಪಕ್ಷಾತೀತ, ರಾಜಕೀಯೇತರ ಹೋರಾಟದ ಅಗತ್ಯವಿದೆ. ಇಲ್ಲಿ ಹೈಕೋರ್ಟ್ ಪೀಠ ಆಗಲೇಬೇಕು. ಅದಕ್ಕಾಗಿ ಎಂತಹದ್ದೇ ಹೋರಾಟಕ್ಕೂ ಜಿಲ್ಲೆಯ ಜನಪ್ರತಿನಿಧಿಗಳು, ಎಲ್ಲಾ ಸಮುದಾಯಗಳು, ಮಠಾಧೀಶರು, ಸ್ವಾಮೀಜಿಗಳು, ಕನ್ನಡ, ರೈತ, ದಲಿತ ಎಲ್ಲ ಸಂಘಟನೆಗಳು, ಸಂಘ-ಸಂಸ್ಥೆಗಳು, ಜನರು ಸಿದ್ಧವಾಗಬೇಕು ಎಂದು ಮನವಿ ಮಾಡಿದರು.

ಪ್ರತಿಷ್ಠಾನದ ಅಣಜಿ ಎಸ್.ಕೆ.ಚಂದ್ರಶೇಖರ್, ಹಿರಿಯ ವಕೀಲ ಎನ್.ಎಂ.ಆಂಜನೇಯ ಗುರೂಜಿ, ಪೇಪರ್ ಕೆ.ಚಂದ್ರಣ್ಣ, ಮತ್ತಿಹಳ್ಳಿ ಕೊಟ್ರೇಶ, ಕಾಯಿಪೇಟೆ ಹಾಲೇಶ, ಬಲ್ಲೂರು ಬಾಬಣ್ಣ, ಲಿಂಗರಾಜ ಮುತ್ತಗಿ, ಜಯಂತಿ ಲಾಲ್, ಶಫೀವುಲ್ಲಾ, ಹುಲ್ಮನಿ ಠಾಕೂರ್, ಬೂದಾಳ್ ಪ್ರಕಾಶ, ಮಾಯಕೊಂಡ ಜಗದೀಶ ಇತರರು ಇದ್ದರು.