ಪತ್ರಕರ್ತನ ಸುದ್ದಿಯು ವಿಶ್ವಾಸಾರ್ಹತೆಯಿಂದ ಕೂಡಿರಬೇಕು. ನೇರ, ದಿಟ್ಟ ಹಾಗೂ ಸ್ಪಷ್ಟತೆಯಿಂದ ಕೂಡಿದ ಸುದ್ದಿಗೆ ಹೆಚ್ಚು ಮೌಲ್ಯವಿದೆ. ವಿದ್ಯಾರ್ಥಿಗಳು ಸುಂದರ ಭಾಷೆ ಮತ್ತು ಸಂಕ್ಷಿಪ್ತ ವಾಕ್ಯರಚನೆಯಿಂದ ಸುದ್ದಿ ಕಟ್ಟಿಕೊಡುವುದನ್ನು ರೂಢಿಸಿಕೊಳ್ಳಬೇಕು.
ಧಾರವಾಡ:
ಬರವಣಿಗೆ ಒಂದು ಕಲೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಅದನ್ನು ಕರಗತ ಮಾಡಿಕೊಳ್ಳಲು ಪರಿಶ್ರಮ, ಆಸಕ್ತಿ ಬಹುಮುಖ್ಯ. ಪತ್ರಿಕಾ ಬರವಣಿಗೆ ಸರಳ, ಸ್ಪಷ್ಟ, ಸ್ಫುಟವಾಗಿದ್ದು ಓದುಗರಿಗೆ ಅರ್ಥವಾಗುವಂತೆ ಇರಬೇಕು ಎಂದು ಕನ್ನಡಪ್ರಭ ದಿನಪತ್ರಿಕೆಯ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗದ ಸಭಾಂಗಣದಲ್ಲಿ ಗುರುವಾರ ಜರುಗಿದ ಮುದ್ರಣ ಮಾಧ್ಯಮ ಕುರಿತ ಕಾರ್ಯಾಗಾರದಲ್ಲಿ ಪತ್ರಿಕಾ ಬರವಣಿಗೆ ಕುರಿತು ಮಾತನಾಡಿದ ಅವರು, ಪತ್ರಕರ್ತನ ಸುದ್ದಿಯು ವಿಶ್ವಾಸಾರ್ಹತೆಯಿಂದ ಕೂಡಿರಬೇಕು. ನೇರ, ದಿಟ್ಟ ಹಾಗೂ ಸ್ಪಷ್ಟತೆಯಿಂದ ಕೂಡಿದ ಸುದ್ದಿಗೆ ಹೆಚ್ಚು ಮೌಲ್ಯವಿದೆ. ವಿದ್ಯಾರ್ಥಿಗಳು ಸುಂದರ ಭಾಷೆ ಮತ್ತು ಸಂಕ್ಷಿಪ್ತ ವಾಕ್ಯರಚನೆಯಿಂದ ಸುದ್ದಿ ಕಟ್ಟಿಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಮಾತೃಭಾಷೆಯ ಮಹತ್ವದ ಕುರಿತು ವಿವರಿಸಿದ ಅವರು, ಒಂದು ಉತ್ತಮ ವರದಿಗೆ ವಿಶೇಷ ಅಂಕಣ, ಅಗ್ರ ಲೇಖನ, ಕಥೆ, ಕಾದಂಬರಿ ಹಾಗೂ ಸಿನಿಮಾವಾಗಿ ಪರಿವರ್ತನೆ ಹೊಂದುವ ಶಕ್ತಿಯಿದೆ. ಯಶಸ್ವಿ ವರದಿಗಾರನಾಗಲು ನಿಷ್ಪಕ್ಷಪಾತ, ನಿಷ್ಠುರ ಬರವಣಿಗೆ ಅತೀ ಅವಶ್ಯ. ಹೃದಯಸ್ಪರ್ಶಿ ಶಬ್ಧಗಳ ಬಳಕೆ ಅಗತ್ಯ ಎಂದು ಹೇಳಿದರು.ಪತ್ರಿಕಾ ಬರವಣಿಗೆಯಲ್ಲಿ ಯಥಾಸ್ಥಿತಿ ಮತ್ತು ವಾಸ್ತವಿಕತೆ ಅಗತ್ಯ. ಸುದ್ದಿಯ ಖಚಿತತೆ ಪ್ರಮುಖವಾಗಿದ್ದು, ಊಹೆಗಳಿಗೆ ಅವಕಾಶ ಇರುವುದಿಲ್ಲ. ಪತ್ರಕರ್ತನ ಭಾಷೆ ಸುಂದರವಾಗಿರಬೇಕು ಎಂದ ಅವರು, ಸಾಹಿತಿಗಳ ಬರವಣಿಗೆ ಜನರಿಗೆ ತಲುಪಿಸುವಲ್ಲಿ ಪತ್ರಿಕೋದ್ಯಮದ ಪಾತ್ರ ಅನನ್ಯ. ಆಧಾರ ರಹಿತ ಸುದ್ದಿಗಳ ಪ್ರಸಾರಕ್ಕೆ ಇಲ್ಲಿ ಅವಕಾಶವಿಲ್ಲ. ದೃಢೀಕರಿಸಿದ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯಗಳಿಗೆ ಗೌರವ ನೀಡಬೇಕು. ಸುದ್ದಿಗಳಲ್ಲಿ ಸತ್ಯತೆ ಮತ್ತು ನಿರ್ದಿಷ್ಟತೆ ಅವಶ್ಯಕ. ಒಂದು ಉತ್ತಮ ಲೇಖನಕ್ಕೆ ಪತ್ರಕರ್ತನ ದೃಷ್ಟಿಕೋನವೇ ಮುಖ್ಯವಾಗಿದೆ. ಸುದ್ದಿಯ ಶೀರ್ಷಿಕೆಯು ಪರಿಣಾಮಕಾರಿ ಮತ್ತು ಆಕರ್ಷಕವಾಗಿರಬೇಕು. ಅದು ಸಾಮಾಜಿಕ ಬದಲಾವಣೆ ತರುವ ಶಕ್ತಿ ಹೊಂದಿದೆ ಎಂದು ತಮ್ಮ ವೃತ್ತಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ಈ ವೇಳೆ ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಂ. ಚಂದುನವರ ಅಧ್ಯಕ್ಷತೆ ವಹಿಸಿದ್ದರು. ಶೈನಾಜ್ ನಿರೂಪಿಸಿದರು.