ಸಾರಾಂಶ
ಬೆಂಗಳೂರು : ಸಹಾಯಕ ಎಂಜಿನಿಯರ್‌ಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್‌ಸಿ) ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಕೆಪಿಎಸ್‌ಸಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ನ್ಯಾಯಾಲಯವೇ ಆರಂಭಿಸಲಿದೆ. ಆಯೋಗದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಸಾರ್ವಜನಿಕರ ಮುಂದೆ ಬಿಚ್ಚಿಡಲಾಗುವುದು ಎಂದು ಕಿಡಿಕಾರಿದೆ.
ಸಹಾಯಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಳಂಕಿತರನ್ನು ಸೇವೆಯಿಂದ ವಜಾಗೊಳಿಸುವಂತೆ ಆಯೋಗ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಲು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ನಿರಾಕರಿಸಿರುವ ಕ್ರಮ ಪ್ರಶ್ನಿಸಿ ಎಇಇ ವಿಶ್ವಾಸ್ ಮತ್ತಿತರ ಎಂಜಿನಿಯರ್‌ಗಳು ಸಲ್ಲಿಸಿರುವ ಮೇಲ್ಮನವಿಗಳನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಕೆಪಿಎಸ್‌ಸಿಗೆ ಚಾಟಿ ಬೀಸಿತು.
ದೊಡ್ಡ ಕುಳಗಳ ಕೈವಾಡವಿಲ್ಲದೆ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮಗಳು ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಆಯೋಗದ ಯಾವ್ಯಾವ ಸದಸ್ಯರು, ಸಿಬ್ಬಂದಿ ಮೇಲೆ ಎಷ್ಟು ಕ್ರಿಮಿನಲ್ ಕೇಸುಗಳು ಬಾಕಿಯಿವೆ. ಅವುಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ಒದಗಿಸುವಂತೆ ರಾಜ್ಯ ಅಡ್ವೋಕೇಟ್ ಜನರಲ್‌ಗೆ ಸೂಚಿಸಿತು.
ಟೀವಿ ಹಾಕಿಸಿ ಬಹಿರಂಗ:
ವಿಚಾರಣೆ ವೇಳೆ ಕೆಪಿಎಸ್‌ಸಿ ಪರ ಹಿರಿಯ ವಕೀಲ ರೋಬೇನ್ ಜಾಕೋಬ್, ಎಂಜಿನಿಯರ್ ಹುದ್ದೆಗಳಿಗೆ ನಡೆಸಿದ ಲಿಖಿತ ಪರೀಕ್ಷೆಯ ಓಎಂಆರ್‌ಶೀಟ್‌ಗಳು, ಎಫ್‌ಎಸ್‌ಎಲ್ ವರದಿ, ಪೆನ್ ಡ್ರೈವ್ ಸೇರಿ ಎಲ್ಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು.
ಅದನ್ನು ದಾಖಲಿಸಿಕೊಂಡು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಮೊದಲಿಗೆ ಕೆಲ ವಕೀಲರ ಸಮಕ್ಷಮದಲ್ಲಿ ತಾವೇ ಮುಚ್ಚಿದ ಲಕೋಟೆಯಲ್ಲಿ ವಿವರ ಪರಿಶೀಲಿಸುತ್ತೇವೆ. ಅಗತ್ಯಬಿದ್ದರೆ ಎಲ್ಲ ವಿವರಗಳನ್ನು ಸಾರ್ವಜನಿಕವಾಗಿ ಬಿಚ್ಚಿಡುತ್ತೇವೆ. ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಟಿವಿಗಳನ್ನು ಹಾಕಿಸಿ ಆಯೋಗದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಕ್ರಮ ಕುರಿತು ಬೇಸರ:
ನೇಮಕಾತಿ ಅಕ್ರಮದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಆಯೋಗವನ್ನು ಸರ್ಕಾರ ಶುದ್ಧೀಕರಿಸಬೇಕಿದೆ. ಸರ್ಕಾರ ತನ್ನ ಕರ್ತವ್ಯ ನಿರ್ವಹಿಸದೆ ಹೋದರೆ ಆಯೋಗದ ಸ್ವಚ್ಛತಾ ಕಾರ್ಯವನ್ನು ನ್ಯಾಯಾಲಯವೇ ಆರಂಭಿಸುತ್ತದೆ. ಆಯೋಗದಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಸಾರ್ವಜನಿಕರ ಮುಂದೆ ಬಿಚ್ಚಿಡುತ್ತೇವೆ. ಸಗಣಿ ತಿಂದವರನ್ನು ಸುಮ್ಮನೆ ಬಿಡುವುದಿಲ್ಲ. ಆಯೋಗದ ನೇಮಕದಲ್ಲಿ ಪಾರದರ್ಶಕತೆ ತರಲು ಏನೆಲ್ಲ ಮಾಡಬೇಕೋ ಅದನ್ನು ಮಾಡೋಣ. 4-5 ಮಂದಿ ತಲೆದಂಡವಾದರೆ ಎಲ್ಲವೂ ಸರಿ ಹೋಗುವುದು ಎಂದು ಕಟುವಾಗಿ ನುಡಿದರು.
