ಬಸವರಾಜ ಹಿರೇಮಠ
ಧಾರವಾಡ:ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ, ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದೆ. ಅದರಲ್ಲೂ ಜಿಲ್ಲೆಯ ವಿವಿಧೆಡೆ ಮಳೆಯ ಅನಿಶ್ಚಿತತೆ, ಅಸಮರ್ಪಕತೆ ಉಂಟಾಗಿ ಒಂದು ರೀತಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಹಸಿರು ಬರದ ಛಾಯೆ ಎದ್ದು ಕಾಣುತ್ತಿದೆ.
ದೂರದಿಂದ ಹೊಲಗಳನ್ನು ಗಮನಿಸಿದರೆ ಬೆಳೆಗಳು ಹಚ್ಚ ಹಸಿರಾಗಿಯೇ ಕಾಣುತ್ತವೆ. ಆದರೆ, ಸಮೀಪ ಹೋದರೆ ತೇವಾಂಶ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ರೋಗಕ್ಕೆ ಬಿದ್ದಿವೆ. ಮೋಡ ಮುಸುಕಿದ ವಾತಾವರಣದಿಂದ ಹಲವು ಕೀಟಗಳ ಕಾಟವೂ ರೈತರನ್ನು ಕಂಗೆಡಿಸಿದೆ. ಆಗಾಗ ಬಿದ್ದ ಮಳೆಯಿಂದ ಹೊಲಗಳಲ್ಲಿ ಕಸವೇ ಬೆಳೆದಿದ್ದು ರೈತರು ಈ ಬಾರಿ ಕಳೆ ಕೀಳಿಸುವುದು, ಔಷಧಿಗಾಗಿ ಹೆಚ್ಚುವರಿ ವೆಚ್ಚ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.ಬೆಳೆನಾಶದ ಉದಾಹರಣೆ:
ಈ ಬಾರಿ ಜಿಲ್ಲೆಯಲ್ಲಿ 2.82 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಪೈಕಿ 2.22 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಪ್ರಮುಖವಾಗಿ 74 ಸಾವಿರ ಹೆಕ್ಟೇರ್ ಹೆಸರು, 19 ಸಾವಿರ ಹೆಕ್ಟೇರ್ ಉದ್ದು, 8500 ಹೆಕ್ಟೇರ್ ಶೇಂಗಾ, 44 ಸಾವಿರ ಹೆಕ್ಟೇರ್ ಸೋಯಾ, 8500 ಹೆಕ್ಟೇರ್ ಭತ್ತ, 25 ಸಾವಿರ ಹೆಕ್ಟೇರ್ ಹತ್ತಿ, 15 ಸಾವಿರ ಹೆಕ್ಟೇರ್ ಕಬ್ಬು ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳೂ ಇವೆ. ಧಾರವಾಡ, ಕಲಘಟಗಿ, ಅಳ್ನಾವರದ ಕೆಲ ಭೂಮಿ ಹೊರತುಪಡಿಸಿ ನವಲಗುಂದ, ಕುಂದಗೋಳ, ಹುಬ್ಬಳ್ಳಿ, ಅಣ್ಣಿಗೇರಿಗಳಲ್ಲಿ ಮಳೆ ಕೊರತೆಯಿಂದ ಬೆಳೆ ನಾಶವಾಗಿವೆ.
ಶೇ. 35ರಷ್ಟು ಕೊರತೆ:
ಹವಾಮಾನ ಇಲಾಖೆ ಅಂಕಿ-ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ವಾಡಿಕೆ ಮಳೆಗಿಂತ ಶೇ.86ರಷ್ಟು ಕೊರತೆ, ಕಳೆದ ಏಳು ದಿನಗಳಲ್ಲಿ ವಾಡಿಕೆ ಮಳೆಗಿಂತ ಶೇ.63ರಷ್ಟು, ಜುಲೈ 1ರಿಂದ ಜುಲೈ 29ರ ವರೆಗೆ ವಾಡಿಕೆ ಮಳೆಗಿಂತ ಶೇ. 44ರಷ್ಟು ಹಾಗೂ ಜೂನ್ ಹಾಗೂ ಜುಲೈ ತಿಂಗಳಲ್ಲಿ ಆಗಬೇಕಿದ್ದ ವಾಡಿಕೆ ಮಳೆ 265.9 ಮಿ.ಮಿ ಪೈಕಿ ಆಗಿದ್ದು 176.5ರಷ್ಟು ಅಂದರೆ ಶೇ. 35ರಷ್ಟು ಮಳೆ ಕೊರತೆಯಾಗಿದೆ.ಹುಮ್ಮಸ್ಸು ಕಳಕೊಂಡ ರೈತರು:
ಮುಂಗಾರು ಬಿತ್ತನೆ ಸಮಯಕ್ಕೆ ಸಮರ್ಪಕವಾಗಿ ಮಳೆಯಾಗಿದ್ದು ರೈತರು ಹುಮ್ಮಸ್ಸಿನಿಂದ ಬಿತ್ತನೆ ಮಾಡಿದ್ದರು. ಆದರೆ, ಜೂನ್ ತಿಂಗಳು ಪೂರ್ತಿ ಮಳೆಯಾಗಲಿಲ್ಲ. ಬೆಳೆಗಳ ಬೆಳವಣಿಗೆಗೆ ಇದು ತೊಂದರೆಯಾಯಿತು. ಮತ್ತದೇ ಜುಲೈ ತಿಂಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಯಿತು. ತುಸು ನೀರಾವರಿ ವ್ಯವಸ್ಥೆ ಇದ್ದ ಧಾರವಾಡ, ಅಳ್ನಾವರ, ಕಲಘಟಗಿ ನಗರ ಸುತ್ತಲಿನ ರೈತರು ತಮ್ಮ ಬೆಳೆ ಬದುಕಿಸಿಕೊಳ್ಳುವ ಪ್ರಯತ್ನ ನಡೆಸಿದರು. ಗ್ರಾಮೀಣ ರೈತರಿಗೆ ಮಳೆ ಕೊರತೆ ಉಂಟಾಗಿ ಬೆಳೆ ಕಳೆದುಕೊಳ್ಳಬೇಕಾದ ಸ್ಥಿತಿ ಉಂಟಾಯಿತು. ನವಲಗುಂದ, ಅಣ್ಣಿಗೇರಿ, ಕುಂದಗೋಳ ರೈತರಂತೂ ತೀವ್ರ ಮಳೆ ಕೊರತೆಯಿಂದ ತಮ್ಮ ಬೆಳೆ ನಾಶಪಡಿಸಿದ ಉದಾಹರಣೆಗಳು ಸಾಕಷ್ಟಿವೆ.ಪರಿಹಾರದ ಮೊರೆ:
ಧಾರವಾಡ ಮಳಿ ನಂಬಬಾರದು ಎನ್ನುವಂತೆ ಈ ಬಾರಿ ಸಮ ಪ್ರಮಾಣ ಹಾಗೂ ಸರಿಯಾದ ಸಮಯಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಮತ್ತೆ ಆರ್ಥಿಕ ನಷ್ಟಕ್ಕೆ ಉಂಟಾಗುವ ಸ್ಥಿತಿ ಬಂದಿದೆ. ಸಾವಿರಾರು ರುಪಾಯಿ ವ್ಯಯಿಸಿ ಬೀಜ, ಗೊಬ್ಬರ, ರಾಸಾಯನಿಕ ಸಿಂಪರಣೆ, ಕಳೆ ತೆಗೆಯಿಸಿ ಬೆಳೆಗಳ ಮೇಲೆ ನಂಬಿಕೆ ಇಟ್ಟಿದ್ದರು. ಆದರೆ, ಮಳೆ ಕೊರತೆಯಿಂದಾಗಿ ನಿರೀಕ್ಷಿಸಿದ ಪ್ರಮಾಣ ಬೆಳೆ ಬರುವ ಸಾಧ್ಯತೆ ಕಡಿಮೆ ಇದೆ. ಅಮ್ಮಿನಬಾವಿಯಿಂದ ನವಲಗುಂದ ಭಾಗದ ವರೆಗೆ ಶೇ. 50ಕ್ಕಿಂತ ಹೆಚ್ಚಿನ ಮಳೆ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬರದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸುವ ಮೂಲಕ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕೆಂದು ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡರ ಆಗ್ರಹಿಸಿದರು.ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಅದರಲ್ಲೂ ಹು-ಧಾ ಅವಳಿನಗರ ಹೊರತುಪಡಿಸಿ ಗ್ರಾಮೀಣದಲ್ಲಿ ಮಳೆ ಪ್ರಮಾಣ ತೀರಾ ಕಡಿಮೆ ಇದೆ. ನಾಲ್ಕು ದಿನಗಳ ಕಾಲ ನಿರಂತರ ಬಿಸಿಲು ಬಿದ್ದರೆ ಬೆಳೆಗಳು ಸಂಪೂರ್ಣ ಒಣಗುವ ಸಾಧ್ಯತೆಯೂ ಇದೆ. ಆದರೆ, ಬರ ಅಥವಾ ಬೆಳೆಯ ಬಗ್ಗೆ ಸಮೀಕ್ಷೆ ನಡೆಸುವ ಕುರಿತು ರಾಜ್ಯ ಸರ್ಕಾರದಿಂದ ಯಾವ ಸೂಚನೆಗಳು ಬಂದಿಲ್ಲ.
ಮಂಜುನಾಥ ಅಂತರವಳ್ಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು