ಸಕಲೇಶಪುರ ಮುಖ್ಯರಸ್ತೆ ವ್ಯಾಜ್ಯ ಶಮನಕ್ಕೆ ಹೈ ತಾಕೀತು

| Published : Mar 29 2025, 12:32 AM IST

ಸಾರಾಂಶ

ಸಕಲೇಶಪುರ ಪಟ್ಟಣದ ಮುಖ್ಯರಸ್ತೆ ಕಿರಿದಾಗಿರುವ ಕಾರಣದಿಂದ ಪಟ್ಟಣದಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ತಲೆದೋರುತ್ತಿದೆ ಎಂದು ೨೦೧೮ರಲ್ಲಿ ಅಂದಿನ ಉಪವಿಭಾಗಾಧಿಕಾರಿಯಾಗಿದ್ದ ಲಕ್ಷ್ಮೀಕಾಂತರೆಡ್ಡಿ ಪಟ್ಟಣದ ಮುಖ್ಯ ರಸ್ತೆಯಲ್ಲಿದ್ದ ಸರ್ಕಾರಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಯಿಂದ ಬೆದರಿದ ಕೆಲವು ವರ್ತಕರು ತಮ್ಮ ಕಟ್ಟಡಗಳನ್ನು ತಾವೇ ತೆರವುಗೊಳಿಸಿದ್ದರು. ಆದರೆ, ಕೆಲವು ವರ್ತಕರು ತೆರವು ಕಾರ್ಯಾಚರಣೆ ವಿರೋಧಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ಅಗಲೀಕರಣ ಕಾರ್ಯಾಚರಣೆ ಅರ್ಧಕ್ಕೆ ನಿಲುಗಡೆಯಾಗುವಂತಾಗಿತ್ತು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಅಗಲೀಕರಣ ಸಮಸ್ಯೆ ಶೀಘ್ರ ಪರಿಹರಿಸಿ ಎಂಬ ವರ್ತಕರ ಮನವಿಯಿಂದಾಗಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಪಟ್ಟಣದ ಮುಖ್ಯರಸ್ತೆ ಕಿರಿದಾಗಿರುವ ಕಾರಣದಿಂದ ಪಟ್ಟಣದಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ತಲೆದೋರುತ್ತಿದೆ ಎಂದು ೨೦೧೮ರಲ್ಲಿ ಅಂದಿನ ಉಪವಿಭಾಗಾಧಿಕಾರಿಯಾಗಿದ್ದ ಲಕ್ಷ್ಮೀಕಾಂತರೆಡ್ಡಿ ಪಟ್ಟಣದ ಮುಖ್ಯ ರಸ್ತೆಯಲ್ಲಿದ್ದ ಸರ್ಕಾರಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಯಿಂದ ಬೆದರಿದ ಕೆಲವು ವರ್ತಕರು ತಮ್ಮ ಕಟ್ಟಡಗಳನ್ನು ತಾವೇ ತೆರವುಗೊಳಿಸಿದ್ದರು. ಆದರೆ, ಕೆಲವು ವರ್ತಕರು ತೆರವು ಕಾರ್ಯಾಚರಣೆ ವಿರೋಧಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ಅಗಲೀಕರಣ ಕಾರ್ಯಾಚರಣೆ ಅರ್ಧಕ್ಕೆ ನಿಲುಗಡೆಯಾಗುವಂತಾಗಿತ್ತು.

ಮತ್ತೆ ಸದ್ದು:

ಮುಖ್ಯ ರಸ್ತೆ ವರ್ತಕರ ತಂಡ ಅಗಲೀಕರಣ ವಿರೋಧಿಸಿ ಪರಿಹಾರ ನೀಡಬೇಕು ಎಂಬ ಬೇಡಿಕೆ ಮಂಡಿಸಿ ರಾಜ್ಯ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯ ಈ ವಿಚಾರವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಆದರೆ, ಐವರು ಜಿಲ್ಲಾಧಿಕಾರಿಗಳು ಬದಲಾದರೂ ಅಗಲೀಕರಣ ಸಮಸ್ಯೆ ಬಗೆಹರಿಸಲು ಯಾವ ಜಿಲ್ಲಾಧಿಕಾರಿಗಳೂ ಮುಂದಾಗದ ಕಾರಣ ಮತ್ತೊಮ್ಮೆ ವರ್ತಕರ ತಂಡ ಸಮಸ್ಯೆ ಬಗೆಹರಿಸಲು ವಿಳಂಬವಾಗುತ್ತಿದೆ ಎಂದು ರಾಜ್ಯ ಉಚ್ಚನ್ಯಾಯಾಲಯದ ಕದ ತಟ್ಟಿದೆ. ಪರಿಣಾಮ ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ನ್ಯಾಯಾಲಯ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಅಗಲೀಕರಣ ವಿಚಾರ ಹೆಚ್ಚಿನ ಸದ್ದು ಮಾಡುತ್ತಿದೆ.

ವಹಿವಾಟಿಲ್ಲ:

ಮುಖ್ಯ ರಸ್ತೆ ಕಿರಿದಾಗಿದ್ದು ಪಾರ್ಕಿಂಗ್ ಸಮಸ್ಯೆ ಅತಿಯಾಗಿದೆ. ಪರಿಣಾಮ ಮುಖ್ಯರಸ್ತೆಯಲ್ಲಿರುವ ಅಂಗಡಿಮುಂಗಟ್ಟುಗಳಿಗೆ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಕುಸಿದಿದೆ. ಇದರಿಂದಾಗಿ ರಸ್ತೆ ಅಗಲೀಕರಣಗೊಂಡರೆ ಉತ್ತಮ ಎಂಬ ನಿಲುವಿಗೆ ಬಂದಿದ್ದು, ಪರಿಹಾರ ನೀಡಿದರೆ ಮಾತ್ರ ಅಗಲೀಕರಣಕ್ಕೆ ಒಪ್ಪಿಗೆ ನೀಡಲಿದ್ದೇವೆ ಎಂಬ ಹಿಂದಿನ ಪಟ್ಟನ್ನು ಸಡಿಲಿಸಿದ್ದು ಮಾತುಕತೆಗೆ ಸಿದ್ಧರಿದ್ದಾರೆ ಎನ್ನಲಾಗುತ್ತಿದೆ.

ಅಂದ ಹೆಚ್ಚಿಸಲು ತಿರ್ಮಾನ:

ಶಾಸಕ ಸಿಮೆಂಟ್ ಮಂಜು ಕೆಲವು ವರ್ತಕರೊಂದಿಗೆ ಈಗಾಗಲೇ ಚರ್ಚಿಸಿದ್ದು ಮುಖ್ಯರಸ್ತೆ ಅಂದ ಹೆಚ್ಚಬೇಕಾದರೆ ಅಗಲೀಕರಣ ನಡೆಸಲೇಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದ್ದರಿಂದ, ಮುಂದಿನ ಕೆಲವು ದಿನಗಳಲ್ಲಿ ಎಲ್ಲಾ ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲು ನಿರ್ಧರಿಸಿದ್ದು, ಸಭೆ ದಿನಾಂಕ ನಿಗದಿಯಾಗಬೇಕಿದೆ.

ಹಾಳೂರಿನಂತೆ ಕಾಣುತ್ತಿದೆ:

ಮುಖ್ಯರಸ್ತೆಯಲ್ಲಿ ಅನಾದಿಕಾಲದ ಹಳೆ ಕಟ್ಟಡಗಳೆ ಹೆಚ್ಚಿದ್ದು ಅಗಲೀಕರಣ ಸಂದರ್ಭದಲ್ಲಿ ಕೆಲವು ಕಟ್ಟಡಗಳು ವಿಕಾರಗೊಂಡಿದ್ದರೆ, ವಿಕಾರಗೊಂಡ ಕಟ್ಟಡಗಳಿಗೆ ಕೆಲವು ವರ್ತಕರು ಶೆಡ್‌ಗಳಂತೆ ಅಂಗಡಿ ನಿರ್ಮಾಣ ಮಾಡಿಕೊಂಡಿದ್ದಾರೆ. ಪರಿಣಾಮ ಪಟ್ಟಣದ ಮುಖ್ಯ ರಸ್ತೆ ಅಂದ ಕಳೆದುಕೊಂಡು ಹಾಳೂರಿನಂತೆ ಭಾಸವಾಗುತ್ತಿದೆ.

ನಿರ್ಜನ ಪಟ್ಟಣ:

ಒಂದು ಕಾಲದಲ್ಲಿ ಅತಿಹೆಚ್ಚು ವಹಿವಾಟು ಹಾಗೂ ಸಾರ್ವಜನಿಕರು ಸಂಚರಿಸುತ್ತಿದ್ದ ಮುಖ್ಯ ರಸ್ತೆ ಹಾಗೂ ಅಶೋಕ ರಸ್ತೆಗಳು ನಿರ್ಜನವಾಗಿದ್ದು ದಶಕಗಳ ಹಿಂದಿನ ವ್ಯಾಪಾರ ವಹಿವಾಟು ಕಾಣದಂತಾಗಿದೆ ಎಂಬ ಮಾತುಗಳು ವರ್ತಕರಿಂದಲೇ ಕೇಳಿಬರುತ್ತಿದೆ.