ಇದೇ ವೇಳೆ ಖಾಲಿ ಉಳಿದಿರುವ ಎಲ್ಲಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ 2023ರ ಸೆಪ್ಟೆಂಬರ್‌ನಲ್ಲಿ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ನಿರ್ದೇಶಿಸಿದೆ. ಆದರೆ ಇನ್ನೂ ನೇಮಕ ಪ್ರಕ್ರಿಯೆ ನಡೆಸಿಲ್ಲ, ಸರ್ಕಾರಕ್ಕೆ ಏನಾಗಿದೆ? ಏನಾದರೂ ತೊಂದರೆ ಇದ್ದರೆ ನ್ಯಾಯಾಲಯಕ್ಕೆ ತಿಳಿಸಬೇಕು. ಮುಖ್ಯ ನ್ಯಾಯಮೂರ್ತಿಗಳ ಆದೇಶ ಪಾಲಿಸದಿದ್ದರೆ ಕೋರ್ಟ್ ಆದೇಶಗಳಿಗೆ ಬೆಲೆ ಎಲ್ಲಿದೆ? ಎಂದು ಚಾಟಿ ಬೀಸಿದರು.
ಕೆಪಿಎಸ್ಸಿಯನ್ನು ಉಳಿಸಬೇಕಾಗಿದೆ. ಇಲ್ಲವಾದರೆ ಮುಂದಿನ ತಲೆಮಾರಿಗೆ ಏನು ಉತ್ತರ ಹೇಳಬೇಕು? ಆಯೋಗದ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ. ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಆಯೋಗವನ್ನು ಸರಿ ಮಾಡಲು ನ್ಯಾಯಾಲಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವಂತೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರಿಗೆ ಸೂಚಿಸಿದರು.
ಅದಕ್ಕೆ ಒಪ್ಪಿದ ಅಡ್ವೋಕೇಟ್ ಜನರಲ್, ಈ ನಿಟ್ಟಿನಲ್ಲಿ ಸರ್ಕಾರವೂ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ವ್ಯವಸ್ಥೆ ಸುಧಾರಿಸುವ ದೃಷ್ಟಿಯಿಂದ ನ್ಯಾಯಾಲಯಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಹೈಕೋರ್ಟ್ ಛಡಿಯೇಟು
- ಸಹಾಯಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತು
- ಆದರೂ ಸೇವೆಯಿಂದ ಕಳಂಕಿತರ ವಜಾ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸರಿಯೇ?
- ದೊಡ್ಡ ಕುಳಗಳ ಕೈವಾಡವಿಲ್ಲದೆ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮಗಳು ಸಾಧ್ಯವಿಲ್ಲ
- ಕೆಪಿಎಸ್ಸಿಯಲ್ಲಿ ಯಾವ ಸಿಬ್ಬಂದಿ, ಸದಸ್ಯರ ಮೇಲೆ ಎಷ್ಟು ಕೇಸಿವೆ ಎಂಬುದ ವಿವರ ನೀಡಿ
- ಸರ್ಕಾರ ಸ್ವಚ್ಛ ಮಾಡದಿದ್ರೆ ನಮ್ಮಿಂದಲೇ ಕೆಪಿಎಸ್ಸಿ ಸ್ವಚ್ಛತೆ ಹಾಗೂ ಪಾರದರ್ಶಕತೆ
- ಸಾರ್ವಜನಿಕ ಸ್ಥಳದಲ್ಲಿ ನಾವು ಟೀವಿ ಹಾಕಿಸುತ್ತೇವೆ, ಕೆಪಿಎಸ್ಸಿ ಬಣ್ಣ ಬಯಲು ಮಾಡ್ತೇವೆ-