ಬಡವನಾದರೂ ಸಮಾಜದಲ್ಲಿ ಜಂಗಮರಿಗೆ ಉನ್ನತ ಸ್ಥಾನ

| Published : Mar 25 2025, 12:48 AM IST

ಸಾರಾಂಶ

ಜಂಗಮರು ಬಡತನದಲ್ಲಿದ್ದರೂ ಸಮಾಜದಲ್ಲಿ ಅವರಿಗೆ ಅತ್ಯುನ್ನತ ಸ್ಥಾನವಿದೆ. ಆ ಸ್ಥಾನಕ್ಕೆ ತಕ್ಕಂತೆ ನಾವು ನಮ್ಮ ಸಂಪ್ರದಾಯ, ಸಂಸ್ಕೃತಿ ಕಾಪಾಡಿಕೊಂಡು ಬೆಳೆಸಿಕೊಂಡು ಬರುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಉಳಿಸಿಕೊಂಡರೆ ಮಾತ್ರ ನಮ್ಮ ಸಮಾಜ, ನಮ್ಮ ಧರ್ಮವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಭಾನುವಾರ ಮುರುಘಾಮಠದ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಗುಳೇದಗುಡ್ಡ ತಾಲೂಕು ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ರೇಣುಕಾಚಾರ್ಯರು, ಬಸವೇಶ್ವರರು ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ ತಾಲೂಕು ಮಟ್ಟದ ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ವೀರಶೈವ ಎಲ್ಲ ಒಳಪಂಗಡಗಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಜಂಗಮರ ಮೇಲಿದೆ. ಶ್ರೇಷ್ಠ ಸಮಾಜದಲ್ಲಿ ಹುಟ್ಟಿದ ನಾವು ನಮ್ಮತನವ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿ, ಮಠಾಧೀಶರು ಸಮಾಜಗಳ ಅಭಿವೃದ್ಧಿಗಾಗಿ ತಮ್ಮ ತಂದೆ, ತಾಯಿ, ಸಂಬಂಧಿಕರನ್ನು ತೊರೆದು ಇಡೀ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟಿದ್ದಾರೆ. ಅವರ ತ್ಯಾಗವನ್ನು ನಾವು ಸ್ಮರಿಸೋಣ ಎಂದರು.

ಮರುಘಾಮಠದ ಕಾಶೀನಾಥ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಜಂಗಮ ಸಮಾಜ ಎಲ್ಲರನ್ನು ಅಪ್ಪಿಕೊಂಡು ಬದುಕುವ ಸಮಾಜವಾಗಿದೆ. ಸಮಾಜ ಬಾಂಧವರು ಸಮಷ್ಠಿ ಪ್ರಜ್ಞೆಯಿಂದ ಸಮಾಜದೊಂದಿಗೆ ಮನಸುಗಳ ಕಟ್ಟುವ ಕೆಲಸ ಮಾಡಬೇಕು. ದಾರ್ಶನಿಕರ ಜಯಂತ್ಯುತ್ಸವ ನೆಪದಲ್ಲಿ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿದರು. ಬಾಲಕರ ಸರಕಾರಿ ಪ.ಪೂ. ಕಾಲೇಜಿನ ಶಿಕ್ಷಕ ಸಂಗಯ್ಯಗಣಾಚಾರಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶಿವಾನಂದ ಮಳಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಹಾಂತೇಶ ಸರಗಣಾಚಾರಿ, ಬಂಡಯ್ಯ ಹಿರೇಮಠ, ಮುಪ್ಪಯ್ಯ ಘಂಟಿಮಠ, ಪಡದಯ್ಯ ಕಕ್ಕಯ್ಯನಮಠ, ಚನಬಸಯ್ಯ ಸಿಂದಗಿಮಠ, ಪ್ರಭು ತಟ್ಟಿಮಠ, ಜಗದೀಶ ಕಾರುಡಗಿಮಠ, ಜಗದೀಶ ಸರಗಣಾಚಾರಿ, ಉಮಾಶಂಕರ ಶಿವನಗೌಡರ, ಸಂಗಯ್ಯ ಗವಿಮಠ, ಶಿವಕುಮಾರ ಸಾವಳಗಿಮಠ ಸೇರಿದಂತೆ ಇತರರು ಇದ್ದರು.

.