ಅಭಿವೃದ್ಧಿಗೆ ಕೆಲವೇ ವರ್ತಕರ ಅಡ್ಡಿ:

ರಸ್ತೆ ಅಗಲೀಕರಣಕ್ಕೆ ಪಟ್ಟಣದ ಸಾಕಷ್ಟು ವರ್ತಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸಿ ಅಭಿವೃದ್ಧಿಗೆ ಸಾಥ್ ನೀಡಿದ್ದಾರೆ. ಆದರೆ ಕೇವಲ ಕೈ ಬೆರಳೆಣಿಕೆಯಷ್ಟು ವರ್ತಕರು ಪರಿಹಾರದ ಬೇಡಿಕೆ ಇಟ್ಟು ನ್ಯಾಯಾಲಯದ ಮೊರೆ ಹೋಗುವ ಮೂಲಕ ಅಭಿವೃದ್ದಿಗೆ ಅಡ್ಡಿಯಾಗಿರುವುದಲ್ಲದೆ ತಮ್ಮ ವಹಿವಾಟಿಗೂ ಕುತ್ತು ತಂದುಕೊಂಡಿದ್ದಾರೆ. ಸುಮಾರು ೪೦ ಮುಖ್ಯ ರಸ್ತೆ ವರ್ತಕರು ಪರಿಹಾರಕ್ಕೆ ಆಗ್ರಹಿಸಿ ನ್ಯಾಯಾಲಯದ ಮೊರೆಹೋಗಿದ್ದಾರೆ. ಆದರೆ, ಇದರಲ್ಲಿ ಸಾಕಷ್ಟು ವರ್ತಕರು ಮತ್ತೊಬ್ಬರ ಒತ್ತಾಯಕ್ಕೆ ಮಣಿದು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು ಇಂತಹವರ ಮನವೊಲಿಸುವುದು ಸುಲಭ ಎಂಬ ಮಾತು ವರ್ತಕರಿಂದಲೇ ಕೇಳಿ ಬರುತ್ತಿದೆ.

ಪ್ರವಾಸಿಕೇಂದ್ರ:

ತಾಲೂಕು ಪ್ರವಾಸಿ ಕೇಂದ್ರವಾಗಿದ್ದು ಇಲ್ಲಿಗೆ ದೇಶದ ನಾನಾ ಮೂಲೆಗಳಿಂದ ಪ್ರವಾಸಿಗರು ಆಗಮಿಸಿ ಇಲ್ಲಿನ ನಿಸರ್ಗದ ಸೌಂದರ್ಯ ಸವಿಯುತ್ತಾರೆ. ಆದರೆ, ಹಾಳೂರಿನಂತೆ ಗೋಚರಿಸುವ ಸಕಲೇಶಪುರ ಪಟ್ಟಣ ಪ್ರವಾಸಿಗರಿಗೆ ನಕಾರತ್ಮಕತೆ ಸೃಷ್ಟಿಸುತ್ತಿದೆ.

ಎಲ್ಲೆಲ್ಲೂ ಅಗಲೀಕರಣ:

ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ರಸ್ತೆ ಅಗಲೀಕರಣಗೊಂಡಿದ್ದು ಅದರಲ್ಲೂ ಚನ್ನರಾಯಪಟ್ಟಣದ ಮುಖ್ಯರಸ್ತೆಗಳು ಎರಡೆರಡು ಬಾರಿ ಅಗಲೀಕರಣಕ್ಕೆ ಒಳಗಾಗಿವೆ. ಅಗಲೀಕರಣಕ್ಕೆ ಅಲ್ಲಿ ಎಲ್ಲೂ ಇಲ್ಲದ ಅಡ್ಡಿಗಳು ಸಕಲೇಶಪುರ ಪಟ್ಟಣವನ್ನು ಕಾಡುತ್ತಿರುವುದು ಏಕೆ ಎಂಬ ಪ್ರಶ್ನೆ ತಾಲೂಕಿನ ಜನರನ್ನು ಕಾಡುತ್ತಿದೆ.

----------------------------------- * ಹೇಳಿಕೆ1

ಪಟ್ಟಣದ ಮುಖ್ಯ ರಸ್ತೆ ಅಗಲೀಕರಣಗೊಳಿಸಿ ಪಟ್ಟಣದ ಸೌಂದರ್ಯ ಹೆಚ್ಚಿಸುವುದು ನನ್ನ ಕನಸಾಗಿದೆ. ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದ್ದು ಶೀಘ್ರದಲ್ಲೆ ಸಭೆ ನಡೆಸಲಿದ್ದೇನೆ.

- ಸಿಮೆಂಟ್ ಮಂಜು, ಶಾಸಕ, ಸಕಲೇಶಪುರ* ಹೇಳಿಕೆ 2

ಅಗಲೀಕರಣ ಸಂಬಂಧ ವರ್ತಕರು ಮಾತುಕತೆಗೆ ಸಿದ್ಧರಿದ್ದು ವೇದಿಕೆ ಸೃಷ್ಟಿಯಾಗಬೇಕಿದೆ.

ಡಾ. ಸುಧಾಕರ್, ಗಣೇಶ್ ಕ್ಲಿನಿಕ್, ಸಕಲೇಶಪುರ