ಸಾರಾಂಶ
ಶಿಗ್ಗಾಂವಿ: ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಶಿಕ್ಷಣ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಶಿಗ್ಗಾಂವಿ- ಸವಣೂರು ತಾಲೂಕು ಘಟಕದ ಪದಾಧಿಕಾರಿಗಳು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಲ್.ಎಸ್. ಗುರುವೈನವರ ಮಾತನಾಡಿ, ಮನುಷ್ಯನ ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆ ಹೆಚ್ಚಿಸಲು ವಿವಿಧ ಭಾಷೆಗಳ ಕಲಿಗೆ ಅವಕಾಶ ನೀಡುವುದು ಮುಖ್ಯವಾಗಿದೆ ಎಂದರು. ರಾಷ್ಟ್ರೀಯ ಏಕತೆ ಹಿತದೃಷ್ಟಿಯಿಂದ ಹಾಗೂ ಬಹು ಭಾಷೆಗಳ ಕಲಿಕೆ ಉತ್ತೇಜಿಸುವ ಉದ್ದೇಶದಿಂದ ತ್ರಿಭಾಷಾ ಸೂತ್ರ ಜಾರಿಗೆ ತರಲಾಗಿದೆ. ಅನ್ಯ ರಾಜ್ಯಗಳಿಗೆ ಉದ್ಯೋಗಕ್ಕೆ ಹೋದಾಗ ಭಾಷೆ ನೆರವಾಗುತ್ತಿದೆ. ಹೀಗಾಗಿ ಭ್ರಾತೃತ್ವ ಮತ್ತು ಭಾಷಾ ವೈವಿಧ್ಯತೆಯನ್ನು ತ್ರಿಭಾಷಾ ಸೂತ್ರ ಗೌರವಿಸುತ್ತಿದೆ. ದ್ವಿಭಾಷಾ ಸೂತ್ರ ತರುವುದು ಸರಿಯಲ್ಲ ಎಂದರು.ದ್ವಿಭಾಷಾ ಸೂತ್ರದಿಂದ ರಾಜ್ಯದಲ್ಲಿ ಕೆಲಸ ಮಾಡುವ ಸುಮಾರು ೧೫ ಸಾವಿರಕ್ಕಿಂತ ಹೆಚ್ಚಿನ ಶಿಕ್ಷಕರ ಗತಿ ಏನು ಎಂಬ ಚಿಂತೆ ಕಾಡುತ್ತಿದೆ. ಅನುದಾನರಹಿತ ಶಾಲೆಗಳಲ್ಲಿ ಅಲ್ಪವೇತನದಲ್ಲಿ ಈವರೆಗೆ ಬೋಧನೆ ಮಾಡುವ ಶಿಕ್ಷಕರು ಬೀದಿಪಾಲಾಗಲಿದ್ದಾರೆ. ಅಲ್ಲದೆ ಹಿಂದಿ ಭಾಷಾ ಶಿಕ್ಷಕರಾಗುವ ಬಿಇಡಿ ಪದವಿ ಮುಗಿಸಿದ ವಿದ್ಯಾರ್ಥಿಗಳು ನಿರುದ್ಯೋಗಿ ಆಗುತ್ತಿದ್ದಾರೆ. ಹೀಗಾಗಿ ಸರ್ಕಾರದ ದ್ವಿಭಾಷಾ ನೀತಿ ಕೈಬಿಟ್ಟು ಸದ್ಯದಲ್ಲಿರುವ ತ್ರಿಭಾಷಾ ಸೂತ್ರದಲ್ಲಿ ಯಥಾಸ್ಥಿತಿ ಮುಂದುವರಿಸಬೇಕು. ದೇಶದ ಆಡಳಿತ ಭಾಷೆಯಾದ ಹಿಂದಿ ಭಾಷೆ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಸವಣೂರ ತಾಲೂಕು ಘಟಕದ ಅಧ್ಯಕ್ಷ ಬಿ.ಜಿ. ಖೋತ, ಕಾರ್ಯದರ್ಶಿ ಎ. ಮೀರಾಬಾಯಿ, ಖಜಾಂಚಿ ನವೀನ ಹೆಬ್ಬಾರ, ಪ್ರಕಾಶ ಅಗಡಿ, ಮೋಮಿನ, ಪುಷ್ಪಲತಾ ಜಿ. ಸೇರಿದಂತೆ ಶಿಗ್ಗಾಂವಿ- ಸವಣೂರು ತಾಲೂಕಿನ ಪ್ರೌಢಶಾಲೆಗಳ ಶಿಕ್ಷಕರ ಬಳಗದ ಎಲ್ಲ ಸದಸ್ಯರು ಇದ್ದರು.ಆ. 1ರಂದು ವ್ಯಸನಮುಕ್ತ ದಿನಾಚರಣೆಗೆ ಸಿದ್ಧತೆ ಕೈಗೊಳ್ಳಿ
ಹಾವೇರಿ: ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನ ಮುಕ್ತ ದಿನವನ್ನು ಆ. 1ರಂದು ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನಮುಕ್ತ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಆ. 1ರಂದು ಬೆಳಗ್ಗೆ 10 ಗಂಟೆಗೆ ನಗರದ ಬಸವೇಶ್ವರ ವೃತ್ತದಿಂದ ಜಾಗೃತಿ ಜಾಥಾ, ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಆಯೋಜಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಸಿಪಿಐ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಹಾಗೂ ಡಾ. ಮಹಾಂತ ಶಿವಯೋಗಿಗಳ ಕುರಿತು ಉಪನ್ಯಾಸ ನೀಡಲು ಉಪನ್ಯಾಸಕರನ್ನು ನೇಮಕ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಉಪನ್ಯಾಸ ಕೊಡಿಸಲು ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಕರಪತ್ರ ವಿತರಿಸಬೇಕು ಎಂದು ಹಾವೇರಿ ವೈದ್ಯಕೀಯ ಕಾಲೇಜು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್. ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ ಕರಮುಡಿ, ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಸಂತೋಷ ಪವಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.