ಕನ್ನಡಪ್ರಭ ವಾರ್ತೆ ಬೆಂಗಳೂರು
ಜನಗಣತಿ ಎಂಬುದು ರಾಷ್ಟ್ರೀಯ ಕರ್ತವ್ಯವಾಗಿದ್ದು, ಅದಕ್ಕಾಗಿ ಬದ್ಧರಾಗಿರಬೇಕು ಎಂದು ನುಡಿದಿರುವ ಹೈಕೋರ್ಟ್, ರಜೆ ಮೇಲೆ ತೆರಳಿರುವ ಶಿಕ್ಷಕರನ್ನು ತಕ್ಷಣವೇ ವಾಪಸ್ ಕರೆಸಿಕೊಂಡು ಗಣತಿ ಕಾರ್ಯದಲ್ಲಿ ಭಾಗಿಯಾಗುವಂತೆ ಸೂಚಿಸಬೇಕು ಎಂದು ನಗರದ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರಿಗೆ ತಾಕೀತು ಮಾಡಿದೆ.ಶಾಲೆಯ ಶಿಕ್ಷಕರನ್ನು ಜನಗಣತಿಗೆ ನಿಯೋಜನೆ ಮಾಡದ ಶಾಲೆಯ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮುಖ್ಯ ಜನಗಣತಿ ಅಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಜೆ.ಪಿ. ನಗರದ 7ನೇ ಹಂತದಲ್ಲಿರುವ ದಿ ಬ್ರಿಗೇಡ್ ಶಾಲೆ ಪ್ರಾಂಶುಪಾಲ ಶುಭಾರ್ ಜೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಶಾಲೆಯ ಮುಖ್ಯಸ್ಥರಾಗಿರುವ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದಲ್ಲಿ ಶಾಲೆಯ ಶಿಕ್ಷಕರನ್ನು ಹಿಂದಿರುಗಿ ಜನಗಣತಿ ಆಯುಕ್ತರ ಮುಂದೆ ವರದಿ ಮಾಡಿಕೊಳ್ಳುವುದನ್ನು ಖಾತರಿ ಪಡಿಸಬೇಕು ಎಂಬ ಷರತ್ತು ವಿಧಿಸಿತು. ಹಾಗೆಯೇ, ಶಾಲೆಯ ಪ್ರಾಂಶುಪಾಲರ ವಿರುದ್ಧ ಜನಗಣತಿ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತಹ ಕ್ರಮ ಕೈಗೊಳ್ಳದಂತೆ ಮುಖ್ಯ ಜನಗಣತಿ ಅಧಿಕಾರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
=============ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಧಾನ ಜನಗಣತಿ ಅಧಿಕಾರಿಯು ಏ.9ರಂದು ಅರ್ಜಿದಾರ ಶಾಲೆಗೆ ಪತ್ರ ಬರೆದು ಶಾಲೆಯ ಸಿಬ್ಬಂದಿಯನ್ನು ಜನ ಗಣತಿಗೆ ಕಾರ್ಯಕ್ಕೆ ನಿಯೋಜನೆ ಮಾಡುವಂತೆ ಸೂಚನೆ ನೀಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮಟ್ಟಿಲೇರಿದ್ದಾರೆ.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶಾಲೆಯಲ್ಲಿರುವ 84 ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಬಹುದಾಗಿದೆ. ಉಳಿದ ಶಿಕ್ಷಕರು ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಪ್ರವಾಸದಲ್ಲಿದ್ದಾರೆ. ಶಿಕ್ಷಕರು ರಜೆ ಪಡೆಯುವುದಕ್ಕೆ ಅವಕಾಶವಿದೆ. ಇದರಿಂದ ತಕ್ಷಣ ಹಿಂದಿರುಗುವಂತೆ ಸೂಚಿಸಲು ಕಷ್ಟಸಾಧ್ಯ. ಈಗಾಗಲೇ 12 ಮಂದಿ ಶಿಕ್ಷಕರನ್ನು ಜನಗಣತಿಗೆ ನಿಯೋಜಿಸಲಾಗಿದ್ದು, ಅವರು ವರದಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಸಿಬ್ದಂದಿಯನ್ನು ನಿಯೋಜಿಸುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಆದ್ದರಿಂದ ಗಣತಿ ಅಧಿಕಾರಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರತಿ 10ರಿಂದ 11 ವರ್ಷಗಳಿಗೊಮ್ಮೆ ಜನಗಣತಿ ನಡೆಯಲಿದೆ. ಪ್ರತಿ ಮನೆ ಮನೆಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ದಾಖಲಿಸಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರು ಈ ರೀತಿ ವರ್ತಿಸಿಸಲು ಪ್ರಾರಂಭಿಸಿದರೆ, ಸರ್ಕಾರ ಗಣತಿ ಕಾರ್ಯ ಪೂರ್ಣಗೊಳಿಸುವುದು ಹೇಗೆ? ಎಂದು ಖಾರವಾಗಿ ಪ್ರಶ್ನಿಸಿತು.
