ಸಾರಾಂಶ
ಕನ್ನಡಪ್ರಭವಾರ್ತೆ ಮಧುಗಿರಿ
ಮಧುಗುರಿ ತಾಲೂಕಿನಿಂದ ತುಮುಲ್‌ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಬಿ.ನಾಗೇಶ್ ಬಾಬು ಅವರ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ.ಮಧುಗಿರಿ ತಾಲೂಕಿಂದ ತುಮುಲ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದು ಇಬ್ಬರು ಮಾಜಿ ಅಧ್ಯಕ್ಷರಾದ ಕೊಂಡವಾಡಿ ಚಂದ್ರಶೇಖರ್ ಹಾಗೂ ಬಿ.ನಾಗೇಶಬಾಬು ನಡುವೆ ತೀವ್ರ ಪೈಪೋಟಿ ನಡೆದಿತ್ತು. ಚುನಾವಣೆಯಲ್ಲಿ ಬಿ.ನಾಗೇಶ್ ಬಾಬು ಗೆಲುವು ಸಾಧಿಸಿದ್ದರು. ಆದರೆ ಈ ಆಯ್ಕೆ ಅಸಿಂಧು ಎಂದು ಕೊಂಡವಾಡಿ ಚಂದ್ರಶೇಖರ್ ಹೈ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಈ ಬಿ.ನಾಗೇಶ್ ಬಾಬು ಆಯ್ಕೆ ಆಸಿಂಧು ಎಂದು ತೀರ್ಪು ನೀಡಿದೆ.
ನಾಗೇಶ್ ಬಾಬು ವಿರುದ್ಧ ಸ್ಪರ್ಧಿಸಿ 9 ಮತಗಳಿಂದ ಸೋಲುಂಡಿದ್ದ ಕೊಂಡವಾಡಿ ಚಂದ್ರಶೇಖರ್ ಪ್ರಸ್ತುತ ಈ ತೀರ್ಪನಿಂದ ನಿರ್ದೇಶಕರಾಗಿ ಆಯ್ಕೆಯಾಗುವ ಲಕ್ಷಣಗಳು ಕಾಣುತ್ತಿವೆ.ಇದನ್ನು ಜಿಲ್ಲಾ ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಿಸಬೇಕಿದೆ.ಕಳೆದ ಚುನಾವಣೆಯಲ್ಲಿ ತುಮುಲ್ ನಿರ್ದೇಶಕ ಸ್ಥಾನಕ್ಕೆ ಮಧುಗಿರಿ ತಾಲೂಕು ಬಂದ್ರೇಹಳ್ಳಿ ಹಾಲು ಉತ್ಪಾದಕರ ಸಹಾಕಾರ ಸಂಘದಿಂದ ನಾಗೇಶಬಾಬು ಸ್ಪರ್ಧಿಸಿದ್ದರು. ಆದರೆ ಈ ಸಂಘವನ್ನು ನಿಯಾಮನುಸಾರ ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ನಾಗೇಶಬಾಬು ಹೈಕೋರ್ಟ್ ಮೆಟ್ಟಿಲೇರಿದ್ದು ,ಮತದಾನಕ್ಕೆ ಅಂದು ಹೈಕೋರ್ಟ್ ಅವಕಾಶ ನೀಡಿತ್ತು. ಬಳಿಕ ನಡೆದ ಚುನಾವಣೆಯಲ್ಲಿ ನಾಗೇಶಬಾಬು ಆಯ್ಕೆಯಾಗಿದ್ದರು. ಈಗ ಅಂತಿಮ ತೀರ್ಪು ಹೊರ ಬಿದ್ದಿದ್ದು, ಮತದಾನಕ್ಕೆ ನೀಡಿದ್ದ ಅವಕಾಶವನ್ನು ಕೋರ್ಟ್ ರದ್ದು ಪಡಿಸಿದ್ದು ಇದರಿಂದಾಗಿ ನಾಗೇಶ್ ಬಾಬು ನಿರ್ದೇಶಕ ಸ್ಥಾನವನ್ನು ಕಳೆದುಕೊಂಡಿದ್ದಾರೆ.