ತಾಲೂಕಿನಲ್ಲಿ ತುಂಗಭದ್ರಾ ನದಿ ತೀರದ ಹರವಿ ಗ್ರಾಮದಿಂದ ಹಕ್ಕಂಡಿ ವರೆಗೂ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ.

ಚಂದ್ರು ಕೊಂಚಿಗೇರಿ ಹೂವಿನಹಡಗಲಿ

ಎಲ್ಲೆಡೆ ಬರ ಆವರಿಸಿ ಜಾನುವಾರುಗಳಿಗೆ ಮೇವಿನ ಕೊರತೆ ರೈತರಿಗೆ ಇನ್ನಿಲ್ಲದಂತೆ ಕಾಡುತ್ತಿದೆ. ಮಳೆ ಇಲ್ಲದೇ ಯಾವ ಕಡೆಗೂ ಉತ್ತಮ ಮೇವು ಸಿಗುತ್ತಿಲ್ಲ, ಭತ್ತದ ಹುಲ್ಲಿಗೆ ಭಾರಿ ಬೇಡಿಕೆಯಿದೆ. ಅನ್ನದಾತನ ಅಳಲು ನೋಡಲಾಗದೇ ಮಾಗಳ ರೈತರು, ಭತ್ತದ ಹುಲ್ಲನ್ನು ಉಚಿತ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಹೌದು, ತಾಲೂಕಿನ ಮಾಗಳ, ರಂಗಾಪುರ ತುಂಗಭದ್ರಾ ನದಿ ತೀರದ ಎರಡು ಕಂದಾಯ ಗ್ರಾಮಗಳ ವ್ಯಾಪ್ತಿಯಲ್ಲಿ ಸರಿಸುಮಾರು 3 ಸಾವಿರ ಎಕರೆಗೂ ಅಧಿಕ ಭತ್ತ ಬೆಳೆಯುವ ಪ್ರದೇಶವಿದೆ. ಪ್ರತಿ ವರ್ಷವೂ ಮಾಗಳ ಗ್ರಾಮದ ನೂರಾರು ರೈತರು, ಭತ್ತದ ಹುಲ್ಲನ್ನು ಬೇರೆ ಗ್ರಾಮಗಳ ರೈತರಿಗೆ ಮಾರಾಟ ಮಾಡುವುದಿಲ್ಲ. ಈ ಬಾರಿ ಬರ ಬಿದ್ದಿದ್ದು ಹೈನುಗಾರಿಕೆ ಮತ್ತು ಜಾನುವಾರು, ಸಾಕಣೆ ಮಾಡುತ್ತಿರುವ ರೈತರಿಗೆ ಉಚಿತವಾಗಿ ಭತ್ತದ ಹುಲ್ಲನ್ನು ನೀಡುತ್ತಿದ್ದಾರೆ.

ತಾಲೂಕಿನಲ್ಲಿ ತುಂಗಭದ್ರಾ ನದಿ ತೀರದ ಹರವಿ ಗ್ರಾಮದಿಂದ ಹಕ್ಕಂಡಿ ವರೆಗೂ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಈ ಪ್ರದೇಶ ಹೊರತುಪಡಿಸಿ, ನೀರಾವರಿ ಸೌಲಭ್ಯ ಇಲ್ಲದ ಗ್ರಾಮಗಳಿಂದ ನಿತ್ಯ ಹತ್ತಾರು ಟ್ರ್ಯಾಕ್ಟರ್‌ಗಳನ್ನು ತಂದು ಭತ್ತದ ಹುಲ್ಲನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ.

ಈ ಬಾರಿ ಮಳೆ ಇಲ್ಲದೇ ಮೆಕ್ಕೆಜೋಳದ ಮೇವು ಕೂಡಾ ಅಷ್ಟಾಗಿ ಇಲ್ಲ, ಎಲ್ಲ ರೈತರೂ ಭತ್ತದ ಹುಲ್ಲು ಸಂಗ್ರಹಿಸುತ್ತಿದ್ದಾರೆ. ತಾಲೂಕಿನ ಇಟ್ಟಿಗಿ ಹೋಬಳಿ ವ್ಯಾಪ್ತಿಯಲ್ಲಿಯೇ ಹೆಚ್ಚು ಮೇವಿನ ಕೊರತೆ ಕಾಡುತ್ತಿದೆ. ಉಪ ಜೀವನಕ್ಕಾಗಿ ಹಾಲು ಉತ್ಪಾದನೆ ಮಾಡಲು ಕಟ್ಟಿಕೊಂಡಿರುವ ಜಾನುವಾರುಗಳಿಗೆ ಮೇವಿನ ಕೊರತೆಯಿಂದ ಸಾಕಣೆ ಮಾಡಲು ಆಗದೇ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ.

ಬರಗಾಲದಲ್ಲಿ ಎಲ್ಲ ರೈತರು ಕಷ್ಟದಲ್ಲಿ ಕೈ ತೊಳೆಯುತ್ತಿದ್ದಾರೆ, ಇದರಿಂದ ನಾವು ಕೂಡಾ ಅವರ ಕಷ್ಟ ನೋಡಲಾಗದೇ ಭತ್ತದ ಹುಲ್ಲನ್ನು ನೀಡಿ ಸಣ್ಣ ಸಹಾಯಕ್ಕೆ ಮುಂದಾಗಿದ್ದೇವೆ. ಇಂದಲ್ಲ ನಾಳೆ ನಮಗೂ ಇಂತಹ ಕಷ್ಟ ಬಂದರೂ ಬರಬಹುದು, ನಮ್ಮೂರಿನ ಎಲ್ಲೋ ಒಬ್ಬ ಇಬ್ಬರು ಭತ್ತದ ಹುಲ್ಲನ್ನು ಮಾರಾಟ ಮಾಡುತ್ತಾರೆ. ಆದರೆ ಶೇ. 80ರಷ್ಟು ರೈತರು ಉಚಿತವಾಗಿಯೇ ಕೊಡುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

ತಾಲೂಕಿನಲ್ಲಿರುವ ಜಾನುವಾರು, ಕುರಿ, ಮೇಕೆಗಳಿಗೆ 37 ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಇದೆ. ಜಾನುವಾರುಗಳನ್ನು ಸಾಕಿಕೊಂಡಿರುವ ರೈತರು, ವರ್ಷಕ್ಕೆ ಆಗುವಷ್ಟು ಮೇವು ಸಂಗ್ರಹಿಸುತ್ತಾರೆ, ನಮ್ಮ ತಾಲೂಕಿನಿಂದ ಹೊರಗೆ ಮೇವು ಹೋಗುತ್ತಿಲ್ಲ. ಬರಗಾಲದಲ್ಲಿ ರೈತರಿಂದ ರೈತರಿಗೆ ಉಚಿತ ಮೇವು ನೀಡುವ ಮಾಗಳ ಗ್ರಾಮದ ರೈತರು, ಇಂತಹ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಹೂವಿನಹಡಗಲಿ ಪಶು ಸಂಗೋಪನಾ ಇಲಾಖೆ ಹಿರಿಯ ಪಶು ವೈದ್ಯ ನಾರಾಯಣ ಬಣಕಾರ ತಿಳಿಸಿದ್ದಾರೆ.

ಬರಗಾಲದಲ್ಲಿ ಯಾವ ಕಡೆಗೂ ಮೇವು ಇಲ್ಲ, ಮೆಕ್ಕೆಜೋಳದ ರವದಿ ಬಿಟ್ಟರೆ ಯಾವ ಕಡೆಗೂ ಹಿಡಿ ಮೇವಿಲ್ಲ, ರೈತರ ಸಂಕಷ್ಟ ನೋಡಲಾಗದೇ ನಾವೆಲ್ಲ ಪ್ರತಿ ವರ್ಷವೂ ಉಚಿತವಾಗಿ ಭತ್ತದ ಹುಲ್ಲನ್ನು ಕೊಡುತ್ತೇವೆ, ಅವರೇ ಟ್ರ್ಯಾಕ್ಟರ್‌ ತಂದು ತುಂಬಿಕೊಂಡು ಹೋಗುತ್ತಾರೆ ಎಂದು ಗ್ರಾಮಸ್ಥ ಮಾಗಳ ತಿಳಿಸಿದ್ದಾರೆ.